ಪುಷ್ಪ ಶ್ರೀವಲ್ಲಿ ಪ್ರಿಂಟ್ ಇರುವ ನೀಲಿ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ಪುಷ್ಪ–2 ಬಿಡುಗಡೆ ಖುಷಿಯಲ್ಲಿ ನೀಡಿದ್ರು ಸಖತ್ ಪೋಸ್
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ–2‘ ಸಿನಿಮಾ ಇಂದು (ಡಿಸೆಂಬರ್ 5) ಬಿಡುಗಡೆಯಾಗಿದೆ. ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಈ ಸಿನಿಮಾ. ಈ ನಡುವೆ ಪುಷ್ಪ ಬೆಡಗಿ ರಶ್ಮಿಕಾ ಮಂದಣ್ಣ ‘ಪುಷ್ಪ ಶ್ರೀವಲ್ಲಿ‘ ಪ್ರಿಂಟ್ ಇರುವ ನೀಲಿ ಸೀರೆಯುಟ್ಟು ಸಖತ್ ಪೋಸ್ ನೀಡಿರುವ ಫೋಟೊಗಳು ಈಗ ವೈರಲ್ ಆಗಿವೆ.
ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ– 2‘ ಇಂದು (ಡಿಸೆಂಬರ್ 5) ಬಿಡುಗಡೆಯಾಗಿದ್ದು, ಬೆಳಗ್ಗಿನಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಿ ಬುಕ್ಕಿಂಗ್‌ನಿಂದಲೇ ದಾಖಲೆ ನಿರ್ಮಿಸುವ ಸೂಚನೆ ನೀಡಿದೆ ಈ ಸಿನಿಮಾ. ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಈ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು ಸುಳ್ಳಲ್ಲ. ಪುಷ್ಪ ಸಿನಿಮಾದ ಬಗ್ಗೆ ಅಲ್ಲು ಅರ್ಜುನ್ ಜೊತೆ ಸೇರಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ ಚಿತ್ರದ ನಾಯಕಿ ಶ್ರೀವಲ್ಲಿ ಅಕಾ ರಶ್ಮಿಕಾ.
ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಫೋಟೊಗಳನ್ನ ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದ ಬೆಡಗಿ ಇತ್ತೀಚೆಗೆ ನೀಲಿ ಸೀರೆಯುಟ್ಟು ಪೋಸ್ ನೀಡಿರುವ ಫೋಟೊಗಳು ಸಾಕಷ್ಟು ವೈರಲ್ ಆಗಿವೆ. ಈ ಸೀರೆಯಲ್ಲಿ ಒಂದು ವಿಶೇಷವಿದೆ. ಅದೇನೆಂದರೆ ನೀಲಿ ಬಣ್ಣದ ಪ್ಲೇನ್ ಸೀರೆಯಲ್ಲಿ ‘ಪುಷ್ಪ ಶ್ರೀವಲ್ಲಿ‘ ಪ್ರಿಂಟ್ ಇರುವುದನ್ನು ಕಾಣಬಹುದು. ಸೀರೆಯ ಸೆರಗಿನಲ್ಲಿ ಉದ್ದಕ್ಕೆ ‘ಪುಷ್ಪ ಶ್ರೀವಲ್ಲಿ‘ ಎಂದು ಬರೆಯಲಾಗಿದ್ದು, ಸೀರೆಯ ಮೂಲಕವೂ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಎಂದಿದ್ದಾರೆ ಅಭಿಮಾನಿಗಳು.
ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯೊಂದಿಗೆ ಶ್ರೀವಲ್ಲಿ ಪ್ರಿಂಟ್ ಇರುವ ಸೀರೆ ಸೆರಗನ್ನ ಇಳಿ ಬಿಟ್ಟು ಉದ್ದಕ್ಕೆ ಸಖತ್ ಪೋಸ್ ನೀಡಿರುವ ರಶ್ಮಿಕಾ ತಮ್ಮ ಪೋಸ್ಟ್ ಜೊತೆ ಹೀಗೆ ಬರೆದುಕೊಂಡಿದ್ದಾರೆ. ‘ಇನ್ನೆರಡು ದಿನಗಳಲ್ಲಿ ಪುಷ್ಪಾ 2 ಸಿನಿಮಾ ಬಿಡುಗಡೆಯಾಗುತ್ತಿರುವುದರ ಬಗ್ಗೆ ನನಗೆ ಸಾಕಷ್ಟು ಖುಷಿ ಇದೆ. ಆ ಕಾರಣಕ್ಕೆ ನಾನು ಒಂದು ಖುಷಿಯಿಂದ ಕ್ಯಾಮೆರಾಕ್ಕೆ ಪೋಸ್ ನೀಡುತ್ತಿದ್ದೇನೆ. ಪುಷ್ಪಾ 2 ಸಿನಿಮಾ ಇನ್ನೂ ಕೇವಲ 2 ದಿನಗಳಲ್ಲಿ ನಿಮ್ಮ ಬಳಿಗೆ ಬರಲಿದ್ದಾರೆ ಫ್ರೆಂಡ್ಸ್‘ ಎಂದು ಬರೆದುಕೊಂಡಿದ್ದಾರೆ.
ನೀಲಿ ಸೀರೆಯ ಫೋಟೊಗಳನ್ನು ಹಂಚಿಕೊಂಡಿರುವ ರಶ್ಮಿಕಾ ಅಂದದ ಜೊತೆಗೆ ಆಕೆಯ ಸೀರೆಯ ಮೇಲಿರುವ ಪುಷ್ಪಾ ಶ್ರೀವಲ್ಲಿ ಪ್ರಿಂಟ್ ಕೂಡ ಅಭಿಮಾನಿಗಳನ್ನ ಸೆಳೆದಿದೆ. ಪುಷ್ಪ ಭಾಗ –1 ರಲ್ಲಿ ಶ್ರೀವಲ್ಲಿಯಾಗಿ ಅದ್ಭುತ ಅಭಿನಯ ನೀಡಿದ್ದ ರಶ್ಮಿಕಾ ಪುಷ್ಪಾ 2 ಚಿತ್ರದಲ್ಲೂ ತಮ್ಮ ಅದ್ಭುತ ಅಭಿನಯ, ವಿಭಿನ್ನ ಹಾವಭಾವದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಶ್ರೀವಲ್ಲಿ ಪಾತ್ರ ರಶ್ಮಿಕಾಗೆ ತುಂಬಾ ವಿಶೇಷ ಎಂಬುದನ್ನು ನಾವು ಆಕೆಯ ಸೀರೆಯ ಮೂಲಕವೇ ಅರ್ಥ ಮಾಡಿಕೊಳ್ಳಬಹುದು.
ಪ್ರಿ ಬುಕ್ಕಿಂಗ್‌ನಿಂದಲೇ ಗಮನ ಸೆಳೆದಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡುವ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನ ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಫಹದ್ ಫಾಸಿಲ್ ಅಲ್ಲು ಅರ್ಜುನ್‌ಗೆ ಎದುರಾಳಿಯಾಗಿ ನಟಿಸಿದ್ದಾರೆ. 2021ರಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ಪುಷ್ಪಾ 2 ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ಟ್ರೇಡ್ ವಿಶ್ಲೇಷಕರ ಪ್ರಕಾರ ಈ ಸಿನಿಮಾವು ಮೊದಲ ದಿನವೇ 250 ರಿಂದ 275 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಬಿಡುಗಡೆಯಾಗಿದೆ ಎಂದು ವಿರ್ಮಶಕರು ಹೇಳುತ್ತಿದ್ದಾರೆ.