Razakar Review: ‘ರಜಾಕರ್’ ಸಿನಿಮಾ ಬಗ್ಗೆ ಯಾಕಿಷ್ಟು ಟೀಕೆ? ಇದು ಮುಸ್ಲಿಂ ವಿರೋಧಿ ಚಿತ್ರವೇ? ಅಂಥದ್ದೇನಿದೆ ಈ ಸಿನಿಮಾದಲ್ಲಿ?
ತೆಲುಗಿನಲ್ಲಿ ಬಿಡುಗಡೆಗೆ ಕೇವಲ ಒಂದೇ ದಿನ ಇದೇ ಎನ್ನುವಂತೆ ತೆಲಂಗಾಣ ಕೋರ್ಟ್‌ನಿಂದ ರಜಾಕರ್ ಚಿತ್ರ ಬಿಡುಗಡೆಗೆ ಸಮ್ಮತಿ ಸಿಕ್ಕಿತ್ತು. ಈ ಚಿತ್ರದಲ್ಲಿ ಮುಸ್ಲಿಂ ವಿರೋಧಿ ಅಂಶಗಳಿವೆ ಎಂದು ಟೀಕೆಗಳು ಕೇಳಿಬಂದಿದ್ದವು. ಅಷ್ಟಕ್ಕೂ ಏನಿದು ಸಿನಿಮಾ? ಹೀಗಿದೆ ವಿವರ ಸಹಿತ ವಿಮರ್ಶೆ.
Razakar Review: ರಜಾಕರ್ ಸದ್ಯ ತೆಲುಗು ನಾಡಲ್ಲಿ ಸುದ್ದಿಯಲ್ಲಿರುವ ಪಿರಿಯಾಡಿಕ್ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದರೂ, ಒಂದಷ್ಟು ವಿರೋಧವನ್ನು ಕಟ್ಟಿಕೊಂಡೇ ಈ ಸಿನಿಮಾ ಚಿತ್ರಮಂದಿರಕ್ಕೆ ಬರಬೇಕಾಯ್ತು. ಅಂದಹಾಗೆ ಈ ಸಿನಿಮಾ ಹೈದರಾಬಾದ್ ವಿಮೋಚನಾ ಕಾಲಘಟ್ಟದಲ್ಲಿ ಅಂದರೆ 1947ರ ಬಳಿಕ ನಡೆದ ನೈಜ ಘಟನೆ ಆಧರಿತ ಸಿನಿಮಾ. ಮೂಲ ಕಥೆಯನ್ನು ಈಗಿನ ಕಾಲಘಟ್ಟಕ್ಕೆ ಒಪ್ಪಿಸುವ ಕೆಲಸವನ್ನು ಅಷ್ಟೇ ಸುಸೂತ್ರವಾಗಿ ನಿಭಾಯಿಸಿದ್ದಾರೆ ನಿರ್ದೇಶಕ ಯಾತ ಸತ್ಯನಾರಾಯಣ. ನೆನಪಿರಲಿ, ಈ ಸಿನಿಮಾದಲ್ಲಿ ಮುಸ್ಲಿಂ ವಿರೋಧ ಅಂಶಗಳಿವೆ ಎಂದೂ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು! ಅದೆಲ್ಲವನ್ನು ಗೆದ್ದು ಚಿತ್ರ ಬಿಡುಗಡೆಯಾಗಿದೆ.
ಸ್ವಾತಂತ್ರ್ಯಾ ನಂತರದ ಕಥೆ
ಅಷ್ಟಕ್ಕೂ ಈ ರಜಾಕರ್ ಅಂದ್ರೆ ಏನು? ಈ ಚಿತ್ರದಲ್ಲೇನಿದೆ? ಹೈದರಾಬಾದ್ ವಿಮೋಚನೆ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ರಜಾಕಾರರ ದಬ್ಬಾಳಿಕೆಯನ್ನು ಹುಟ್ಟಡಗಿಸುವ ಕಥೆಯೇ ಹೈಲೈಟ್. ಇದಷ್ಟೇ ಅಲ್ಲ ಇನ್ನೂ ಹತ್ತಾರು ಅಂಶಗಳನ್ನು ಈ ಸಿನಿಮಾದ ಮೂಲಕ ಹಿಂದಿನ ಅಸಲಿ ಘಟನೆಯನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕರು. ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಲು ಖಾಸಿಂ ರಜ್ವಿ ಮಾಡಿದ ದುಷ್ಕೃತ್ಯಗಳೇನು ಎಂಬುದಕ್ಕೂ ಇಲ್ಲಿ ಸಾಕ್ಷ್ಯ ಹಿಡಿದು ತಂದಿದ್ದಾರೆ ನಿರ್ದೇಶಕರು. ಕರ್ನಾಟಕದ ಕಲಬುರಗಿ, ಬೀದರ್ ಭಾಗದಲ್ಲಿ ನಡೆದ ಹೋರಾಟವೂ ಸಿನಿಮಾದಲ್ಲಿದೆ. ಜತೆಗೆ ಸ್ಟ್ಯಾಂಡ್ ಸ್ಟಿಲ್ ಒಪ್ಪಂದದ ಬಗ್ಗೆಯೂ ವಿವರ ನೀಡಿದ್ದಾರೆ.
ಭಾರತ ಸರ್ಕಾರದ ರಣತಂತ್ರ ಹೇಗಿತ್ತು?
ನಿಜಾಮರ ಆಡಳಿತದ ವಿರುದ್ಧ ಹೋರಾಡಿದ ಚಾಕಲಿ ಐಲಮ್ಮ, ರವಿ ನಾರಾಯಣ ರೆಡ್ಡಿ, ಶೋಯಬುಲ್ಲಾ ಖಾನ್‌ರಂತಹವರನ್ನು ಹೇಗೆ ಮತ್ತು ಯಾಕೆ ಬರ್ಬರವಾಗಿ ಕೊಲ್ಲಲಾಯಿತು? ಖಾಸಿಂ ರಜ್ವಿ ಹಿಂದೂಗಳ ಮೇಲಿನ ದೌರ್ಜನ್ಯ ಹೇಗಿತ್ತು? ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಾರ್ಯಾಚರಣೆ ಹೇಗೆ ನಡೆಯಿತು? ಖಾಸಿಂ ರಜ್ವಿ ಪಾಕಿಸ್ತಾನದೊಂದಿಗೆ ಕೈ ಜೋಡಿಸಿದ್ದು ಹೇಗೆ? ಅಂತಿಮವಾಗಿ, ಪಾಕಿಸ್ತಾನಕ್ಕೆ ಪಲಾಯನ ಮಾಡಲು ಬಯಸಿದ ಖಾಸಿ ರಜ್ವಿಗೆ ಏನಾಯಿತು? ಹೈದರಾಬಾದ್ ರಾಜ್ಯ ಹೇಗೆ ಭಾರತ ಸರ್ಕಾರಕ್ಕೆ ವಿಲೀನಗೊಂಡಿತು? ಹೀಗೆ ಹತ್ತಾರು ಪ್ರಶ್ನೆಗಳಿಗೆ ರಜಾಕರ್ ಸಿನಿಮಾದಲ್ಲಿ ಉತ್ತರ ನೀಡಿದ್ದಾರೆ ನಿರ್ದೇಶಕರು.
ರಜಾಕರ್ ಚಿತ್ರದಲ್ಲಿ ರಕ್ತಪಾತದ ಕಥೆ
1947ರ ಸ್ವತಂತ್ರ ಭಾರತದ ಬಳಿಕ ಭಾರತ ಒಕ್ಕೂಟಗಳಿಗೆ ಸೇರಲು ನೂರಾರು ಸಂಸ್ಥಾನಗಳು ನಕಾರ ವ್ಯಕ್ತಪಡಿಸಿದ್ದವು, ಆ ಪೈಕಿ ಹೈದರಾಬಾದ್ ಸಂಸ್ಥಾನವೂ ಸೇರ್ಪಡೆಗೆ ಹಿಂದೇಟು ಹಾಕಿತ್ತು. ಆಗ ಹುಟ್ಟಿಕೊಂಡದ್ದೇ ಈ ರಜಾಕಾರ್ ಆರ್ಮಿ. ಭಾರತದ ಸ್ವಾತಂತ್ರ್ಯ ಮತ್ತು ಹೈದರಾಬಾದ್ ರಾಜ್ಯದ ಇತಿಹಾಸದ ಕಥೆಯನ್ನು ಚಾಕಲಿ ಐಲಮ್ಯನ ಮೂಲಕ ಹೇಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರದ ದ್ವಿತಿಯಾರ್ಧದಲ್ಲಿ ತುಸು ಕುತೂಹಲದ ಓಟಕ್ಕಿಳಿಯುವ ಈ ರಜಾಕರ್, ಹಿಂಸೆಯನ್ನೇ ಆವಾಹಿಸಿಕೊಂಡಂತೆ ಕಾಣುತ್ತದೆ. ಅತಿಯಾದ ರಕ್ತಪಾತ ನೋಡುಗನ ಮನಸ್ಸನ್ನು ಕದಲಿಸುತ್ತದೆ.
ಏರಿಳಿತದ ಹಾದಿಯಲ್ಲಿ ಕಾಣುವ ಉಬ್ಬು ತಗ್ಗು
ಇನ್ನು ಕೆಲವೆಡೆ ತೆಲಂಗಾಣದ ಸಶಸ್ತ್ರ ಹೋರಾಟದ ಪರವಾಗಿ ನಿಂತ ಕಮ್ಯುನಿಸ್ಟರ ಇತಿಹಾಸವನ್ನು ನೇರವಾಗಿ ತೋರಿಸದೆ, ಅವರನ್ನು ದೂಷಿಸುವ ಡೈಲಾಗ್‌ಗಳು ಸಿನಿಮಾದಲ್ಲಿವೆ. ಇತಿಹಾಸ ತಿಳಿದವರಿಗೆ ಇಲ್ಲಿ ಯಾವುದೋ ಅಜೆಂಡಾ ಇದೆ ಎಂಬ ಭಾವನೆ ಕಾಡುವಂತೆ ಮಾಡುತ್ತದೆ. ಒಂದೊಳ್ಳೆಯ ಕಥೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಉಬ್ಬು ತಗ್ಗುಗಳು ಕಣ್ಣಿಗೆ ಬಿಳ್ಳುತ್ತವೆ. ಇತಿಹಾಸದ ಏರಿಳಿತವೂ ಕಾಣಿಸುತ್ತದೆ. ಖಾಸಿ ರಜ್ವಿಯ ದುಷ್ಕೃತ್ಯಗಳು, ಹೈದರಾಬಾದ್ ವಿಮೋಚನೆ ಮತ್ತು ವಲ್ಲಭ್ ಭಾಯಿ ಪಟೇಲ್ ತೆಗೆದುಕೊಂಡ ಮಿಲಿಟರಿ ಕ್ರಮಗಳು ಇಂದಿನ ಪೀಳಿಗೆಗೆ ಗೊತ್ತಿಲ್ಲದ ಇತಿಹಾಸ. ಅದನ್ನು ಅಷ್ಟೇ ಯಶಸ್ವಿಯಾಗಿ ದಾಟಿಸಿದ್ದಾರೆ ನಿರ್ದೇಶಕರು.
ಚಿತ್ರದ ಕಥೆ ಒಂದು ಕಡೆ ನಾಯಕನಂತೆ ಪಾತ್ರವಹಿಸಿದರೆ, ಆ ನಾಯಕನಿಗೆ ಪಿಲ್ಲರ್‌ಗಳ ರೀತಿಯಲ್ಲಿ ಅಚ್ಚುಕಟ್ಟಾದ ನಟನೆ ನೀಡಿದೆ ಚಿತ್ರದ ಪಾತ್ರವರ್ಗ. ಖಾಸಿಂ ರಜ್ವಿಯಾಗಿ ರಾಜ್ ಅರ್ಜುನ್ ಮನೋಜ್ಞ ಅಭಿನಯ ನೀಡಿದರೆ, ನಿಜಾಮರ ದೊರೆಯಾಗಿ ಮಕರಂದ್ ದೇಶಪಾಂಡೆ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತಾರೆ. ಹೋರಾಟಗಾರನಾಗಿ ಬಾಬಿ ಸಿಂಹ ಮತ್ತು ಜಾನ್ ವಿಜಯ್ ಖಡಕ್ ಆಗಿದ್ದಾರೆ. ವಲ್ಲಭಾಯಿ ಪಟೇಲ್ ಆಗಿ ತೇಜ್ ಸಪ್ರು ಪಾತ್ರಗಳನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರೆ. ಭೀಮ್ ಸಿಸೆರೊಲಿಯೊ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಜೀವಾಳವಾಗಿದೆ.