ರಶ್ಮಿಕಾ ಮಂದಣ್ಣ ನಟನೆಯ ಮುಂಬರುವ 6 ಸಿನಿಮಾಗಳು; ಕೊಡಗಿನ ಬೆಡಗಿ ಕಿರಿಕ್ ಪಾರ್ಟಿ ನಟಿ ಸಖತ್ ಬಿಝಿ ಕಣ್ರೀ
Rashmika Mandanna Upcoming Movies: ಕರ್ನಾಟಕದ ವಿರಾಜಪೇಟೆ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣರ ಕೈಯಲ್ಲಿ ಹಲವು ಸಿನಿಮಾಗಳಿವೆ. ಹಿಂದಿ ಮತ್ತು ತೆಲುಗಿನಲ್ಲಿ ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಅಲ್ಲು ಅರ್ಜುನ್ ಮತ್ತು ಧನುಷ್ ಜತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ಮುಂಬರುವ ಆರು ಸಿನಿಮಾಗಳ ವಿವರ ಇಲ್ಲಿದೆ.
ಬೆಂಗಳೂರು: ರಶ್ಮಿಕಾ ಮಂದಣ್ಣರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿರಾಜಪೇಟೆ ಮೂಲದ, ಕಿರಿಕ್ ಪಾರ್ಟಿ ಮೂಲಕ ಬೆಳಕಿಗೆ ಬಂದ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಹಲವು ಆಸಕ್ತಿದಾಯಕ ಪ್ರಾಜೆಕ್ಟ್‌ಗಳಿಗೆ ಸಹಿಹಾಕಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ಮುಂದಿನ ಸಿನಿಮಾಗಳು ಯಾವುವು ಎಂದು ತಿಳಿದುಕೊಳ್ಳೋಣ.
ರಶ್ಮಿಕಾ ಮಂದಣ್ಣ ನಟನೆಯ ಮುಂಬರುವ 6 ಸಿನಿಮಾಗಳು
ಸಿಕಂದರ್
ರಶ್ಮಿಕಾ ಮಂದಣ್ಣ ಇತ್ತೀಚೆಗೆ ಘೋಷಿಸಿದ ರೋಮಾಂಚನಕಾರಿ ಸಿನಿಮಾವಿದು. ನಿರ್ದೇಶಕ ಎ.ಆರ್.ಮುರುಗದಾಸ್ ಈ ಆಕ್ಷನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜತೆ ನಟಿಸಲಿದ್ದಾರೆ. ಪ್ರೀತಮ್ ಅವರ ಸಂಗೀತದೊಂದಿಗೆ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ತಯಾರಿಸುತ್ತಿದ್ದಾರೆ. ಈ ಬಿಗ್‌ಬಜೆಟ್ ಸಿನಿಮಾ 2025ರ ಈದ್ ಹಬ್ಬದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಪುಷ್ಪಾ 2: ದಿ ರೂಲ್
ಸುಕುಮಾರ್ ಅವರ 2022 ರ ಬ್ಲಾಕ್ಬಸ್ಟರ್ ಸಿನಿಮಾ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅವರು ಕ್ರಮವಾಗಿ ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮೊದಲ ಚಿತ್ರದ ಕೊನೆಯಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಈ ವರ್ಷ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15ರಂದು ಪುಷ್ಪ 2 ರಿಲೀಸ್ ಆಗಲಿದೆ. ಈ ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಿದೆ.
ಛವಾ
ಲಕ್ಷ್ಮಣ್ ಉಟೇಕರ್ ಅವರ ಐತಿಹಾಸಿಕ ಪಿರೇಯಿಡ್ ಸಿನಿಮಾ ಛವಾದಲ್ಲಿ ರಶ್ಮಿಕಾ ಜೊತೆಗೆ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ ನಟಿಸಲಿದ್ದಾರೆ. ಈ ಚಿತ್ರವು ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ಆಧರಿಸಿದೆ. ಛವಾ ಸಿನಿಮಾ ಡಿಸೆಂಬರ್ 6ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.
ಕುಬೇರ
ಶೇಖರ್ ಕಮ್ಮುಲಾ ಅವರ ಕುಬೇರ ಚಿತ್ರದಲ್ಲಿ ಧನುಷ್ ಮತ್ತು ನಾಗಾರ್ಜುನ ಅವರೊಂದಿಗೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಥೀಮ್ ಅನ್ನು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಇದು ಶ್ರೀಮಂತರ ಕಥೆ. ಸಂಪತ್ತಿನ ಅಧಿದೇವತೆ ಕುಬೇರನ ಹೆಸರನ್ನೇ ಈ ಸಿನಿಮಾಕ್ಕೆ ನೀಡಲಾಗಿದೆ.
ದಿ ಗರ್ಲ್‌ಫ್ರೆಂಡ್
ಚಿ ಲಾ ಸೌ ಮತ್ತು ಲುಕೆವರಮ್ ಮನ್ಮಥಡು 2 ಸಿನಿಮಾಗಳ ಮೂಲಕ ಖ್ಯಾತಿ ಪಡೆದ ನಿರ್ದೇಶಕ ರಾಹುಲ್ ರವಿಚಂದ್ರನ್‌ರ ದಿ ಗರ್ಲ್ ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ದೀಕ್ಷಿತ್ ಶೆಟ್ಟಿ ನಾಯಕ ನಟರಾಗಿದ್ದಾರೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗಲಿದೆ. ಈ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ.
ರೈನ್ಬೊ
ಈ ಚಿತ್ರ ಸೆಟ್ಟೇರುವುದಿಲ್ಲ ಎಂಬ ವದಂತಿಗಳಿದ್ದವು. ಆದರೆ, ದೇವ್ ಮೋಹನ್ ಕೂಡ ನಟಿಸಿರುವ ಈ ಚಿತ್ರ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಜಸ್ಟಿನ್ ಪ್ರಭಾಕರನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿದೆ. 2023 ರಲ್ಲಿ ಚಿತ್ರವನ್ನು ಘೋಷಿಸುವಾಗ, ರಶ್ಮಿಕಾ ಈ ಸಿನಿಮಾವನ್ನು 'ನನಗೆ ಅತ್ಯಂತ ವಿಶೇಷವಾದ ಸಿನಿಮಾ' ಎಂದು ಹೇಳಿದ್ದರು.