Ram Charan: 7.5 ಕೋಟಿ ರೂನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ ನಟ ರಾಮ್ ಚರಣ್, ಹೀಗಿದೆ ನೋಡಿ ಲಗ್ಷುರಿ ಕಾರು
Ram Charan Buys Rolls Royce Spectre Car: ಟಾಲಿವುಡ್ ನಟ ರಾಮ್ ಚರಣ್ ಮನೆಗೆ ದುಬಾರಿ ಕಾರೊಂದು ಆಗಮಿಸಿದೆ. ಸುಮಾರು ಏಳೂವರೆ ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ್ದಾರೆ. ಗುರುವಾರ ಅನಂತ್ ಅಂಬಾನಿ ಮದುವೆಗೆ ಹೋಗಿದ್ದ ರಾಮ್ ಚರಣ್ ತನ್ನ ಈ ಹೊಸ ಕಾರಿನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಬೆಂಗಳೂರು: ಮೆಗಾ ಹೀರೋ ರಾಮ್ ಚರಣ್ ಹೊಸ ಕಾರು ಖರೀದಿಸಿದ್ದಾರೆ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಭಾರತದಲ್ಲಿ ಕೇವಲ ಇಬ್ಬರಲ್ಲಿ ಮಾತ್ರ ಇಂಥ ಕಾರಿದೆ. ಅವರಲ್ಲಿ ರಾಮ್ ಚರಣ್ ಒಬ್ಬರು. ಶುಕ್ರವಾರ ನಡೆಯಲಿರುವ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಭಾಗವಹಿಸಲು ರಾಮ್ ಚರಣ್ ಗುರುವಾರ ಮುಂಬೈಗೆ ತೆರಳಿದ್ದಾರೆ. ರಾಮಚರಣ್ ಅವರು ಪತ್ನಿ ಉಪಾಸನಾ ಮತ್ತು ಮಗಳು ಕ್ಲಿಂಕಾರ ಅವರೊಂದಿಗೆ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ವತಃ ರಾಮ್ ಚರಣ್ ಈ ಕಾರು ಓಡಿಸುತ್ತಿದ್ದರು. ಈ ಕಾರಿನ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚೆನ್ನೈನ ಭಾಷ್ಯಂ ಯುವರಾಜ್ ಬಳಿಯೂ ಈ ಕಾರಿದೆ.
ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನ ದರವೆಷ್ಟು?
ಸದ್ಯ ಮಾರುಕಟ್ಟೆಯಲ್ಲಿ ಈ ಕಾರಿನ ದರ ಸುಮಾರು 7.5 ಕೋಟಿ ರೂಪಾಯಿ ಇದೆ. ಚರಣ್ ಬಳಿ ಇರುವ ಎಲ್ಲಾ ಕಾರುಗಳಲ್ಲಿಯೇ ಇದು ಅತ್ಯಂತ ದುಬಾರಿ ಕಾರೆಂದು ಹೇಳಲಾಗಿದೆ. ಈ ಕಾರನ್ನು ಖರೀದಿಸಿದ ಭಾರತದ ಸೆಲೆಬ್ರಿಟಿಗಳಲ್ಲಿ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಮೊದಲನೆ ವ್ಯಕ್ತಿ ಯಾರೆಂಬ ವಿವರ ಸದ್ಯ ಲಭ್ಯವಿಲ್ಲ. ದಕ್ಷಿಣ ಭಾರತದಲ್ಲಿ ಇಂತಹ ಕಾರು ಖರೀದಿಸಿದ ಮೊದಲಿಗ ಎಂದು ಕೆಲವು ವರದಿಗಳು ಹೇಳಿವೆ. ಆದರೆ, ಚೆನ್ನೈನ ಭಾಷ್ಯಂ ಯುವರಾಜ್ ಈಗಾಗಲೇ ರೋಲ್ಸ್ ರಾಯ್ಸ್ ಸ್ಪಕ್ಟರ್ ಕಾರಿನ ಮಾಲೀಕರಾಗಿದ್ದಾರೆ.
ರಾಮ್ ಚರಣ್ ಬಳಿ ಇರುವ ಕಾರುಗಳು
ರಾಮ್ ಚರಣ್ ಈಗಾಗಲೇ ವಿವಿಧ ಮಾದರಿಯ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆಸ್ಟೊ ಮಾರ್ಟಿನ್ ವಾಂಟೇಜ್ (3.2 ಕೋಟಿ), ಫೆರಾರಿ ಫೋರ್ಟೊಫಿನೊ (ಮೂರೂವರೆ ಕೋಟಿ), ರೇಂಜ್ ರೋವರ್ ಆಟೋಬಯೋಗ್ರಫಿ (2.75 ಕೋಟಿ) ಮತ್ತು ಮರ್ಸಿಡಿಸ್ ಮೇಬ್ಯಾಕ್ (ನಾಲ್ಕು ಕೋಟಿ) ನಂತಹ ಟಾಪ್ ಬ್ರಾಂಡ್‌ಗಳ ಕಾರುಗಳನ್ನು ಚರಣ್ ಖರೀದಿಸಿದ್ದಾರೆ.
ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನ ಬಗ್ಗೆ
ರೋಲ್ಸ್ ರಾಯ್ಸ್ ಕಂಪನಿಯು ಸ್ಪೆಕ್ಟರ್ ಎಂಬ ಕಾರಿನ ಮೂಲಕ ಎಲೆಕ್ಟ್ರಿಕ್ ಕಾರುಗಳ ಜಗತ್ತಿಗೆ ಪ್ರವೇಶಿಸಿದೆ. 2030ರ ವೇಳೆಗೆ ತನ್ನೆಲ್ಲ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿಸುವ ಗುರಿಯನ್ನು ಕಂಪನಿ ಹೊಂದಿದೆ. ಈ ಕಾರು ಒಂದು ಫುಲ್ ಚಾರ್ಜ್‌ಗೆ ಸುಮಾರು 530 ಕಿ.ಮೀ. ರೇಂಜ್ ನೀಡುತ್ತದೆ. ಗರಿಷ್ಠ 578.63 ಬಿಎಚ್‌ಪಿ ಪವರ್ ನೀಡುತ್ತದೆ. 102 ಕಿಲೋವ್ಯಾಟ್‌ನ ಬ್ಯಾಟರಿ ಕೆಪಾಸಿಟಿ ಇದೆ. ದೆಹಲಿ ಆನ್‌ರೋಡ್ ದರ ಸುಮಾರು 7.5 ಕೋಟಿ ರೂಪಾಯಿ ಇದೆ. ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ಈ ದರ ಇನ್ನಷ್ಟು ಹೆಚ್ಚಾಗಬಹುದು.
ಅಂಬಾನಿ ಮದುವೆ
ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ಜುಲೈ 12ರಂದು ನಡೆಯಲಿದೆ. ಹಲವು ಸೆಲೆಬ್ರಿಟಿಗಳು ಈ ಮದುವೆಗೆ ಆಗಮಿಸುತ್ತಿದ್ದಾರೆ. ರಾಮ್ ಚರಣ್ ಕೂಡ ಅಂಬಾನಿ ಕುಟುಂಬದ ಮದುವೆಗೆ ತೆರಳಿದ್ದಾರೆ.
ಗೇಮ್ ಚೇಂಜರ್ ಶೂಟಿಂಗ್
ರಾಮಚರಣ್ ಸದ್ಯ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು 200 ಕೋಟಿ ಬಜೆಟ್‌ನಲ್ಲಿ ಕಾಲಿವುಡ್‌ನ ಟಾಪ್ ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ ವಾದ ಗೇಮ್ ಚೇಂಜರ್‌ನಲ್ಲಿ ರಾಮ್ ಚರಣ್ ಪಾತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಈ ಚಿತ್ರದಲ್ಲಿ ಚರಣ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಅಂಜಲಿ, ನವೀನ್‌ಚಂದ್ರ ಮತ್ತು ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಥಮನ್ ಸಂಗೀತವಿರುವ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ.