ವದಂತಿ ನಿಜವಾಯ್ತು, ಆ ನಟಿಯ ಜತೆಗೇ ಅಕ್ಕಿನೇನಿ ನಾಗ ಚೈತನ್ಯ ನಿಶ್ಚಿತಾರ್ಥ ನೆರವೇರಿತು, ಉಂಗುರವೂ ಅದಲು ಬದಲಾಯ್ತು
ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿನ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ್ ಮನೆಯಲ್ಲಿ ತೀರಾ ಖಾಸಗಿಯಾಗಿ ನೆರವೇರಿದೆ. ಈ ಜೋಡಿಯ ಎಂಗೇಜ್‌ಮೆಂಟ್‌ನ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Naga Chaitanya Sobhita Engagement: ಕಳೆದೊಂದು ವರ್ಷದಿಂದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಡುವೆ ಹರಿದಾಡಿದ್ದ ಪ್ರೀತಿ ಪ್ರೇಮ ಪ್ರಣಯದ ಗಾಸಿಪ್ ಕೊನೆಗೂ ನಿಜವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸುಗೆ ಫುಲ್‌ಸ್ಟಾಪ್ ಬಿದ್ದಿದೆ. ಅಂದರೆ, ಸಮಂತಾ ರುತ್ ಪ್ರಭು ಅವರಿಂದ ವಿಚ್ಛೇದನ ಪಡೆದ ನಾಗ ಚೈತನ್ಯ, ಇದೀಗ ಶೋಭಿತಾ ಧೂಳಿಪಾಲ ಜತೆಗೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಗುರುವಾರ (ಆಗಸ್ಟ್ 8) ಬೆಳಗ್ಗೆ 9.42ಕ್ಕೆ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ನೆರವೇರಿದೆ. ಈ ಜೋಡಿಯ ಈ ಎಂಗೇಜ್‌ಮೆಂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅಪ್ಪ ನಾಗಾರ್ಜುನ್, 8.8.8 ಅಂಕಿಯೊಂದಿಗೆ ವಿಶೇಷ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ನಾಗಾರ್ಜುನ್ ಪೋಸ್ಟ್
“ನಮ್ಮ ಮಗ ನಾಗ ಚೈತನ್ಯ ಇಂದು ಬೆಳಗ್ಗೆ 9.42 ಕ್ಕೆ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗಿದೆ. ನಾವು ಶೋಭಿತಾ ಅವರನ್ನು ನಮ್ಮ ಕುಟುಂಬಕ್ಕೆ ಖುಷಿಯಿಂದಲೇ ಸ್ವಾಗತಿಸುತ್ತೇವೆ. ಈ ದಂಪತಿಗೆ ಶುಭಾಶಯಗಳು. ಅವರು ತಮ್ಮ ಜೀವನದುದ್ದಕ್ಕೂ ಸಂತೋಷದಿಂದ ಮತ್ತು ಪ್ರೀತಿಯಿಂದ ಇರಬೇಕೆಂದು ನಾನು ಬಯಸುತ್ತೇನೆ. ಗಾಡ್ ಬ್ಲೆಸ್ ಯೂ.. 8.8.8.. ಇದು ಅನಂತ ಪ್ರೀತಿಯ ಆರಂಭ" ಎಂದು ಪೋಸ್ಟ್ ಮಾಡಿದ್ದಾರೆ.
ಖಾಸಗಿಯಾಗಿ ನಡೆದ ನಿಶ್ಚಿತಾರ್ಥ
ನಾಗ ಚೈತನ್ಯ ಮತ್ತು ಶೋಭಿತಾ ಲವ್ ರಿಲೇಶನ್‌ಶಿಪ್‌ನಲ್ಲಿದ್ದಾರೆ, ಡೇಟ್ ಮಾಡುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿಗೆ ಟಾಲಿವುಡ್ ಅಂಗಳದಲ್ಲಿ ರೆಕ್ಕೆ ಪುಕ್ಕ ಬಂದಿದ್ದವು. ಆದರೆ, ಆ ಸಂಬಂಧದ ಬಗ್ಗೆ ನಾಗಚೈತನ್ಯ ಆಗಲಿ, ಶೋಭಿತಾ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ನಾಗ ಚೈತನ್ಯ- ಶೋಭಿತಾ ಧೂಳಿಪಾಲ ನಿಶ್ಚಿತಾರ್ಥವೇ ನಡೆದುಹೋಗಿದೆ. ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿದೆ.
ಬೋಲ್ಡ್ ಹೀರೋಯಿನ್ ಶೋಭಿತಾ..
ಗೂಢಚಾರಿ ಚಿತ್ರದ ಮೂಲಕ ತೆಲುಗಿನಲ್ಲಿ ಶೋಭಿತಾ ಧೂಳಿಪಾಲ ನಾಯಕಿಯಾಗಿ ಪರಿಚಯವಾದರು. ಅದರ ನಂತರ ಮೇಜರ್ ಮತ್ತು ಪೊನ್ನಿಯನ್ ಸೆಲ್ವನ್ ಚಿತ್ರಗಳಲ್ಲಿ ನಟಿಸಿದರು. ಮೇಡ್ ಇನ್ ಹೆವೆನ್ ಮತ್ತು ದಿ ನೈಟ್ ಮ್ಯಾನೇಜರ್‌ನಂತಹ ವೆಬ್ ಸರಣಿಗಳಲ್ಲಿ ಸೂಪರ್ ಹಾಟ್ ಶೋ ಮೂಲಕ ಎಲ್ಲರ ಗಮನ ಸೆಳೆದು ಬೋಲ್ಡ್ ನಾಯಕಿಯಾಗಿಯೂ ಕಾಣಿಸಿಕೊಂಡರು. ಇತ್ತ ನಾಗ ಚೈತನ್ಯ ಸದ್ಯ ತಾಂಡೇಲ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಚಂದು ಮೊಂಡೇಟಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ತಾಂಡೇಲ್ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ.