ದೇವರ ಟಿಕೆಟ್ ದರ ಹೆಚ್ಚಳ, ಮಧ್ಯರಾತ್ರಿ ಶೋಗಳಿಗೆ ಆಂಧ್ರ ಪ್ರದೇಶ ಸರ್ಕಾರ ಅನುಮತಿ; ಚಂದ್ರಬಾಬು ನಾಯ್ಡುಗೆ ಧನ್ಯವಾದ ಹೇಳಿದ ಜ್ಯೂ ಎನ್‌ಟಿಆರ್
ಸೆಪ್ಟೆಂಬರ್ 27 ರಂದು ಜ್ಯೂ.ಎನ್‌ಟಿಆರ್ ಜಾನ್ವಿ ಕಪೂರ್ ಅಭಿನಯದ ದೇವರ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದ ಟಿಕೆಟ್ ದರ ಹೆಚ್ಚಿಸಲು ಹಾಗೂ ಮಿಡ್ ನೈಟ್ ಶೋಗಳಿಗೆ ಅನುಮತಿ ನೀಡಿದ್ದಕ್ಕಾಗಿ ಜ್ಯೂ. ಎನ್‌ಟಿಆರ್ ಹಾಗೂ ಕಲ್ಯಾಣ್ ರಾಮ್ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್‌ಗೆ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಸಿನಿಮಾ ಉದ್ಯಮಕ್ಕೆ ಸರ್ಕಾರದ ಪ್ರೋತ್ಸಾಹ ಬಹಳ ಮುಖ್ಯ. ಇದೀಗ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರ ಚಿತ್ರಕ್ಕೆ ಸರ್ಕಾರ ಅನುಕೂಲ ಕಲ್ಪಿಸಿದ್ದು, ದೇವರ ಚಿತ್ರತಂಡ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಧನ್ಯವಾದ ಅರ್ಪಿಸಿದ್ದಾರೆ.
ಟಿಕೆಟ್ ದರ ಗರಿಷ್ಠ 130 ರೂ ಹೆಚ್ಚಳಕ್ಕೆ ಅನುಮತಿ
ಎಪಿ ಸರ್ಕಾರ ದೇವರ ಚಿತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ. ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಅನುಮತಿ ನೀಡಿದೆ. ಮಧ್ಯರಾತ್ರಿ ಶೋಗಳಿಗೂ ಅವಕಾಶ ಕಲ್ಪಿಸಿದೆ. ಬಿಡುಗಡೆಯ ದಿನ 6 ಶೋಗಳು ಇರಲಿದೆ. ಮರುದಿನದಿಂದ 5 ಶೋಗಳು ನಡೆಯಲಿವೆ. ಸಿನಿಮಾ ತೆರೆ ಕಂಡ 9 ದಿನಗಳವರೆಗೆ ಹೆಚ್ಚಿದ ದರಗಳು ಮತ್ತು ಹೆಚ್ಚುವರಿ ಪ್ರದರ್ಶನಗಳೊಂದಿಗೆ ಎಪಿಯಲ್ಲಿ ದಾಖಲೆ ಸೃಷ್ಟಿಸಲು ದೇವರ ಸಿದ್ಧವಾಗಿದೆ. ತಮ್ಮ ಚಿತ್ರಕ್ಕೆ ಇಷ್ಟೊಂದು ಸಹಕಾರ ನೀಡಿದ ಸರ್ಕಾರ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಸದ್ಯಕ್ಕೆ ದೇವರ ಅಡ್ವಾನ್ಸ್ ಬುಕ್ಕಿಂಗ್ ಹೆಚ್ಚುತ್ತಿದೆ. ಸದ್ಯಕ್ಕೆ ಫಿಕ್ಸ್ ಆಗಿರುವ ದರಕ್ಕಿತ ಗರಿಷ್ಠ 130 ರೂ. ಹೆಚ್ಚಿಸಲು ಅವಕಾಶ ನೀಡಲಾಗಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ 110 ರೂ. ದರ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 26 ರ ಮಧ್ಯರಾತ್ರಿಯ ನಂತರ ಮೊದಲ ಪ್ರದರ್ಶನ ನಡೆಯಲಿದೆ. ಹಾಗಾಗಿ ಸೆಪ್ಟೆಂಬರ್ 27 ರಂದು ಆಂಧ್ರಾದ್ಯಂತ 6 ಶೋಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ 5 ಶೋಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಚಿತ್ರತಂಡ ಫುಲ್ ಖುಷಿಯಾಗಿದೆ.
ಸಿಎಂ ಚಂದ್ರಬಾಬು ನಾಯ್ಡುಗೆ ಕೃತಜ್ಞತೆ ಅರ್ಪಿಸಿದ ತಾರಕ್
ಇದೇ ಖುಷಿಯಿಂದ ಜ್ಯೂನಿಯರ್ ಎನ್‌ಟಿಆರ್ ಹಾಗೂ ಸಹೋದರ ಕಲ್ಯಾಣ್ ರಾಮ್ ಟ್ವೀಟ್ ಮೂಲಕ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮ ದೇವರ ಸಿನಿಮಾವನ್ನು ಬೆಂಬಲಿಸಿದ ಸರ್ಕಾರಕ್ಕೆ ಹಾಗೂ ಸಿಎಂ ಚಂದ್ರಬಾಬು ಅವರಿಗೆ ವಿಶೇಷ ಧನ್ಯವಾದ ಎಂದು ಎನ್ ಟಿಆರ್ ಹಾಗೂ ಕಲ್ಯಾಣ್ ರಾಮ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಈಗಾಗಲೇ ದೇವರ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಸ್ವತ: ಜ್ಯೂ ಎನ್‌ಟಿಆರ್ ಮುಂಬೈ ಮತ್ತು ಚೆನ್ನೈಗೆ ತೆರಳಿ ಪ್ರಮೋಷನ್ ಮಾಡಿದ್ದಾರೆ. ಮುಂದಿನ ವಾರದಿಂದ ತೆಲುಗು ರಾಜ್ಯಗಳಲ್ಲಿ ತಾರಕ್, ದೇವರ ಪ್ರಚಾರ ಮಾಡಲಿದ್ದಾರೆ.
ಸೆ.22 ರಂದು ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಇವೆಂಟ್
ಸೆಪ್ಟೆಂಬರ್ 22 ರಂದು ಹೈದರಾಬಾದ್‌ನಲ್ಲಿ ದೇವರ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಂಧ್ರ ಸಿಎಂ, ಡಿಸಿಎಂ ಸೇರಿದಂತೆ ವಿವಿಧ ಗಣ್ಯರು ಆಗಮಿಸುವ ಸಾಧ್ಯತೆ ಇದೆ. ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಜ್ಯೂ ಎನ್‌ಟಿಆರ್ ಹಾಗೂ ಸಹೋದರ ಕಲ್ಯಾಣ್ ರಾಮ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಮೂಲಕ ಜಾನ್ವಿ ಕಪೂರ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ . ಶ್ರೀಕಾಂತ್, ಚೈತ್ರಾ ರಾಯ್, ಶೈನ್ ಟಾಮ್ ಚಾಕೋ ಮತ್ತು ಪ್ರಕಾಶ್ ರಾಜ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಅನಿರುದ್ಥ್ ರವಿಚಂದರ್, ಸಂಗೀತ ನೀಡಿದ್ದಾರೆ.
ದೇವರ ಚಿತ್ರಕ್ಕೆ ಮಧ್ಯರಾತ್ರಿಯ ಶೋಗಳು ಪ್ಲಸ್ ಆಗುತ್ತವೆಯೇ? ಸಿನಿಮಾ, ಎನ್‌ಟಿಆರ್ ಹಳೆಯ ಸಿನಿಮಾಗಳ ದಾಖಲೆ ಮುರಿಯಲಿದೆಯೇ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.