Tollywood News: ಚಿರಂಜೀವಿ ಬ್ಲಡ್‌ ಬ್ಯಾಂಕ್‌ ವಿರುದ್ಧ ಹೇಳಿಕೆ; 12 ವರ್ಷಗಳ ನಂತರ ಜೀವಿತಾ ರಾಜಶೇಖರ್‌ಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಚಿರಂಜೀವಿ ಬ್ಲಡ್‌ ಬ್ಯಾಂಕ್‌ ವಿರುದ್ಧ ಹೇಳಿಕೆ; 12 ವರ್ಷಗಳ ನಂತರ ಜೀವಿತಾ ರಾಜಶೇಖರ್‌ಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Tollywood News: ಚಿರಂಜೀವಿ ಬ್ಲಡ್‌ ಬ್ಯಾಂಕ್‌ ವಿರುದ್ಧ ಹೇಳಿಕೆ; 12 ವರ್ಷಗಳ ನಂತರ ಜೀವಿತಾ ರಾಜಶೇಖರ್‌ಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ರಾಜಶೇಖರ್‌ ಹಾಗೂ ಜೀವಿತಾ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಚಿರಂಜೀವಿ ಪತ್ನಿ ಸುರೇಖಾ ಅಣ್ಣ, ನಿರ್ಮಾಪಕ ಅಲ್ಲು ಅರವಿಂದ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಜೀವಿತಾ , ರಾಜಶೇಖರ್‌ ದಂಪತಿಗೆ 1 ವರ್ಷ ಜೈಲು ಶಿಕ್ಷೆ
ಜೀವಿತಾ , ರಾಜಶೇಖರ್‌ ದಂಪತಿಗೆ 1 ವರ್ಷ ಜೈಲು ಶಿಕ್ಷೆ

ಸುಮಾರು 12 ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ರಾಜಶೇಖರ್‌ ಹಾಗೂ ಪತ್ನಿ ಜೀವಿತಾಗೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. 2011 ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೀವಿತಾ ಹಾಗೂ ರಾಜಶೇಖರ್‌ ದಂಪತಿ ಚಿರಂಜೀವಿ ನಡೆಸುತ್ತಿರುವ ಬ್ಲಡ್‌ ಬ್ಯಾಂಕ್‌ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂದು ನಿರ್ಮಾಪಕ ಅಲ್ಲು ಅರವಿಂದ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಏನಿದು ಪ್ರಕರಣ?

ಮೆಗಾ ಸ್ಟಾರ್‌ ಚಿರಂಜೀವಿ ಹೈದರಾಬಾದ್‌ನಲ್ಲಿ ಬ್ಲಡ್‌ ಬ್ಯಾಂಕ್‌ ಸ್ಥಾಪಿಸಿದ್ದು ಈ ರಕ್ತನಿಧಿ ಮೂಲಕ ಅಗತ್ಯವಿರುವವರಿಗೆ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ಆದರೆ ರಾಜಶೇಖರ್‌ ಹಾಗೂ ಜೀವಿತಾ, ಚಿರಂಜೀವಿ ನಡೆಸುತ್ತಿರುವ ಬ್ಲಂಡ್‌ ಬಾಂಕ್‌ನಲ್ಲಿ ಸಂಗ್ರವಾಗುವ ರಕ್ತವವನ್ನು ಜನರ ಸೇವೆಗೆ ಬಳಸದೆ ಮಾರುಕಟ್ಟೆಯಲ್ಲಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 2011ರಲ್ಲಿ ಕಾರ್ಯಕ್ರಮವೊಂದರ ಸುದ್ದಿಗೋಷ್ಠಿಯಲ್ಲಿ ಜೀವಿತಾ ಹಾಗೂ ರಾಜಶೇಖರ್‌ ದಂಪತಿ ನಟ ಚಿರಂಜೀವಿ ಹಾಗೂ ಕುಟುಂಬದ ವಿರುದ್ಧ ಆರೋಪ ಮಾಡಿದ್ದರು.

ದಂಪತಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಅಲ್ಲು ಅರವಿಂದ್

ರಾಜಶೇಖರ್‌ ಹಾಗೂ ಜೀವಿತಾ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಚಿರಂಜೀವಿ ಪತ್ನಿ ಸುರೇಖಾ ಅಣ್ಣ, ನಿರ್ಮಾಪಕ ಅಲ್ಲು ಅರವಿಂದ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿರಂಜೀವಿ ಸ್ಟಾರ್‌ ನಟನಾದರೂ ಅನೇಕ ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದಾರೆ. ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಯತ್ನದಲ್ಲಿ ಜೀವಿತಾ ಹಾಗೂ ರಾಜಶೇಖರ್‌ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ನಟ ಚಿರಂಜೀವಿ ಹಾಗೂ ಅವರ ಟ್ರಸ್ಟ್‌ ವಿರುದ್ಧ ಈ ದಂಪತಿ ಮಾಡಿರುವ ಆರೋಪಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.‌

1 ವರ್ಷ ಶಿಕ್ಷೆ 5 ಸಾವಿರ ರೂಪಾಯಿ ದಂಡ

ವಿಚಾರಣೆ ನಡೆಸಿದ ನ್ಯಾಯಾಲಯವು 12 ವರ್ಷಗಳ ಬಳಿಕ ತಾರಾ ದಂಪತಿಗೆ ಶಿಕ್ಷೆ ನೀಡಿದೆ. ತೆಲಂಗಾಣದ ನಾಂಪಲ್ಲಿಯ 17ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 18, ಮಂಗಳವಾರ ರಾಜಶೇಖರ್‌ ಜೀವಿತಾ ದಂಪತಿಗೆ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಪತಿ ಜೈಲು ಸೇರಲಿದ್ದಾರಾ, ಬೇಲ್‌ ಪಡೆದು ಮೇಲಿನ ನ್ಯಾಯಾಲಯಕ್ಕೆ ಅಪೀಲು ಹೋಗಲಿದ್ದಾರಾ ಕಾದು ನೋಡಬೇಕು.

ಕನ್ನಡದಲ್ಲಿ ನಟಿಸಿರುವ ಜೀವಿತಾ

ರಾಜಶೇಖರ್‌ ಹಾಗೂ ಜೀವಿತಾ ದಂಪತಿ ತೆಲುಗು ಚಿತ್ರರಂಗದಲ್ಲಿ ಖ್ಯಾತ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. 1989ರಲ್ಲಿ ತೆರೆ ಕಂಡ ಕಂಕಣ ಭಾಗ್ಯ ಕನ್ನಡ ಸಿನಿಮಾದಲ್ಲಿ ಜೀವಿತಾ, ರಾಮಕೃಷ್ಣ ಜೊತೆ ನಟಿಸಿದ್ದಾರೆ. ಜೀವಿತಾ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾ ಆದರೂ ಆಕೆಯ ನಟನೆಯನ್ನು ಕನ್ನಡಿಗರು ಇಂದಿಗೂ ಮರೆತಿಲ್ಲ. ನಾಯಕನಿಂದ ಮೋಸ ಹೋದ ನಾಯಕಿ, ನಂತರ ಆತನ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ಜೀವಿತಾ ಅದ್ಭುತವಾಗಿ ನಟಿಸಿದ್ದಾರೆ. ಈ ದಂಪತಿಗೆ ಶಿವಾನಿ, ಶಿವಾತ್ಮಿಕ ಎಂಬ ಇಬ್ಬರು ಪುತ್ರಿಯರಿದ್ದು ಟಾಲಿವುಡ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Whats_app_banner