ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಕಲ್ಕಿ ಸಿನಿಮಾದ ಪ್ರಭಾವ, ಚಿತ್ರಮಂದಿರಗಳಲ್ಲಿ ಮತ್ತೆ ಜನಜಾತ್ರೆ; ಪಿವಿಆರ್‌ ಐನಾಕ್ಸ್‌ ಷೇರು ಖರೀದಿಸಬಹುದೇ?

Kalki 2898 AD: ಕಲ್ಕಿ ಸಿನಿಮಾದ ಪ್ರಭಾವ, ಚಿತ್ರಮಂದಿರಗಳಲ್ಲಿ ಮತ್ತೆ ಜನಜಾತ್ರೆ; ಪಿವಿಆರ್‌ ಐನಾಕ್ಸ್‌ ಷೇರು ಖರೀದಿಸಬಹುದೇ?

Kalki 2898 AD:ಕಲ್ಕಿ ಸೇರಿದಂತೆ ಹಲವು ಸಿನಿಮಾಗಳು ಥಿಯೇಟರ್‌ಗಳಿಗೆ ಜನರ ದಟ್ಟಣೆಯನ್ನು ಹೆಚ್ಚಿಸಲಿದೆ. ಇದರಿಂದ ಪಿವಿಆರ್‌ ಐನಾಕ್ಸ್‌ ಸಾಲ ಕಡಿಮೆಯಾಗಲಿದೆ. ಆದಾಯ ಹೆಚ್ಚುವ ನಿರೀಕ್ಷೆಯಿದೆ. ಪಿವಿಆರ್‌ ಐನಾಕ್ಸ್‌ ಷೇರು ಖರೀದಿಸಲು ಇದು ಸೂಕ್ತ ಸಮಯವೇ?

Kalki 2898 AD: ಕಲ್ಕಿ ಸಿನಿಮಾದ ಪ್ರಭಾವ, ಚಿತ್ರಮಂದಿರಗಳಲ್ಲಿ ಮತ್ತೆ ಜನ ಜಾತ್ರೆ‌
Kalki 2898 AD: ಕಲ್ಕಿ ಸಿನಿಮಾದ ಪ್ರಭಾವ, ಚಿತ್ರಮಂದಿರಗಳಲ್ಲಿ ಮತ್ತೆ ಜನ ಜಾತ್ರೆ‌

ಬೆಂಗಳೂರು: ಭಾರತದ ಚಿತ್ರಮಂದಿರಗಳಿಗೆ ಕಳೆದ ಏಳು ತಿಂಗಳು ನೋವಿನ ದಿನಗಳಾಗಿದ್ದವು. ಪ್ರಮುಖ ಸಿನಿಮಾಗಳ ಬಿಡುಗಡೆ ಇಲ್ಲದೆ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿದ್ದವು. ಆದರೆ, ಈ ವಾರ ಕಲ್ಕಿ 28,98 ಎಡಿ‌ ಸಿನಿಮಾ ಬಿಡುಗಡೆಯಾಗಿದೆ. ಡೆಡ್‌ಪೂಲ್‌ ಆಂಡ್‌ ವೋಲ್ವೈರೈನ್‌ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ. ಟ್ರಾನ್ಸ್‌ಫಾರ್ಮರ್‌ ಸಿನಿಮಾ ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. ಇದೇ ಸಮಯದಲ್ಲಿ ಪುಷ್ಪ 2, ಕನ್ನಡದ ಉತ್ತರಾಕಾಂಡ, ಭೈರತಿ ರಣಗಲ್‌ ಮುಂತಾದ ಸಿನಿಮಾಗಳು ರಿಲೀಸ್‌ ಆಗಲಿವೆ. ಏಪ್ರಿಲ್‌ ಮೇ ತಿಂಗಳಲ್ಲಿ ಚುನಾವಣೆ, ಬಿಸಿಲು, ಕ್ರಿಕೆಟ್‌ನಿಂದಾಗಿ ಚಿತ್ರಮಂದಿರಗಳು ಡಲ್‌ ಹೊಡೆಯುತ್ತಿದ್ದವು. ಮುಂಬರುವ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುವುದರಿಂದ ಚಿತ್ರಮಂದಿರಗಳಲ್ಲಿ ಮತ್ತೆ ಲವಲವಿಕೆ ಕಂಡುಬರಲಿದೆ. ಇಂದಿನಿಂದಲೇ ಕಲ್ಕಿ ಸಿನಿಮಾದಿಂದಾಗಿ ಥಿಯೇಟರ್‌ನಲ್ಲಿ ಜನ ಜಾತ್ರೆ ಆರಂಭವಾಗಿದೆ.

"ಕಲ್ಕಿ 2898 ಎಡಿ (ಇಂದು ಒಂದೇ ದಿನ ಭಾರತದಲ್ಲಿ 100 ಕೋಟಿಗೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ) ಮತ್ತು ಮುಂಜ್ಯಾ (ಜೂನ್‌ ತಿಂಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡುವ ನಿರೀಕ್ಷೆಯಿದೆ) ಸಿನಿಮಾಗಳ ನೆರವಿನಿಂದ ಚಿತ್ರಮಂದಿರಗಳಿಗೆ ಆಗಮಿಸುವ ಜನರು ಗಮನಾರ್ಹವಾಗಿ ಹೆಚ್ಚಾಗಬಹುದು" ಎಂದು ಪಿವಿಆರ್‌ ಐನಾಕ್ಸ್‌ ಕುರಿತು ನುವೆಮಾ ವೆಲ್ತ್‌ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಬರುವ ತಿಂಗಳುಗಳಲ್ಲಿ ಥಿಯೇಟರ್‌ಗಳಿಗೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿದೆ. "ಮುಂದಿನ ದಿನಗಳಲ್ಲಿ ಭಾರತದ ಚಿತ್ರಮಂದಿರಗಳ ಒಟ್ಟಾರೆ ಚಿತ್ರಣ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಹಾಲಿವುಡ್‌ನ ಪ್ರಮುಖ ಚಿತ್ರಗಳು ಆಗಮಿಸಲು ಸರದಿಯಲ್ಲಿವೆ. ಜಾಹೀರಾತು ಆದಾಯ ಹೆಚ್ಚಾಗಲಿದೆ. ನಿವ್ವಳ ಸಾಲದ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಪಿವಿಆರ್‌ ಐನಾಕ್ಸ್‌ ಷೇರುಗಳನ್ನು 1,995 ರೂಪಾಯಿ ಟಾರ್ಗೆಟ್‌ ದರದಲ್ಲಿ ಖರೀದಿಸಬಹುದು" ಎಂದು ನುವೆಮಾ ಸಲಹೆ ನೀಡಿದೆ.

ಕಲ್ಕಿ 2898 ಎಡಿ ಸಿನಿಮಾದ ಕುರಿತು ಎಲ್ಲೆಡೆ ಈಗ ಸಕಾರಾತ್ಮಕ ಅಭಿಪ್ರಾಯ ಕೇಳುತ್ತಿದೆ. ಭಾರತದಲ್ಲಿ ಇದು ಮೊದಲ ದಿನವೇ 100 ಕೋಟಿ ಗಳಿಕೆ ಮಾಡುವ ಸೂಚನೆಯಿದೆ. ಜಾಗತಿಕವಾಗಿ ಈಗಾಗಲೇ ಈ ಸಿನಿಮಾ ಸದ್ದು ಮಾಡುತ್ತಿದೆ. ಅಮೆರಿಕದಲ್ಲಿ ಸಿನಿಮಾ ಬಿಡುಗಡೆ ಪೂರ್ವದಲ್ಲಿಯೇ 2.6 ದಶಲಕ್ಷ ಆದಾಯ ಗಳಿಸಿರುವ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಇಷ್ಟು ಗಳಿಕೆ ಮಾಡಿದೆ.

ಪಿವಿಆರ್‌ ಐನಾಕ್ಸ್‌ ಷೇರು ದರ ಹೇಗಿದೆ?

ಇಂದು ಪಿವಿಆರ್‌ ಐನಾಕ್ಸ್‌ ಷೇರು ದರ 1,452.50 ರೂಗೆ ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಳಿಕೆ ಹಾದಿಯಲ್ಲಿದೆ. ಕಳೆದ ಐದು ದಿನಗಳಲ್ಲಿ ಐನಾಕ್ಸ್‌ ಷೇರು ದರ ಶೇಕಡ 4.73ರಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಷೇರು ದರ ಶೇಕಡ 8ರಷ್ಟು ಏರಿಕೆ ಕಂಡಿದೆ. ಆದರೆ, 6 ತಿಂಗಳಿಗೆ ಹೋಲಿಸಿದರೆ ಶೇಕಡ 13ರಷ್ಟು ಇಳಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 5.5ರಷ್ಟು ಏರಿಕೆ ದಾಖಲಿಸಿದೆ. ಕಳೆದ ಐದು ವರ್ಷಗಳಲ್ಲಿ ಶೇಕಡ 0.35ರಷ್ಟು ಏರಿಕೆ ಕಂಡಿದೆ.

ಗಮನಿಸಿ: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಓದುಗರಿಗೆ ಷೇರುಪೇಟೆಯ ಮಾಹಿತಿ ನೀಡುವ ಉದ್ದೇಶದಿಂದ ಈ ವಿವರ ಪ್ರಕಟಿಸಿದೆ. ಷೇರುಪೇಟೆಯು ಸದಾ ಅಪಾಯಗಳಿಂದ ಕೂಡಿರುತ್ತದೆ. ಯಾವುದೇ ಕಾರಣಕ್ಕೂ ಇದೇ ಷೇರು ಖರೀದಿಸಿ ಎಂದು ಎಚ್‌ಟಿ ಕನ್ನಡವು ಪ್ರೋತ್ಸಾಹಿಸುವುದಿಲ್ಲ. ಮಾರುಕಟ್ಟೆಯ ಹೂಡಿಕೆ ರಿಸ್ಕ್‌ಗಳನ್ನು ಗಮನದಲ್ಲಿಟ್ಟುಕೊಂಡು ಸ್ವಂತ ವಿವೇಚನೆಯಿಂದ ಹೂಡಿಕೆದಾರರು ನಿರ್ಧಾರ ತೆಗೆದುಕೊಳ್ಳಬೇಕು.

ಪ್ರಭಾಸ್-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾದ ಸಮಗ್ರ ಮಾಹಿತಿ ಇಲ್ಲಿದೆ