ಸಂಗೀತದಲ್ಲಿ ಧಮ್‌ ಇಲ್ಲ, ಸಂಭಾಷಣೆಯಲ್ಲಿ ಸೊಗಡಿಲ್ಲ, ಅಷ್ಟಕ್ಕೂ ‘ಗುಂಟೂರು ಖಾರಂ’ ತ್ರಿವಿಕ್ರಮ್‌ ಸಿನಿಮಾನಾ?
ಕನ್ನಡ ಸುದ್ದಿ  /  ಮನರಂಜನೆ  /  ಸಂಗೀತದಲ್ಲಿ ಧಮ್‌ ಇಲ್ಲ, ಸಂಭಾಷಣೆಯಲ್ಲಿ ಸೊಗಡಿಲ್ಲ, ಅಷ್ಟಕ್ಕೂ ‘ಗುಂಟೂರು ಖಾರಂ’ ತ್ರಿವಿಕ್ರಮ್‌ ಸಿನಿಮಾನಾ?

ಸಂಗೀತದಲ್ಲಿ ಧಮ್‌ ಇಲ್ಲ, ಸಂಭಾಷಣೆಯಲ್ಲಿ ಸೊಗಡಿಲ್ಲ, ಅಷ್ಟಕ್ಕೂ ‘ಗುಂಟೂರು ಖಾರಂ’ ತ್ರಿವಿಕ್ರಮ್‌ ಸಿನಿಮಾನಾ?

Guntur Kaaram Public Review: ಎಸ್ ಥಮನ್ ಸಂಗೀತ ನಿರ್ದೇಶನದಲ್ಲಿ ಧಂ ಇಲ್ಲ. ಸಿನಿಮಾ ಹೇಗಿದೆ ಅಂತ ಕೇಳಿದರೆ, ಮಹೇಶ್ ಬಾಬು ಈ ಸಿನಿಮಾ ಉಳಿಸುವುದಕ್ಕೆ ಎಲ್ಲ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ನಿರ್ದೇಶನವನ್ನೇ ಮರೆತಂತೆ ತ್ರಿವಿಕ್ರಮ್ ಸಿನಿಮಾವನ್ನು ತೆಗೆದಿದ್ದಾರೆ ಎಂಬುದು ಗುಂಟೂರು ಖಾರಂ ಸಿನಿಮಾ ನೋಡಿದವರ ಮಾತು.

ಸಂಗೀತದಲ್ಲಿ ಧಮ್‌ ಇಲ್ಲ, ಸಂಭಾಷಣೆಯಲ್ಲಿ ಸೊಗಡಿಲ್ಲ, ಅಷ್ಟಕ್ಕೂ ‘ಗುಂಟೂರು ಖಾರಂ’ ತ್ರಿವಿಕ್ರಮ್‌ ಸಿನಿಮಾನಾ?
ಸಂಗೀತದಲ್ಲಿ ಧಮ್‌ ಇಲ್ಲ, ಸಂಭಾಷಣೆಯಲ್ಲಿ ಸೊಗಡಿಲ್ಲ, ಅಷ್ಟಕ್ಕೂ ‘ಗುಂಟೂರು ಖಾರಂ’ ತ್ರಿವಿಕ್ರಮ್‌ ಸಿನಿಮಾನಾ?

Guntur Kaaram: ಟಾಲಿವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಮಹೇಶ್‌ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾ ಇಂದು (ಜ.12) ಬಿಡುಗಡೆ ಆಗಿದೆ. ಅದ್ಧೂರಿ ಬಜೆಟ್‌ನ ಈ ಮಾಸ್‌ ಕಮರ್ಷಿಯಲ್‌ ಸಿನಿಮಾಕ್ಕೆ ಅಭಿಮಾನಿ ವಲಯದಿಂದ ಮೆಚ್ಚುಗೆಯೇನೋ ಸಿಕ್ಕಿದೆ. ಆದರೆ, ಸಿನಿಮಾ ನೋಡಿದ ಪ್ರೇಕ್ಷಕ ವರ್ಗದಿಂದ ಮಾತ್ರ ಅಷ್ಟಕ್ಕಷ್ಟೇ ಎಂಬಂಥ ಉತ್ತರ ದಕ್ಕಿದೆ. ಅದರಲ್ಲೂ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಇಷ್ಟೊಂದು ಕೆಟ್ಟ ಸಿನಿಮಾವನ್ನೂ ಮಾಡ್ತಾರಾ ಎಂದೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗುಂಟೂರು ಖಾರಂ ಬಗ್ಗೆ ಶ್ರಿನಿವಾಸ್‌ ಮಠ ಬರಹ

ಇದೀಗ ಶ್ರೀನಿವಾಸ್‌ ಮಠ ಈ ಸಿನಿಮಾ ಹೇಗಿದೆ? ತಮಗೆ ಅನಿಸಿದ್ದೇನು ಎಂಬುದನ್ನು ಬರೆದಿದ್ದಾರೆ. ಇಲ್ಲಿದೆ ಅವರ ಬರಹ. ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ಎರಡು ದಿನ ಬಾಕಿ ಇರುವಂತೆ ಬಿಡುಗಡೆ ಆಗಿರುವ ಗುಂಟೂರು ಖಾರಂ ತೆಲುಗು ಸಿನಿಮಾಗೆ ಭಾರೀ ನೆಗೆಟಿವ್ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್- ಮಹೇಶ್ ಬಾಬು ಕಾಂಬೋದಲ್ಲಿ ಬಂದಿದ್ದ “ಖಲೇಜಾ” ಸಿನಿಮಾ ಫ್ಲಾಪ್ ಆಗಿತ್ತು. ಅದಕ್ಕೂ ಮುಂಚಿನ ‘ಅತಡು’ ಸಿನಿಮಾಗೆ ಉತ್ತಮ ವಿಮರ್ಶೆ ಬಂದಿತ್ತು. ಇದೀಗ ಗುಂಟೂರು ಖಾರಂ ಈ ಹಿಂದಿನ ಖಲೇಜಾಗಿಂತ ಕೆಟ್ಟದಾಗಿದೆ ಎಂಬ ಕಾಮೆಂಟ್ ಅನ್ನು ಸಿನಿಮಾ ನೋಡಿದವರು ಮಾಡುತ್ತಿದ್ದಾರೆ.

ಅಸಲಿಗೆ ಮಹೇಶ್ ಬಾಬು ಸಿನಿಮಾ ಅಂದರೆ ಪಕ್ಕಾ ಪೈಸಾ ವಸೂಲ್ ಎಂಬ ನಂಬಿಕೆ ತೆಲುಗು ಸಿನಿಮಾ ಅಭಿಮಾನಿಗಳಲ್ಲಿದೆ. ಈ ಮಾತನ್ನು ಇತರ ಭಾಷೆಗಳ ಸಿನಿಪ್ರಿಯರು ಸಹ ಒಪ್ಪುತ್ತಾರೆ. ಸಾಮಾನ್ಯವಾಗಿ ಗುರೂಜಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ, ಸಂಭಾಷಣೆ ಇದ್ದರಂತೂ ಹಬ್ಬವೋ ಹಬ್ಬ. ಅವರ ಸಿನಿಮಾಗಳಲ್ಲಿ ಒನ್ ಲೈನರ್‌ಗಳಂತೂ ಅದ್ಭುತವಾಗಿರುತ್ತವೆ. ಫೈಟ್‌ಗಳು, ಸಿನಿಮಾಟೋಗ್ರಫಿ, ಶ್ರೀಮಂತಿಕೆ ದೃಶ್ಯಗಳು ಎಲ್ಲ ಸೇರಿ ಆಹಾ ಓಹೋ ಎಂಬಂತೆ ಚಿತ್ರ ಕಟ್ಟಿ ಕೊಡುವುದು ಅವರ ಶೈಲಿ.

ಸದ್ಯಕ್ಕೆ ಕೇಳಿಬರುತ್ತಿರುವ ಮಾತಿನ ಪ್ರಕಾರ, ಎಸ್ ಥಮನ್ ಸಂಗೀತ ನಿರ್ದೇಶನದಲ್ಲಿ ಧಂ ಇಲ್ಲ. ಸಿನಿಮಾ ಹೇಗಿದೆ ಅಂತ ಕೇಳಿದರೆ, ಮಹೇಶ್ ಬಾಬು ಈ ಸಿನಿಮಾ ಉಳಿಸುವುದಕ್ಕೆ ಎಲ್ಲ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ನಿರ್ದೇಶನವನ್ನೇ ಮರೆತಂತೆ ತ್ರಿವಿಕ್ರಮ್ ಸಿನಿಮಾವನ್ನು ತೆಗೆದಿದ್ದಾರೆ. ಜಗಪತಿ ಬಾಬು, ಮೀನಾಕ್ಷಿ ಚೌಧರಿ, ಜಯರಾಂ, ರಾವ್ ರಮೇಶ್, ಪ್ರಕಾಶ್ ರಾಜ್, ರಮ್ಯಾಕೃಷ್ಣ, ಶ್ರೀಲೀಲಾ ಹೀಗೆ ದೊಡ್ಡ ತಾರಾಗಣವೇ ಇದ್ದರೂ, ಯಾವ ಪಾತ್ರದಲ್ಲೂ ಗಟ್ಟಿತನ ಇಲ್ಲ.

ಪವನ್ ಕಲ್ಯಾಣ್ ಅಭಿನಯದ “ಅಜ್ಞಾತವಾಸಿ” ಚಿತ್ರಕ್ಕೆ ನಿರ್ದೇಶನ ಮಾಡಿದ್ದ ತ್ರಿವಿಕ್ರಮ್ ಶ್ರೀನಿವಾಸ್ ಬಿಡುಗಡೆಯ ಮೊದಲ ದಿನ ಇಂಥದ್ದೇ ನೆಗೆಟಿವ್ ಕಾಮೆಂಟ್ ಕೇಳುವಂತಾಗಿತ್ತು. ಇದೀಗ ಗುಂಟೂರು ಖಾರಂ ಸಿನಿಮಾವನ್ನು ಕಥೆಯೇ ಇಲ್ಲದ ಮಾಡಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ ತೆಲುಗು ಸಿನಿಮಾ ಅಭಿಮಾನಿಗಳು.

ಒಂದು ಅಂದಾಜಿನ ಪ್ರಕಾರ ಗುಂಟೂರು ಖಾರಂ ಬಜೆಟ್ ನೂರೈವತ್ತು ಕೋಟಿ ರೂಪಾಯಿ. ಆದರೆ ಕಲೆಕ್ಷನ್ ದೃಷ್ಟಿಯಿಂದ ಇದು ಮಹೇಶ್ ಬಾಬು ಕೆರಿಯರ್‌ನಲ್ಲೇ ಅತಿ ದೊಡ್ಡ ಫ್ಲಾಪ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇಂಥ ಮಾತುಗಳು ಸಹಜವಾಗಿಯೇ ಮಹೇಶ್ ಬಾಬು- ತ್ರಿವಿಕ್ರಮ್ ಶ್ರೀನಿವಾಸ್ ಅಭಿಮಾನಿಗಳನ್ನು ಕೆರಳಿಸುತ್ತಿದೆ. ಆದರೆ ಸಿನಿಮಾ ನೋಡಿ, ಹೊರಗೆ ಬರುತ್ತಿರುವವರ ಆಕ್ರೋಶ ನೋಡಿದರೆ ಇದ್ಯಾವ ಪರಿಯಲ್ಲಿ ನೆಲ ಕಚ್ಚಬಹುದು ಎಂಬ ಒಂದು ಅಂದಾಜು ಸಿಗುತ್ತದೆ.

ಅಂದ ಹಾಗೆ, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’, ‘ಹನುಮಾನ್’ ಸೇರಿದಂತೆ ಇತರ ತೆಲುಗು ಸಿನಿಮಾಗಳು ಸಹ ಸಂಕ್ರಾಂತಿಗೆ ಬಿಡುಗಡೆ ಆಗಿವೆ. ಆದರೆ ಅತಿ ದೊಡ್ಡ ನಿರೀಕ್ಷೆ ಅಂತ ಇದ್ದದ್ದು ಗುಂಟೂರು ಖಾರಂ ಬಗ್ಗೆಯೇ. ಆದರೆ ಇದು ಹೀಗಾಗಿದೆ. ಇತ್ತ ಯೂಟ್ಯೂಬ್‌ನಲ್ಲಿ, ‘ಎಕ್ಸ್’ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ, ಸೋಷಿಯಲ್ ಮೀಡಿಯಾದ ಇತರ ಸೈಟ್‌ಗಳಲ್ಲಿ ಗುಂಟೂರು ಖಾರಂ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ, ಮೀಮ್ಸ್ ಮಾಡಲಾಗುತ್ತಿದೆ. ಹೀಗೆ ಮುಂದುವರಿದರೆ, ಇದು ಕಲೆಕ್ಷನ್‌ ದೃಷ್ಟಿಯಿಂದಲೂ ಪರಿಣಾಮ ಬೀರುವುದಂತೂ ಕಟ್ಟಿಟ್ಟಬುತ್ತಿ.

ಬರಹ: ಶ್ರೀನಿವಾಸ್‌ ಮಠ

Whats_app_banner