ಜ್ಯೂ. ಎನ್‌ಟಿಆರ್-ಕೊರಟಾಲ ಶಿವ ದೇವರ ಸಿನಿಮಾಗೆ 1985ರ ಕರಮಚೇಡು ಘಟನೆಯೇ ಸ್ಪೂರ್ತಿ? ಸಿನಿಮಾ ನೋಡಿದವರು ಹೇಳಿದ್ದೇನು?
ಬಹು ನಿರೀಕ್ಷಿತ ದೇವರ ಸಿನಿಮಾ 1985ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಕರಮಚೇಡು ಹತ್ಯಾಕಾಂಡದ ಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡಿದವರಾಗಲೀ, ಚಿತ್ರತಂಡವಾಗಲೀ ಇದುವರೆಗೂ ಚಿತ್ರಕಥೆಯ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಚಿತ್ರ ಸೆಪ್ಟೆಂಬರ್ 27 ರಂದು ತೆರೆ ಕಾಣುತ್ತಿದೆ.
ಸೆಪ್ಟೆಂಬರ್ 27 ರಂದು ತೆರೆ ಕಾಣುತ್ತಿರುವ ಜ್ಯೂನಿಯರ್ ಎನ್‌ಟಿಆರ್ ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ದೇವರ ಸಿನಿಮಾ, 2024 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾ ಟ್ರೈಲರ್ ಹಾಗೂ ಹಾಡುಗಳು ದೊಡ್ಡ ಬಝ್ ಸೃಷ್ಟಿಸಿದೆ.
ನೈಜ ಘಟನೆ ಆಧರಿತ ಸಿನಿಮಾ?
ವರದಿಯ ಪ್ರಕಾರ, ದೇವರ ಭಾಗ 1 ಸಿನಿಮಾ, 1985 ರ ಕರಮಚೇಡು ಘಟನೆಯ ನಿರೂಪಣೆಯ ಸುತ್ತ ಸುತ್ತುತ್ತದೆ. ಆಂಧ್ರಪ್ರದೇಶದಲ್ಲಿ ನಡೆದ ಈ ಭೀಕರ ಘಟನೆಯಲ್ಲಿ, ಅನೇಕ ದಲಿತ ಸಮುದಾಯದವರು ಕೊಲ್ಲಲ್ಪಟ್ಟರು ಮತ್ತು ಇನ್ನೂ ಹಲವರು ಗಾಯಗೊಂಡರು. ಭೂಮಾಲೀಕರ ಕ್ರೌರ್ಯದಿಂದ ಇನ್ನೂ ಕೆಲವರು ನಿರಾಶ್ರಿತರಾದರು. ದಲಿತ ಸಮುದಾಯದ ಮೇಲೆ ಕಮ್ಮ ಸಮುದಾಯದ ಜಮೀನುದಾರರು ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದರು. ಹೆಚ್ಚಿನ ದಲಿತ ಜನರು ಪ್ರಾಣ ಕಳೆದುಕೊಂಡರೆ, ಕೆಲವರು ತಮ್ಮನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಮನೆಗಳಿಂದ ಓಡಿಹೋದರು. ಕರಮಚೇಡು ಹತ್ಯಾಕಾಂಡವು ಆಂಧ್ರಪ್ರದೇಶದ ಇತಿಹಾಸದಲ್ಲಿ ನೋವಿನ ಅಧ್ಯಾಯವಾಗಿದೆ. ಕೊರಟಾಲ ಶಿವ, ಇದೇ ಘಟನೆಯ ಸ್ಪೂರ್ತಿಯಿಂದ ಸಿನಿಮಾ ಮಾಡಿದ್ದಾರಾ ಅಥವಾ ಬೇರೆ ಕಥೆಯೇ ಅನ್ನೋದು ಇನ್ನು 3 ದಿನಗಳಲ್ಲಿ ತಿಳಿಯಲಿದೆ. ಇದುವರೆಗೂ ಸಿನಿಮಾ ನೋಡಿದವರಾಗಲೀ, ಚಿತ್ರತಂಡದವರಾಗಲೀ ಸಿನಿಮಾ ಕಥೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ದ್ವಿಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್
ಸಿನಿಮಾ ಟ್ರೈಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಇದು ಜೂನಿಯರ್ ಎನ್‌ಟಿಆರ್ ಅವರ ಕನಸುಗಳನ್ನು ಕಾಡುವ ದೇವರ ಪ್ರಪಂಚದ ಕೆಂಪು ಸಮುದ್ರದ ದೃಶ್ಯದೊಂದಿಗೆ ಪ್ರಾರಂಭವಾಗುವ ನಿರೂಪಣೆಯನ್ನು ಅನಾವರಣಗೊಳಿಸುತ್ತದೆ. ನಂತರ ಪ್ರಕಾಶ್ ರಾಜ್ ಅವರ ಧ್ವನಿಯೊಂದಿಗೆ ಚಿತ್ರದ ಎಲ್ಲಾ ಪಾತ್ರಗಳನ್ನು ಪರಿಚಯಿಸಲಾಗುತ್ತದೆ. ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ದೇವರ ಮತ್ತು ವರ ಎಂಬ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಭೈರಾ ಈ ಚಿತ್ರದ ವಿಲನ್. ಟ್ರೈಲರ್‌ನಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳು ಚಿತ್ರದ ಬಗ್ಗೆ ಬಹಳ ಆಸಕ್ತಿ ಕೆರಳಿಸುವಂತೆ ಮಾಡಿದೆ.
ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅವರ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಎನ್‌ಟಿಆರ್ ಎದುರು ವಿಲನ್ ಆಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ಹಾಗೂ ಇನ್ನಿತರು ಪೋಷಕ ಪಾತ್ರಗಳಲ್ಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬಂಡವಾಳ ಹೂಡಿದೆ. ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
155 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಖರೀದಿ
ದೇವರ ಸಿನಿಮಾ ಸೆಪ್ಟೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ತಿ ಮತ್ತು ಅರವಿಂದ್ ಸ್ವಾಮಿ ಅಭಿನಯದ ಮೀಯಳಗನ್ (ತಮಿಳು) ಮತ್ತು ವರುಣ್ ಧವನ್ ಸೋದರ ಸೊಸೆ ಅಂಜಿನಿ ಧವನ್ ಅಭಿನಯದ ಚೊಚ್ಚಲ ಚಿತ್ರ, ಬಿನ್ನಿ ಅಂಡ್ ಫ್ಯಾಮಿಲಿ (ಹಿಂದಿ) ಯೊಂದಿಗೆ ಚಿತ್ರಮಂದಿರಗಳಲ್ಲಿ ಸೆಣಸಲಿದೆ. ಆದರೂ ದೇವರ ಸಿನಿಮಾದೊಂದಿಗೆ ಈ ಎರಡೂ ಸಿನಿಮಾಗಳು ಸ್ಪರ್ಧೆಗೆ ಇಳಿಯುತ್ತಿಲ್ಲ. ಈ ಎರಡೂ ಸಿನಿಮಾಗಳಿಗೆ ಹೋಲಿಸಿದರೆ ದೇವರ ಚಿತ್ರದ ಕ್ರೇಜ್ ಹೆಚ್ಚಾಗಿದೆ.
ವರದಿಗಳ ಪ್ರಕಾರ ದೇವರ ಹಕ್ಕನ್ನು ನೆಟ್‌ಫ್ಲಿಕ್ಸ್ ವೇದಿಕೆ, 155 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದು, ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಕೆಲವು ದಿನಗಳ ನಂತರ ಒಟಿಟಿಯಿಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.