Ileana D'Cruz: ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ; ಮಡಿಲು ತುಂಬಿದ ಮುದ್ದು ಮಗನಿಗೆ ಯೋಧ ಎಂದು ನಾಮಕರಣ
ಬಹುಭಾಷಾ ನಟಿ ಇಲಿಯಾನಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ತಾಯ್ತನದ ಖುಷಿಯಲ್ಲಿದ್ದ ಅವರ ಮಡಿಲಿಗೀಗ ಮುದ್ದಾದ ಗಂಡು ಮಗುವಿನ ಆಗಮನವಾಗಿದೆ. ಮಗುವಿನ ಫೋಟೋ ಜತೆಗೆ ಹೆಸರನ್ನೂ ಹಂಚಿಕೊಂಡಿದ್ದಾರೆ.
Ileana D'Cruz: ಬಹುಭಾಷಾ ನಟಿ ಇಲಿಯಾನಾ ಡಿಕ್ರೋಸ್ ಮಡಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. ಆಗಸ್ಟ್ 1ರಂದು ಇಲಿಯಾನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಆ ಸಿಹಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿಂದ ತಾಯ್ತನದ ಖುಷಿ ಅನುಭವಿಸುವ ಪ್ರತಿ ಸಣ್ಣ ಸಣ್ಣ ಕ್ಷಣವನ್ನೂ ಆನಂದಿಸುತ್ತ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಒಂದೊಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದರು ಇಲಿಯಾನಾ. ಇದೀಗ ಸಂಭ್ರಮ ಮುಗಿಲು ಮುಟ್ಟಿದೆ. ಮಗನ ಆಗಮನದಿಂದ ಇಲಿಯಾನಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಮಗುವಿನ ತಂದೆ ಯಾರೆಂಬ ವಿಚಾರವನ್ನು ಇಲಿಯಾನಾ ಈವರೆಗೂ ರಿವೀಲ್ ಮಾಡಿಲ್ಲ.
ಹೃದಯ ತುಂಬಿ ಬಂದಿದೆ
"ಈ ಜಗತ್ತಿಗೆ ನಮ್ಮ ಡಾರ್ಲಿಂಗ್ ಮಗನನ್ನು ಸ್ವಾಗತಿಸಲು ನನಗೆ ಪದಗಳೇ ಸಾಲುತ್ತಿಲ್ಲ. ಈ ಖುಷಿಗೆ ನಮ್ಮ ಹೃದಯ ತುಂಬಿ ಬಂದಿದೆ" ಎಂದು ಇನ್ಸ್ಟಾಗ್ರಾಂನಲ್ಲಿ ಮಗನ ಫೋಟೋ ಸಮೇತ ಸಂತಸ ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲ ಮಗನಿಗೂ ಈಗಾಗಲೇ ಹೆಸರನ್ನೂ ಅಂತಿಮ ಮಾಡಿದ್ದು, ಅದನ್ನೂ ಸಹ ರಿವೀಲ್ ಮಾಡಿದ್ದಾರೆ. ಇಲಿಯಾನಾ ಅವರ ಈ ಪೋಸ್ಟ್ಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಹರಸಿದ್ದಾರೆ.
ಕಾಮೆಂಟ್ಗಳೂ ಬರಲಾರಂಭಿಸಿವೆ. 'ಈ ಹೊಸ ಪ್ರಯಾಣಕ್ಕೆ ಶುಭಾಶಯಗಳು ಇಲಿಯಾನಾ' ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು 'ಎಲ್ಲರಿಗೂ ತಾಯಿಯಾಗುವ ಭಾಗ್ಯ ಸಿಗುವುದಿಲ್ಲ. ನಿಮಗೆ ಅರ್ಥವಾಗಿದೆ, ನೀವು ಪುಣ್ಯವಂತರು" ಎಂಬ ಶುಭ ಸಂದೇಶಗಳೂ ಬಂದಿವೆ.
ಹೆಸರಿನ ಅರ್ಥವೇ ವಿಭಿನ್ನ
ಅಂದಹಾಗೆ, ಮಗುವಿಗೆ ಈಗಾಗಲೇ ನಾಮಕರಣವನ್ನೂ ಮಾಡಿರುವ ಇಲಿಯಾನಾ, ಕೊವಾ ಫೊನಿಕ್ಸ್ ಡೊಲಾನ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿನ ಅರ್ಥವೂ ಅಷ್ಟೇ ಮಜವಾಗಿದೆ. thebump.com ಪ್ರಕಾರ ಕೊವಾ ಫೊನಿಕ್ಸ್ ಡೊಲಾನ್ ಹೆಸರಿನ ಅರ್ಥ ವೀರ ಅಥವಾ ಧೀರ. ಇದು ಫೆಸಿಫಿಕ್ ಐಲ್ಯಾಂಡರ್ ಮೂಲದ ಹೆಸರಾಗಿದೆ. ಹವಾಯಿ ಭಾಗದಲ್ಲಿ ಎತ್ತರದ ಮರಕ್ಕೂ ಕೊವಾ ಎಂದು ಕರೆಯುತ್ತಾರೆ. ಇದಷ್ಟೇ ಅಲ್ಲದೆ ಕೊವಾ ಹೆಸರು ಶೌರ್ಯ, ಧೈರ್ಯ ಮತ್ತು ನಿರ್ಭಯತೆಯನ್ನೂ ಸೂಚಿಸುತ್ತದೆ.
ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ