Tollywood News: ಪುಷ್ಪ 2 ಸಿನಿಮಾ ತಂಡಕ್ಕೆ ಶಾಕ್‌ ನೀಡಿದ ಐಟಿ; ನಿರ್ದೇಶಕ ಸುಕುಮಾರ್‌, ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಮೇಲೆ ದಾಳಿ
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಪುಷ್ಪ 2 ಸಿನಿಮಾ ತಂಡಕ್ಕೆ ಶಾಕ್‌ ನೀಡಿದ ಐಟಿ; ನಿರ್ದೇಶಕ ಸುಕುಮಾರ್‌, ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಮೇಲೆ ದಾಳಿ

Tollywood News: ಪುಷ್ಪ 2 ಸಿನಿಮಾ ತಂಡಕ್ಕೆ ಶಾಕ್‌ ನೀಡಿದ ಐಟಿ; ನಿರ್ದೇಶಕ ಸುಕುಮಾರ್‌, ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಮೇಲೆ ದಾಳಿ

ಟೀಸರ್‌ ಮೂಲಕ ಸದ್ದು ಮಾಡಿದ್ದ ಪುಷ್ಪ (Pushpa 2) ಸಿನಿಮಾ ತಂಡಕ್ಕೀಗ ಐಟಿ ಇಲಾಖೆ ಶಾಕ್‌ ನೀಡಿದೆ. ಚಿತ್ರದ ನಿರ್ದೇಶಕ ಸುಕುಮಾರ್‌ (Sukumar) ಮತ್ತು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್‌ ಕಚೇರಿ ಮೇಲೆ ದಾಳಿ ಮಾಡಿದೆ.

ಪುಷ್ಪ 2 ಸಿನಿಮಾ ತಂಡಕ್ಕೆ ಶಾಕ್‌ ನೀಡಿದ ಐಟಿ; ನಿರ್ದೇಶಕ ಸುಕುಮಾರ್‌, ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಮೇಲೆ ದಾಳಿ
ಪುಷ್ಪ 2 ಸಿನಿಮಾ ತಂಡಕ್ಕೆ ಶಾಕ್‌ ನೀಡಿದ ಐಟಿ; ನಿರ್ದೇಶಕ ಸುಕುಮಾರ್‌, ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಮೇಲೆ ದಾಳಿ

Tollywood News: ಟೀಸರ್‌ ಮೂಲಕವೇ ಸದ್ದು ಮಾಡಿ, ವೀಕ್ಷಣೆ ವಿಚಾರದಲ್ಲಿಯೂ ದಾಖಲೆ ಬರೆದಿದ್ದ ಪುಷ್ಪ 2 (Pushpa: The rule) ಸಿನಿಮಾ, ಇದೀಗ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದೆ. ಸಿನಿಮಾ ಶೂಟಿಂಗ್‌ ಕೆಲಸಗಳಲ್ಲಿ ತೊಡಗಿಸಿಕೊಂಡ ತಂಡಕ್ಕೆ ಆದಾಯ ತೆರಿಗೆ ಇಲಾಖೆ (IT Department) ಶಾಕ್‌ ನೀಡಿದೆ. ಇಂದು (ಏ. 19) ಚಿತ್ರದ ನಿರ್ದೇಶಕ ಸುಕುಮಾರ್‌ (Sukumar) ಮತ್ತು ಪುಷ್ಪ 2 ಸಿನಿಮಾ ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ (Mythri Movie Makers) ಸಂಸ್ಥೆ ಮೇಲೆ ಐಟಿ ದಾಳಿ ಮಾಡಿದೆ.

ಅಲ್ಲು ಅರ್ಜುನ್‌ ನಾಯಕನಾಗಿ ನಟಿಸಿದ್ದ ಪುಷ್ಪ ಸಿನಿಮಾದ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿಯೂ 400 ಪ್ಲಸ್‌ ಕೋಟಿ ರೂಪಾಯಿ ಕಲೆಹಾಕಿತ್ತು. ಈ ನಡುವೆ ಪಾರ್ಟ್‌ 2 ಸಿನಿಮಾ ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ಹೇಳಿಕೊಂಡಿತ್ತು. ಏನಿಲ್ಲ ಅಂದರೂ 300 ಕೋಟಿಗೂ ಅಧಿಕ ಬಂಡವಾಳ ಹೂಡುವ ಬಗ್ಗೆ ತಿಳಿಸಿತ್ತು. ಅದರಂತೆ, ಇದೀಗ ಐಟಿ ದಾಳಿ ನಡೆದಿರಬಹುದು ಎಂಬ ಗುಸುಗುಸು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಪುಷ್ಪ 2 ಚಿತ್ರ ನಿರ್ಮಿಸುತ್ತಿರುವ ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆಯ ನಿರ್ಮಾಪಕರಾದ ನವೀನ್ ಯೆರ್ನೇನಿ, ರವಿ ಯಲಮಂಚಲಿ ಮತ್ತು ಚಿತ್ರದ ನಿರ್ದೇಶಕ ಸುಕುಮಾರ್‌ ಮನೆ ಮೇಲೂ ಐಟಿ ದಾಳಿ ನಡೆದಿದೆ. ಪ್ರತ್ಯೇಕ ತಂಡಗಳಾಗಿ ಏಕಕಾಲದಲ್ಲಿ ಹಲವು ಕಡೆ ದಾಳಿ ನಡೆಸಿ ದಾಖಲೆಗಳನ್ನು ಕಲೆಹಾಕುತ್ತಿದೆ. ಆದರೆ, ದಾಳಿಯಲ್ಲಿ ಏನೆಲ್ಲ ಸಿಕ್ಕಿದೆ ಎಂಬ ವಿಚಾರವನ್ನು ಆದಾಯ ತೆರಿಗೆ ಇಲಾಖೆ ಈವರೆಗೂ ಬಹಿರಂಗಪಡಿಸಿಲ್ಲ.

ಇನ್ನು ನಿರ್ದೇಶಕ ಸುಕುಮಾರ್‌ ತಮ್ಮದೇ ಆದ ಸುಕುಮಾರ್ ರೈಟಿಂಗ್ಸ್ ಎಂಬ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ. ಇದರ ಮೂಲಕ ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿಯೂ ಅವರು ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಸಾಯಿ ಧರಮ್ ತೇಜ್ ಅಭಿನಯದ ವಿರೂಪಾಕ್ಷ ಸಿನಿಮಾಕ್ಕೂ ಸುಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಏಪ್ರಿಲ್ 21 ರಂದು ಬಿಡುಗಡೆ ಆಗಲಿದೆ.

ಟೀಸರ್‌ನಲ್ಲಿ ಕಾಳಿ ವೇಷದಲ್ಲಿ ಅಲ್ಲು ಅರ್ಜುನ್..‌

ಅಲ್ಲು ಅರ್ಜುನ್‌ ಅವರ ಬರ್ತ್‌ಡೇ ಪ್ರಯುಕ್ತ ‘ಪುಷ್ಪ; ದಿ ರೂಲ್’‌ ಸಿನಿಮಾದ ಹೊಸ ಹೊಸ ಅಪ್‌ಡೇಟ್‌ಗಳು ಹೊರಬಿದ್ದಿವೆ. ಟೀಸರ್‌ ನೋಡಿದ ಅಭಿಮಾನಿಗಳು, ‘ಪುಷ್ಪ; ದಿ ರೂಲ್’‌ ಚಿತ್ರದ ಹೊಸ ಪೋಸ್ಟರ್‌ಗೂ ಮನಸೋತಿದ್ದಾರೆ. ನೆಚ್ಚಿನ ನಟನ ಕಾಳಿ ಅವತಾರ ಕಂಡು ಹುಬ್ಬೇರಿಸಿದ್ದಾರೆ. ನೀಲಿ ವರ್ಣದ ಮೈ ಬಣ್ಣ, ಕೊರಳಿಗೆ ನಿಂಬೆ ಹಣ್ಣಿನ ಮಾಲೆ, ಹೂವಿನ ಮಾಲೆ ಜತೆಗೊಂದಿಷ್ಟು ಆಭರಣ ಧರಿಸಿ ಪೋಸ್‌ ನೀಡಿದ್ದಾರೆ. ಕೈಯಲ್ಲಿ ಗನ್‌ ಹಿಡಿದು ರೋಷಾವೇಶದ ಭಂಗಿಯಲ್ಲಿ ಎದುರಾಗಿದ್ದಾರೆ.

ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾ‌ಡುತ್ತಿದ್ದಾರೆ.