Devara Trailer: ಇದು ರಕ್ತದಲ್ಲೇ ಬರೆದ ಕೆಂಪು ಸಮುದ್ರದ ಕಥೆ; ಜೂನಿಯರ್ ಎನ್‌ಟಿಆರ್ ದೇವರ ಟ್ರೇಲರ್ ನೋಡಿ ಅಭಿಮಾನಿಗಳು ಅಚ್ಚರಿ
Jr NTR Devara Part 1 Trailer: ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಅಭಿನಯದ ದೇವರ ಪಾರ್ಟ್ 1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ 27ರಂದು ಬಹು ಭಾಷೆಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಲಿವುಡ್ ಸೂಪರ್ ಸ್ಟಾರ್ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ದೇವರ (Devara Trailer) ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಿದ್ದಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ರೇಲರ್ ಲಕ್ಷಗಟ್ಟಲೆ ವೀವ್ಸ್ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ವಿನೂತನ ದಾಖಲೆ ಬರೆಯುವತ್ತ ಹೆಜ್ಜೆ ಹಾಕುತ್ತಿದೆ. ಜ್ಯೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹಾಗೂ ಕೊರಟಾಲ ಶಿವ ನಿರ್ದೇಶನದ ದೇವರ: ಪಾರ್ಟ್ 1 ಚಿತ್ರವು ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸೋಮವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಒಟ್ಟು 2 ನಿಮಿಷ 39 ಸೆಕೆಂಡುಗಳ ಟ್ರೇಲರ್‌ನಲ್ಲಿ ಕೊರಟಾಲ ಅವರು ದೇವರ ಜಗತ್ತನ್ನು ತೋರಿಸಿದ್ದಾರೆ. 'ರಕ್ತದಿಂದ ಸಮುದ್ರವೇ ಕೆಂಪಾದ ಕಥೆ, ನಮ್ಮ ದೇವರ ಕಥೆ' ಎಂಬ ಧ್ವನಿಯೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ನೆಗೆಟಿವ್ ಪಾತ್ರದಲ್ಲಿ ಸೈಫ್ ಅಲಿಖಾನ್ ಮರಣ ಮೃದಂಗ ಬಾರಿಸುವ ಮೂಲಕ ಒಂದೊಂದೇ ದೃಶ್ಯಗಳು ತೆರೆದುಕೊಳ್ಳುತ್ತವೆ. ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿಖಾನ್ ಕೈಕುಲುಕುತ್ತಿರುವಂತೆ ಕಂಡರೂ, ಸೈಫ್ ಅವರ ಪಾತ್ರವು ಅವರಿಗೆ ಭಯವನ್ನು ಕಲಿಸಿದ ವ್ಯಕ್ತಿಯನ್ನು ಸೋಲಿಸಲು ದೀರ್ಘಕಾಲದ ಯೋಜನೆ ಇರುವುದನ್ನು ತೋರಿಸುತ್ತದೆ. ತೆಲುಗು ಚಿತ್ರರಂಗದ ಪಾಲಿಗೆ ಹೊಸ ಪರಿಚಯವಾಗಿರುವ ಜಾನ್ವಿ ಕಪೂರ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಮೂಲಕ ಮತ್ತೆ ಮಾಸ್ ಲುಕ್‌ನಲ್ಲಿ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದರೆ, ಹಳ್ಳಿ ಜೀವನದ ಎನ್‌ಟಿಆರ್ ರೂಪದ ಜೊತೆಗೆ ಮಾಸ್ ಲುಕ್‌ನಲ್ಲಿ ಖಡಕ್ ಎಂಟ್ರಿ ಕೊಡುವ ದೇವರನನ್ನು ನೋಡಬಹುದು. ಸಿನಿಮಾ ಮೂಲಕ ರಕ್ತಸಿಕ್ತ ಅಧ್ಯಾಯವನ್ನು ತೆರೆದಿಡುವ ಪ್ರಯತ್ನವನ್ನು ನಿರ್ದೇಶಕ ಮಾಡಿದ್ದಾರಾ ಎಂದೆನ್ನಿಸದೇ ಇರುವುದಿಲ್ಲ. ಎನ್‌ಟಿಆರ್‌ಗೆ ಎದುರಾಳಿಯಾಗಿ ಸೈಫ್ ಅಲಿಖಾನ್ ರಗಡ್ ನೋಟವನ್ನು ಟ್ರೈಲರ್‌ನಲ್ಲಿ ಕಾಣಬಹುದು. ಇದರ ಜೊತೆ ಲಂಗ–ದಾವಣಿ ಹಾಕಿ ಹಳ್ಳಿ ಹುಡುಗಿಯಾಗಿ ಮುದ್ದಾಗಿ ಕಾಣಿಸುವ ಜಾಹ್ನವಿ ಕಪೂರ್ ಟ್ರೈಲರ್‌ನಲ್ಲೇ ಹಾರ್ಟ್‌ಬೀಟ್ ಹೆಚ್ಚಿಸಿರುವುದು ಸುಳ್ಳಲ್ಲ. ಸಮುದ್ರ ತೀರಾದಲ್ಲಿ ವಾಸಿಸುವ ಜನರ ಬದುಕಿನ ಚಿತ್ರಣ ಬಿಚ್ಚಿಡುವ ಕಥೆಯಂತೆ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಅದ್ಭುತ ದೃಶ್ಯಾವಳಿಗಳು, ಮಾಸ್ ಡೈಲಾಗ್, ಅಭೂತಪೂರ್ವ ಸಿನಿಮಾಟೋಗ್ರಫಿಯ ಮೂಲಕ ದೇವರ ಚಿತ್ರ ಇನ್ನಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು ಸುಳ್ಳಲ್ಲ.
ಯಾವಾಗ ರಿಲೀಸ್ ಆಗುತ್ತೆ ದೇವರ ಸಿನಿಮಾ?
ಚಿತ್ರವು ಇದೇ ತಿಂಗಳ 27ರಂದು ರಿಲೀಸ್ ಆಗುತ್ತಿದೆ. ಆದರೆ ಬಿಡುಗಡೆ ಮುನ್ನವೇ ಸಿನಿಮಾ ರೆಕಾರ್ಡ್ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾವ ಸಿನಿಮಾ ಮಾಡದ ದಾಖಲೆಯನ್ನು ದೇವರ ಮಾಡುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ ಒಟ್ಟು 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದೆ. ಅದಾಗಲೇ ಚಿತ್ರ ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆಯಂತೆ. ಹೀಗಾಗಿ ಬಿಡುಗಡೆಗೂ ಮುನ್ನ ಈ ಮಟ್ಟಕ್ಕೆ ದಾಖಲೆ ಬರೆದಿರುವ ಸಿನಿಮಾ ರಿಲೀಸ್ ನಂತರ ಬಾಕ್ಸ್ ಆಫೀಸ್ ದೋಚುವುದು ಖಚಿತ ಎಂಬುದು ಅಭಿಮಾನಿಗಳ ನಿರೀಕ್ಷೆ.
ಕನ್ನಡ ಟ್ರೇಲರ್ ಇಲ್ಲಿದೆ
ದೇವರ ಚಿತ್ರದ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ ತೆಲುಗು ಸಿನಿರಂಗಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ನಟ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯರ್ ಎನ್‌ಟಿಆರ್, ಸೈಫ್ ಮತ್ತು ಜಾನ್ವಿ ಜೊತೆಗೆ ಚಿತ್ರದಲ್ಲಿ ಪ್ರಕಾಶ್ ರಾಜ್, ಶ್ರೀಕಾಂತ್, ಮುರಳಿ ಶರ್ಮಾ ನಟಿಸಿದ್ದಾರೆ. ನಿರೀಕ್ಷೆಯಂತೆಯೇ ಟ್ರೇಲರ್‌ನಲ್ಲಿ ಎನ್‌ಟಿಆರ್ ಹಾಗೂ ಸೈಫ್ ಅಲಿ ಖಾನ್ ಕಾಂಬಿನೇಶನ್‌ನ ದೃಶ್ಯಗಳು ಹೈಲೈಟ್ ಆಗಿವೆ. ಜೊತೆಗೆ ಪ್ರಕಾಶ್ ರಾಜ್ ಅವರ ಧ್ವನಿ ಟ್ರೇಲರ್ ತೂಕ ಹೆಚ್ಚಿಸಿದೆ.
ಈವರೆಗೂ ಚಿತ್ರದ ಹಾಡುಗಳು, ಪೋಸ್ಟರ್‌ಗಳು ಸಿನಿಮಾ ಕ್ರೇಜ್ ಹೆಚ್ಚಿಸಿದ್ದವು, ಟ್ರೇಲರ್ ಬಿಡುಗಡೆ ನಂತರ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್, ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿ, ಸುಧಾಕರ್ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ , ನಂದಮುರಿ ಕಲ್ಯಾಣ್ ರಾಮ್ ಜೊತೆ ಸೇರಿ ನಿರ್ಮಿಸಿದ್ದಾರೆ. ಕೊರಟಾಲ ಶಿವ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.