ಜೈ ಆಂಜನೇಯ: ಆರನೇ ದಿನವೂ ಬಹುಕೋಟಿ ಬಾಚಿಕೊಂಡ ತೇಜ ಸಜ್ಜ ನಟನೆಯ ಹನುಮಾನ್ ಸಿನಿಮಾ
HanuMan box office collection day 6: ತೇಜ ಸಜ್ಜ ನಟನೆಯ ಹನುಮಾನ್ ಸೂಪರ್‌ಹೀರೋ ಸಿನಿಮಾವು ಈ ಹಿಂದಿನ ಹಲವು ದಾಖಲೆಗಳನ್ನು ಮೀರಿಸಲು ಸಿದ್ಧವಾಗುತ್ತಿದೆ. ಕಳೆದ 6 ದಿನಗಳಲ್ಲಿ ಹನುಮಾನ್ ಭಾರತದಲ್ಲಿ 80 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ತೇಜ ಸಜ್ಜ ನಟನೆಯ ಕನ್ನಡ, ತಮಿಳು, ಹಿಂದಿ ಮುಂತಾದ ಹಲವು ಭಾಷೆಗಳಿಗೆ ಡಬ್ ಆದ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಹನುಮಾನ್ ಗಳಿಕೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಕಳೆದ ವಾರ ಬಿಡುಗಡೆಯಾಗಿರುವ ಗುಂಟೂರು ಖಾರಂ, ಕ್ಯಾಪ್ಟನ್ ಮಿಲ್ಲರ್ ಮುಂತಾದ ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಗಳನ್ನು ಮೀರಿ ಮುಂದುವರೆಯುವ ಸೂಚನೆ ಇದೆ. ಹನುಮಾನ್ ಸಿನಿಮಾವು ಕಳೆದ ಆರು ದಿನಗಳಲ್ಲಿ ಭಾರತದಲ್ಲಿ 80 ಕೋಟಿ ಗಳಿಕೆ ಮಾಡಿದೆ. ಗುಂಟೂರು ಖಾರಂ ಸಿನಿಮಾವು 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಗುಂಟೂರು ಖಾರಂ ಸಿನಿಮಾ ಮೊದಲ ದಿನವೇ 40 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಶನಿವಾರದಿಂದ ಇದರ ಗಳಿಕೆ ಕುಸಿದಿತ್ತು. ಆದರೆ, ಹನುಮಾನ್ ಸಿನಿಮಾ ಮೊದಲ ದಿನದಿಂದ ಗಳಿಕೆ ಹೆಚ್ಚಿಸುತ್ತ ಸಾಗುತ್ತಿದೆ.
ತೇಜ ಸಜ್ಜ ಸೂಪರ್ ಹೀರೋ ಆಗಿ ನಟಿಸಿರುವ ಹನುಮಾನ್ ಸಿನಿಮಾವು ಕಳೆದ ಶುಕ್ರವಾರ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಚ್‌ನಿಲ್ಕ್.ಕಾಂನ ವರದಿಗಳ ಪ್ರಕಾರ ಹನುಮಾನ್ ಸಿನಿಮಾವು ಇಲ್ಲಿಯವರೆಗೆ ಭಾರತದಲ್ಲಿ 80.46 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಹೇಶ್ ಬಾಬು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿರುವ ಈ ಸಂದರ್ಭದಲ್ಲಿ ಹನುಮಾನ್ ಸಿನಿಮಾವು ಬಾಕ್ಸ್ ಆಫೀಸ್ ದೋಚುವುದನ್ನು ಮುಂದುವರೆಸಿದೆ.
ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಹನುಮಾನ್ ಸಿನಿಮಾವು ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಬುಧವಾರ 11.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹನುಮಾನ್ ಸಿನಿಮಾವು ತೆಲುಗು, ಮಲಯಾಳಂ, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಕಳೆದ ಗುರುವಾರ ಪ್ರಿವ್ಯೂ ಕಲೆಕ್ಷನ್ 4.15 ಕೋಟಿ ರೂಪಾಯಿ ಆಗಿತ್ತು. ಶುಕ್ರವಾರ ಬಿಡುಗಡೆಯಾದ ದಿನ 8.05 ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ 12.45 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ 16 ಕೋಟಿ ಗಳಿಸಿತ್ತು. ಸೋಮವಾರ ಸಂಕ್ರಾಂತಿಯಂದು 15.2 ಕೋಟಿ ರೂಪಾಯಿ ಗಳಿಸಿತ್ತು. ಮಂಗಳವಾರವೂ 13.11 ಕೋಟಿ ರೂಪಾಯಿ ಗಳಿಸಿದೆ. ಬುಧವಾರ 11.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಗುಂಟೂರು ಖಾರಂಗಿಂತ ಹೆಚ್ಚು ಗಳಿಕೆ ಮಾಡುತ್ತಿದೆ.
ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿರುವ ಹನುಮಾನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವ ಹನು-ಮಾನ್ ಚಿತ್ರವನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿನ್ನೆ ವೀಕ್ಷಿಸಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಇತ್ತೀಚೆಗೆ ಪತ್ನಿ,ಮಗಳೊಟ್ಟಿಗೆ ಹನುಮಾನ್ ಸಿನಿಮಾ ನೋಡಿದ ಶಿವಣ್ಣನಿಗೆ ತೇಜ್ ಸಜ್ಜಾ ಹಾಗೂ ಅಮೃತಾ ಸಾಥ್ ಕೊಟ್ಟರು. ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಹನುಮಾನ್ ಸಿನಿಮಾವನ್ನು ಮೈಂಡ್ ಬ್ಲೋಯಿಂಗ್ ಚಿತ್ರ ಎಂದರು. ತೇಜ ಸಜ್ಜಾ, ಅಮೃತಾ, ವರಲಕ್ಷ್ಮೀ ಅಭಿನಯವನ್ನು ಕೊಂಡಾಡಿದರು.
ಕಟ್ಟರ್ ಹಿಂದೂ ವಾದಿ ಎನಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ತೇಜ ಸಜ್ಜಾ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದೊಂದು ಆತ್ಮೀಯ ಭೇಟಿಯಾಗಿದ್ದು, ಹನುಮಾನ್ ಸಿನಿಮಾ ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in