ಜ್ಯೂ ಎನ್‌ಟಿಆರ್ ದೇವರ ಸಿನಿಮಾ ಫೈನಲ್ ಕಲೆಕ್ಷನ್ ಎಷ್ಟು; ನಿರೀಕ್ಷೆಗಿಂತ ಕಡಿಮೆ, ಒಟ್ಟು ಲಾಭ ಗಳಿಕೆ ಇಷ್ಟು
ಜ್ಯೂ ಎನ್‌ಟಿಆರ್ ನಟನೆಯ ದೇವರ ಚಿತ್ರವು ನಿರ್ಮಾಪಕರಿಗೆ 74 ಕೋಟಿ ರೂ. ಲಾಭ ತಂದಿದೆ ಎಂದು ಹೇಳಲಾಗುತ್ತಿದೆ. 2024 ರಲ್ಲಿ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ದೇವರ ಕೂಡಾ ಒಂದಾಗಿದೆ. ಚಿತ್ರದ ಕ್ಲೋಸಿಂಗ್ ಕಲೆಕ್ಷನ್ ಹಾಗೂ ಲಾಭದ ವಿವರ ಇಲ್ಲಿದೆ.
ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಚಿತ್ರವು, ನಿರೀಕ್ಷೆಯಂತೆಯೇ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಲಾಭ ಗಳಿಸಿದೆ. 2024ರಲ್ಲಿ ಟಾಲಿವುಡ್ ನಿರ್ಮಾಪಕರಿಗೆ ಅತಿ ಹೆಚ್ಚು ಲಾಭದಾಯಕ ಚಿತ್ರಗಳಲ್ಲಿ ಒಂದಾಗಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬಂದ ಬಹುನಿರೀಕ್ಷಿತ ಆಕ್ಷನ್ ಮನರಂಜನಾ ಚಿತ್ರವು, ವಿಶ್ವಾದ್ಯಂತ ಬರೋಬ್ಬರಿ 450 ಕೋಟಿ ರೂ.ವರೆಗೆ ಸಂಗ್ರಹಿಸಿದೆ. ಇದರೊಂದಿಗೆ 260 ಕೋಟಿ ರೂ.ಗಳವರೆಗೆ ಷೇರು ಸಂಗ್ರಹವನ್ನು ಗಳಿಸಿದೆ. ಚಿತ್ರ ನಿರ್ಮಾಪಕರು 74 ಕೋಟಿ ರೂಪಾಯಿಗಳವರೆಗೆ ಲಾಭ ಗಳಿಸಿದ್ದಾರೆ ಎಂದು ವರದಿಯಾಗಿದೆ.
ಎರಡು ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಚಿತ್ರದ ಒಟ್ಟು ಸಂಗ್ರಹ 240 ಕೋಟಿ ರೂಪಾಯಿ ಎಂದು ವರದಿಯಾಗಿದೆ. ತೆಲುಗು ರಾಜ್ಯಗಳ ನಂತರ ವಿದೇಶದಲ್ಲಿ ಚಿತ್ರವು 36 ಕೋಟಿ ರೂಪಾಯಿ ಸಂಗ್ರಹಿಸಿದ್ದು ವಿಶೇಷ. ಹಿಂದಿಯಲ್ಲಿ 34 ಕೋಟಿ ರೂ. ಗಳಿಸಿದರೆ, ತಮಿಳುನಾಡು ಮತ್ತು ಕೇರಳದಲ್ಲಿ ಚಿತ್ರತಂಡಕ್ಕೆ ನಿರಾಶೆಯಾಗಿದೆ. ಕೇರಳದಲ್ಲಿ ದೇವರ ಚಿತ್ರ 1 ಕೋಟಿ ಗಡಿಯನ್ನೂ ತಲುಪಿಲ್ಲ.
ವಿಶ್ವದಾದ್ಯಂತ ದೇವರ ಸಿನಿಮಾವು 1000 ಕೋಟಿ ಸಂಗ್ರಹಿಸುವ ಭಾರಿ ನಿರೀಕ್ಷೆ ಇತ್ತು. ಅಲ್ಲದೆ ನಿರ್ಮಾಪಕರಿಗೆ 100 ಕೋಟಿಗೂ ಹೆಚ್ಚು ಲಾಭ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಂಥಾ ನಿರೀಕ್ಷೆಗಳನ್ನು ಚಿತ್ರ ಪೂರೈಸಿಲ್ಲ. ನಿರೀಕ್ಷೆಗಿಂತ ಗಳಿಕೆ ಅರ್ಧದಷ್ಟು ಕಡಿಮೆಯಾಗಿದೆ.
ಹಲವು ಸ್ಟಾರ್‌ಗಳು
ಬಾಲಿವುಡ್ ನಟಿ ಜಾಹ್ನವಿ ಕಪೂರ್, 'ದೇವರ' ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದೇ ವೇಳೆ ಸೈಫ್ ಅಲಿ ಖಾನ್ ಕೂಢಾ ಖಳನಾಯಕನಾಗಿ ನಟಿಸಿದ್ದಾರೆ. ಶ್ರುತಿ ಮರಾಠೆ, ಪ್ರಕಾಶ್ ರಾಜ್ ಮತ್ತು ಶ್ರೀಕಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸೆಪ್ಟೆಂಬರ್ 27ರಂದು ತೆರೆಗೆ ಬಂದಿತ್ತು. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು ಆರು ವರ್ಷಗಳ ನಂತರ ದೇವರ ಚಿತ್ರದ ಮೂಲಕ ಜ್ಯೂ ಎನ್‌ಟಿಆರ್ ಅಬ್ಬರಿಸಿದರು.