Tollywood News: ತೆಲುಗಿಗೆ ಡಬ್‌ ಆಯ್ತು ಹಾಸ್ಟೆಲ್‌ ಹುಡುಗರು ಸಿನಿಮಾ; ಬಾಯ್ಸ್‌ ಹಾಸ್ಟೆಲ್‌ನಲ್ಲಿ ರಮ್ಯಾ ಬದಲಿಗೆ ರಶ್ಮಿ ಗೌತಮ್‌ ನಟನೆ
ಕನ್ನಡ ಸುದ್ದಿ  /  ಮನರಂಜನೆ  /  Tollywood News: ತೆಲುಗಿಗೆ ಡಬ್‌ ಆಯ್ತು ಹಾಸ್ಟೆಲ್‌ ಹುಡುಗರು ಸಿನಿಮಾ; ಬಾಯ್ಸ್‌ ಹಾಸ್ಟೆಲ್‌ನಲ್ಲಿ ರಮ್ಯಾ ಬದಲಿಗೆ ರಶ್ಮಿ ಗೌತಮ್‌ ನಟನೆ

Tollywood News: ತೆಲುಗಿಗೆ ಡಬ್‌ ಆಯ್ತು ಹಾಸ್ಟೆಲ್‌ ಹುಡುಗರು ಸಿನಿಮಾ; ಬಾಯ್ಸ್‌ ಹಾಸ್ಟೆಲ್‌ನಲ್ಲಿ ರಮ್ಯಾ ಬದಲಿಗೆ ರಶ್ಮಿ ಗೌತಮ್‌ ನಟನೆ

ರಮ್ಯಾ ಹಾಗೂ ಹಾಸ್ಟೆಲ್‌ ಹುಡುಗರು ಚಿತ್ರತಂಡದ ನಡುವೆ ವಿವಾದ ಉಂಟಾಗಿತ್ತು. ಅನುಮತಿ ಇಲ್ಲದೆ ಚಿತ್ರದಲ್ಲಿ ನನ್ನ ಕ್ಲಿಪ್ಪಿಂಗ್‌ ಬಳಸಿಕೊಂಡಿದ್ದಾರೆ ಎಂದು ರಮ್ಯಾ ಆರೋಪಿಸಿ ಸಿನಿಮಾ ಬಿಡುಗಡೆಗೆ ಸ್ಟೇ ತಂದಿದ್ದರು. ಚಿತ್ರತಂಡ ನ್ಯಾಯಾಲಯದಲ್ಲಿ ಹೋರಾಡಿ ಕೊನೆಗೆ ಸಿನಿಮಾ ರಿಲೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು.

ತೆಲುಗಿನ ಹಾಸ್ಟೆಲ್‌ ಬಾಯ್ಸ್‌ ಹುಡುಗರು ಚಿತ್ರದಲ್ಲಿ ರಮ್ಯಾ ಬದಲಿಗೆ ರಶ್ಮಿ ಗೌತಮ್
ತೆಲುಗಿನ ಹಾಸ್ಟೆಲ್‌ ಬಾಯ್ಸ್‌ ಹುಡುಗರು ಚಿತ್ರದಲ್ಲಿ ರಮ್ಯಾ ಬದಲಿಗೆ ರಶ್ಮಿ ಗೌತಮ್ (PC: Divyaspandana /Ramya FC, Rashmi Gautam Facebook)

ಜುಲೈ 21ರಂದು ತೆರೆ ಕಂಡ ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ತೆಲುಗು ಭಾಷೆಗೆ ಡಬ್‌ ಆಗಿದ್ದು ಇದೇ ತಿಂಗಳು ತೆರೆ ಕಾಣುತ್ತಿದೆ. ತೆಲುಗಿನಲ್ಲಿ ಈ ಸಿನಿಮಾಗೆ 'ಬಾಯ್ಸ್‌ ಹಾಸ್ಟೆಲ್‌' ಎಂದು ಹೆಸರಿಡಾಗಿದೆ.

ಆಂಧ್ರ ಹಾಗೂ ತೆಲಂಗಾಣದಲ್ಲಿ 'ಬಾಯ್ಸ್‌ ಹಾಸ್ಟೆಲ್‌' ಸಿನಿಮಾ ಆಗಸ್ಟ್‌ 26 ರಂದು ರಿಲೀಸ್‌ ಆಗುತ್ತಿದೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್, ಶೈನಿ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಕನ್ನಡದಲ್ಲಿ ರಮ್ಯಾ ಮಾಡಿದ್ದ ಲೆಕ್ಚರರ್ ಪಾತ್ರವನ್ನು ತೆಲುಗಿನಲ್ಲಿ ನಟಿ, ನಿರೂಪಕಿ ರಶ್ಮಿ ಗೌತಮ್ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್‌ ನಂತರ ರಮ್ಯಾ ಹಾಗೂ ಹಾಸ್ಟೆಲ್‌ ಹುಡುಗರು ಚಿತ್ರತಂಡದ ನಡುವೆ ವಿವಾದ ಉಂಟಾಗಿತ್ತು. ಅನುಮತಿ ಇಲ್ಲದೆ ಚಿತ್ರದಲ್ಲಿ ನನ್ನ ಕ್ಲಿಪ್ಪಿಂಗ್‌ ಬಳಸಿಕೊಂಡಿದ್ದಾರೆ ಎಂದು ರಮ್ಯಾ ಆರೋಪಿಸಿ ಸಿನಿಮಾ ಬಿಡುಗಡೆಗೆ ಸ್ಟೇ ತಂದಿದ್ದರು. ಚಿತ್ರತಂಡ ನ್ಯಾಯಾಲಯದಲ್ಲಿ ಹೋರಾಡಿ ಕೊನೆಗೆ ಸಿನಿಮಾ ರಿಲೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು.

'ಬಾಯ್ಸ್ ಹಾಸ್ಟೆಲ್' ಟೈಟಲ್ ಸಾಂಗ್‌ ರಿಲೀಸ್‌

ತೆಲುಗಿಗೆ ಡಬ್ ಆಗಿರುವ 'ಬಾಯ್ಸ್ ಹಾಸ್ಟೆಲ್' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಾಡು ರಿಲೀಸ್ ಆಗಿದ್ದು, ತೆಲುಗು ಮಂದಿಯಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ, ರಾಜ್ಯ ಮಾತ್ರವಲ್ಲದೆ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿ ಕೂಡಾ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಟೈಲಟ್ ಅಡಿ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್‌ ಆಗುತ್ತಿರುವುದು ಕನ್ನಡ ಸಿನಿಪ್ರಿಯರಿಗೆ ಖುಷಿಯ ವಿಚಾರ.

ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿದೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್‌ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್‌ ಮೊಹರ್‌ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾ ಚಿತ್ರೀಕರಣ ಬಹುತೇಕ ಮಂಗಳೂರಿನ ಹಾಸ್ಟೆಲ್‌ವೊಂದರಲ್ಲಿ ಚಿತ್ರೀಕರಣವಾಗಿತ್ತು.

Whats_app_banner