RRR ಹಾದಿ ಮೇಲೆ ಕಣ್ಣಿಟ್ಟ ಜೂ ಎನ್‌ಟಿಆರ್ ‘ದೇವರ’; 6 ಲಕ್ಷ ಟಿಕೆಟ್ ಬಿಕರಿ, ಮೊದಲ ದಿನವೇ 100 ಕೋಟಿಯ ಗುರಿ!
Devara Part 1 advance Booking: ಜೂನಿಯರ್ ಎನ್‌ಟಿಆರ್ ನಟನೆಯ ಬಹುನಿರೀಕ್ಷಿತ ದೇವರ ಪಾರ್ಟ್ 1 ಸಿನಿಮಾ, ಇನ್ನೇನು ಸೆ. 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿಯೂ ಕೋಟಿ ಕೋಟಿ ಬಾಚಿಕೊಂಡಿದೆ ಈ ಸಿನಿಮಾ.
Devara Part 1 Advance Booking: ಟಾಲಿವುಡ್‌ನಲ್ಲಿ ಸದ್ಯ ದೇವರ ಸಿನಿಮಾದ್ದೇ ಸುದ್ದಿ. ಆರ್‌ಆರ್‌ಆರ್ ಸಿನಿಮಾ ಬಳಿಕ ಜೂನಿಯರ್ ಎನ್‌ಟಿಆರ್ ತೆರೆಮೇಲೆ ಗ್ರ್ಯಾಂಡ್ ಆಗಿಯೇ ಎಂಟ್ರಿ ನೀಡುತ್ತಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕವೇ ನಿರೀಕ್ಷೆ ದುಪ್ಪಟ್ಟಾಗಿಸಿಕೊಂಡಿರುವ ಈ ಸಿನಿಮಾ, ಇನ್ನೇನು ಸೆ. 27ರ ಶುಕ್ರವಾರ ಜಗತ್ತಿನಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಮೂಲ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ. ಹೀಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಬಿಡುಗಡೆ ಮುನ್ನವೇ ಕೋಟಿ ಕೋಟಿ ಬಾಚಿಕೊಂಡಿದೆ. ಟಿಕೆಟ್ ಬುಕಿಂಗ್ ವಿಚಾರದಲ್ಲೂ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲೂ ಈ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದಿರುವ ದೇವರ ಸಿನಿಮಾ ದೊಡ್ಡ ಬಜೆಟ್‌ನ ಸಿನಿಮಾ. ಅದ್ಧೂರಿಯಾಗಿಯೇ ಮೂಡಿಬಂದ ಈ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಬಾಲಿವುಡ್ ನಟ ಸೈಫ್ ಅಲಿಖಾನ್ ಖಳನಾಗಿ ಅಬ್ಬರಿಸಿದರೆ, ಬಿಟೌನ್ ಚೆಲುವೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಮೊದಲ ಸಲ ತೆಲುಗು ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಜೋಡಿಯ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದಲ್ಲಿ ಈ ಜೋಡಿ ಮಾಡಿದ ಮೋಡಿ ಎಂಥದ್ದು ಎಂದು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಮೊದಲ ದಿನವೇ 100 ಕೋಟಿ
ದೇವರ ಸಿನಿಮಾದ ಟ್ರೆಂಡ್ ಮತ್ತು ಟ್ರೇಡ್ ಪ್ರಕಾರ ಈ ಸಿನಿಮಾ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಎಂಬ ಒಂದಷ್ಟು ಅಂಕಿ ಅಂಶಗಳು ಓಡಾಡುತ್ತಿವೆ. ಅಡ್ವಾನ್ಸ್ ಬುಕಿಂಗ್ ಮತ್ತು ಹೆಚ್ಚಿದ ಟಿಕೆಟ್ ದರ, ವಿದೇಶದಲ್ಲಿನ ಬೇಡಿಕೆಗೆ ಅನುಗುಣವಾಗಿ ಮೊದಲ ದಿನವೇ 100 ಕೋಟಿ ಗಳಿಕೆ ಮಾಡಲಿದೆ ಎಂದು Sacnilk ವರದಿ ಮಾಡಿದೆ. ಸೋಲೋ ಹೀರೋ ಆಗಿ ಜೂನಿಯರ್ ಎನ್‌ಟಿಆರ್ ಅವರ ಕೆರಿಯರ್‌ನಲ್ಲಿಯೂ ಈ ಸಿನಿಮಾ ಮಹತ್ವದ ಮೈಲಿಗಲ್ಲಿನ ಜತೆಗೆ ಹೊಸ ದಾಖಲೆಯನ್ನೂ ಬರೆಯಲಿದೆ ಎಂಬ ಮುನ್ಸೂಚನೆಯೂ ಸಿಕ್ಕಿದೆ. ಜೂನಿಯರ್ ಎನ್‌ಟಿಆರ್ ಅವರ ಆರ್‌ಆರ್‌ಆರ್ ಸಿನಿಮಾ ಮೊದಲ ದಿನವೇ ನೂರು ಕೋಟಿ ಮೀರಿ ಕಲೆಕ್ಷನ್ ಮಾಡಿತ್ತು. ಅದರ ಮೇಲೆಯೇ ಈಗ ದೇವರ ಕಣ್ಣಿದೆ.
ಮುಂಗಡ ಬುಕಿಂಗ್‌ನಲ್ಲೂ ದಾಖಲೆ
ದೇವರಾ ಭಾಗ 1 ಚಿತ್ರದ ಹೈಪ್ ಅದ್ಯಾವ ಮಟ್ಟಿಗೆ ಇದೆ ಎಂದರೆ, ಈ ಸಿನಿಮಾ ಮುಂಗಡ ಬುಕಿಂಗ್ ವಿಚಾರದಲ್ಲಿಯೇ ದೊಡ್ಡ ಗಳಿಕೆಯ ನಗೆ ಬೀರಿದೆ. ಅಂದರೆ, ಸಿನಿಮಾ ಬಿಡುಗಡೆಗೂ ಮೊದಲೇ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿದೆ. ಬಾಕ್ಸ್‌ಆಫೀಸ್‌ನಲ್ಲಿ ಬೇರಾವ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದನ್ನೂ ದೇವರ ಸಿನಿಮಾ ಎನ್‌ಕ್ಯಾಶ್ ಮಾಡಿಕೊಂಡಿದೆ. ಆರು ಸಾವಿರ ಶೋಗಳಲ್ಲಿ 6 ಲಕ್ಷ 50 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಿಕೊಂಡಿದೆ ದೇವರ ಸಿನಿಮಾ.
ಮುಂಗಡ ಟಿಕೆಟ್‌ನಿಂದಲೇ 50ಕೋಟಿ ಆಗಮನ
ದೇಶದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕಿಂಗ್ ತೆರೆಯಲಾಗಿದೆ. ಆ ಪೈಕಿ ಹಾಗೆ ಓಪನ್ ಆದ ಬಹುತೇಕ ಕಡೆಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಭಾರತದಲ್ಲಿ ಈ ಅಡ್ವಾನ್ಸ್ ಬುಕಿಂಗ್‌ನಿಂದಲೇ 28 ಕೋಟಿ ರೂ ಬಾಚಿಕೊಂಡರೆ, ವಿಶ್ವಾದ್ಯಂತ ಒಟ್ಟು 50 ಕೋಟಿಗೂ ಅಧಿಕ ಮೊತ್ತವನ್ನು ಅಡ್ವಾನ್ಸ್ ಬುಕಿಂಗ್‌ನಿಂದಲೇ ಪಡೆದುಕೊಂಡಿದೆ. ಇದೆಲ್ಲವನ್ನು ನೋಡುತ್ತಿದ್ದರೆ, ಮೊದಲ ದಿನವೇ ಈ ಸಿನಿಮಾ 100 ಕೋಟಿಯ ಗಡಿ ದಾಟುವ ಎಲ್ಲ ಸೂಚನೆ ಸಿಕ್ಕಿದೆ.
ವಿಭಾಗ