Kannappa Movie: ವಿಷ್ಣು ಮಂಚು ನಟನೆಯ ಕಣ್ಣಪ್ಪ ಸಿನಿಮಾ ಈ ತಿಂಗಳು ಬಿಡುಗಡೆಯಾಗದು, ಇಲ್ಲಿದೆ ಹೊಸ ದಿನಾಂಕ
Kannappa new release date: ವಿಷ್ಣು ಮಂಚು ನಟಿಸಿರುವ ಬಹುನಿರೀಕ್ಷಿತ ಪೌರಾಣಿಕ ಡ್ರಾಮಾ "ಕಣ್ಣಪ್ಪ" ಸಿನಿಮಾ ಈ ತಿಂಗಳು ಬಿಡುಗಡೆಯಾಗದು. ಚಿತ್ರತಂಡವು ಹೊಸ ದಿನಾಂಕ ನಿಗದಿಪಡಿಸಿದೆ. ಜೂನ್ 27, 2025ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Kannappa new release date: ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಡ್ರಾಮಾ ಕಣ್ಣಪ್ಪ ಸಿನಿಮಾವು ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿದೆ. ಚಿತ್ರತಂಡವು ಹೊಸ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ಸಮಯದಲ್ಲಿ ಚಿತ್ರದ ತಯಾರಕರು ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ.
ತರಣ್ ಆದರ್ಶ್ ಬುಧವಾರ ಎಕ್ಸ್‌ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. "ವಿಷ್ಣು ಮಂಚು ಅವರ ಪ್ಯಾನ್-ಇಂಡಿಯಾ ಚಿತ್ರ 'ಕಣ್ಣಪ್ಪ' ಹೊಸ ಬಿಡುಗಡೆಯ ದಿನಾಂಕ ಲಾಕ್ ಮಾಡಿದೆ. 27 ಜೂನ್ 2025ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಗಿನ ವಿಶೇಷ ಸಭೆಯಲ್ಲಿ ಸಿನಿಮಾ ತಯಾರಕರು ಹೊಸ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕನ್ನಪ್ಪ ಸಿನಿಮಾದಲ್ಲಿ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್‌ಕುಮಾರ್, ಕಾಜೋಲ್ ಅಗರ್‌ವಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನವಿದೆ. ಎಂ ಮೋಹನ್‌ಬಾಬು ನಿರ್ಮಾಣ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ತರುಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಭುದೇವ, ವಿಷ್ಣು ಮಂಚು, ಮೋಹನ್ ಬಾಬು ಮತ್ತು ವಿನಯ್ ಮಹೇಶ್ವರ್ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ಲಖನೌ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕಣ್ಣಪ್ಪ ಚಿತ್ರದ ಪೋಸ್ಟರ್‌ಗೆ ಸಹಿ ಹಾಕಿದರು. ಕಣ್ಣಪ್ಪ ತಂಡವು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಗ್ರೂಪ್ ಫೋಟೋಗಳನ್ನು ತೆಗೆದುಕೊಳ್ಳುವ ಮೊದಲು ಗಾಜಿನ ಚಿತ್ರಕಲೆ ಮತ್ತು ಇತರ ಉಡುಗೊರೆಗಳನ್ನು ನೀಡಿದ್ದಾರೆ.
ಈ ಸಿನಿಮಾ ಬಿಡುಗಡೆ ಏಕೆ ವಿಳಂಬವಾಯಿತು ಎಂದು ಎಕ್ಸ್‌ನಲ್ಲಿ ವಿಷ್ಣು ಮಂಚು ತಿಳಿಸಿದ್ದಾರೆ. "ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು ಮತ್ತು ಚಲನಚಿತ್ರ ಪ್ರೇಮಿಗಳೇ ಕಣ್ಣಪ್ಪ ಸಿನಿಮಾವನ್ನು ಜೀವಂತಿಕೆಯಿಂದ ತರುವುದು ಅದ್ಭುತ ಪ್ರಯಾಣವಾಗಿದೆ. ಅತ್ಯುನ್ನತ ಮಾನದಂಡಗಳನ್ನು ಪೂರೈಸುವ ಸಿನಿಮೀಯ ದೃಶ್ಯವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ವಿಎಫ್‌ಎಕ್ಸ್ ಕೆಲಸದ ಅಗತ್ಯವಿದೆ. ಇದಕ್ಕಾಗಿ ನಮಗೆ ಇನ್ನಷ್ಟು ಸಮಯದ ಅಗತ್ಯವಾಗಿದೆ. ಸಿನಿಮಾದ ಪ್ರಮುಖ ದೃಶ್ಯಗಳನ್ನು ಪೂರ್ಣಗೊಳಿಸಲು ಇನ್ನೂ ಕೆಲವು ವಾರಗಳು ಬೇಕಾಗುತ್ತವೆ. ಇದರಿಂದ ಈ ಪ್ರಾಜೆಕ್ಟ್ ಬಿಡುಗಡೆ ಕೊಂಚ ವಿಳಂಬವಾಗಲಿದೆ" ಎಂದು ವಿಷ್ಣು ಮಂಚು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಣ್ಣಪ್ಪ ಸಿನಿಮಾದ ಬಗ್ಗೆ
ಇದು ತೆಲುಗು ಭಾಷೆಯ ಪೌರಾಣಿಕ ಕಥೆಯಿರುವ ಸಿನಿಮಾ. ಶಿವಭಕ್ತ ಕಣ್ಣಪ್ಪನ ಕಥೆಯನ್ನು ಹೊಂದಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಮೋಹನ್ ಬಾಬು ನಿರ್ಮಾಣದ ಈ ಚಿತ್ರದಲ್ಲಿ ವಿಷ್ಣು ಮಂಚು "ಕಣ್ಣಪ್ಪ" ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್ ಮತ್ತು ಪ್ರಭಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪಾರ್ವತಿ ದೇವಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜೂನ್ 27, ಜೂನ್ 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
