ಖುಷಿಯಿಂದ ಕಸ್ಟಡಿ ವರೆಗೆ; 2023ರಲ್ಲಿ ಫ್ಲಾಪ್ ಆದ ತೆಲುಗಿನ ಅಗ್ರ 10 ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  ಖುಷಿಯಿಂದ ಕಸ್ಟಡಿ ವರೆಗೆ; 2023ರಲ್ಲಿ ಫ್ಲಾಪ್ ಆದ ತೆಲುಗಿನ ಅಗ್ರ 10 ಸಿನಿಮಾಗಳಿವು

ಖುಷಿಯಿಂದ ಕಸ್ಟಡಿ ವರೆಗೆ; 2023ರಲ್ಲಿ ಫ್ಲಾಪ್ ಆದ ತೆಲುಗಿನ ಅಗ್ರ 10 ಸಿನಿಮಾಗಳಿವು

2023ರಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ತೆಲುಗಿನ ಕೆಲವು ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. ಈ ಪೈಕಿ ಅಗ್ರ 10 ಚಿತ್ರಗಳ ಪಟ್ಟಿ ಇಲ್ಲಿದೆ.

2023ರಲ್ಲಿ ಫ್ಲಾಪ್ ಆಗಿರುವ 10 ತೆಲುಗು ಸಿನಿಮಾಗಳಿವು
2023ರಲ್ಲಿ ಫ್ಲಾಪ್ ಆಗಿರುವ 10 ತೆಲುಗು ಸಿನಿಮಾಗಳಿವು

ಬೆಂಗಳೂರು: ಜಗತ್ತು 2023ರ ಕೊನೆಯಲ್ಲಿದೆ, ಇನ್ನ ಮೂರು ದಿನಗಳು ಕಳೆದರೆ 2024ರ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಟಾಲಿವುಡ್‌ನಲ್ಲಿ ಈ ವರ್ಷ ಕೆಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿದ್ದವು. ಇದರ ನಡುವೆಯೇ ನಿರೀಕ್ಷೆ ಮೂಡಿಸಿ ಫ್ಲಾಪ್ ಆದ ಸಿನಿಮಾಗಳೂ ಇವೆ. ಈ ಪೈಕಿ ಸೋಲು ಕಂಡಿರುವ ಅಗ್ರ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಖುಷಿಯಿಂದ ಕಸ್ಟಡಿಯವರೆಗೆ ಯಾವೆಲ್ಲಾ ಸಿನಿಮಾಗಳು ಮಕಾಡೆ ಮಲಗಿದವು, ಗಲ್ಲಾಪಟ್ಟಿ ಮಾತ್ರವಲ್ಲದೆ, ವೀಕ್ಷಕರಿಗೂ ನಿರಾಸೆ ಮೂಡಿಸಿದವು ಅನ್ನೋದರ ಮಾಹಿತಿಯನ್ನ ನೀಡಲಾಗಿದೆ.

ಖುಷಿ

ವಿಜಯ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಕಾಂಬಿನೇಷನ್‌ನಲ್ಲಿ ತೆರೆಗೆ ಬಂದಿದ್ದ ರೋಮ್ಯಾಂಟಿಕ್ ಕಂ ಕಾಮೆಡಿ ಸಿನಿಮಾ ಖುಷಿ 2023ರಲ್ಲಿ ಫ್ಲಾಪ್ ಆದ ತೆಲುಗು ಸಿನಿಮಾಗಳಲ್ಲಿ ಒಂದು. ವಿವಾದಾತ್ಮಕ ವಿಷಯಗಳ ಮೂಲಕವೇ ಹೆಚ್ಚು ಸದ್ದು ಮಾಡಿತೇ ಹೊರತು ಗಲ್ಲಾಪಟ್ಟಿಯಲ್ಲಿ ಫುಲ್ ಸೈಲೆಂಟ್ ಆಗಿತ್ತು. ಖುಷಿ ಸೋಲಿನ ಮೂಲಕ ವಿಜಯದೇವರಕೊಂಡ ಅವರ ಸತತ ಸೋಲುಗಳ ಸರಣಿ ಮುಂದುವರಿಸಿದರೆ, ಸಮಂತಾ ಕೂಡ ತನ್ನ ವೈಯಕ್ತಿಕ ಸಾಮರ್ಥ್ಯವನ್ನು ಹೊರಹಾಕಲು ವಿಫಲರಾದರು.

ಶಾಕುಂತಲಂ

ಮಹಾಕಾವ್ಯಗಳನ್ನು ಆಧರಿಸಿದ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚುತ್ತಾರೆ. ಆದರೆ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಮಕ್ಕಳ ಅನಿಮೇಟೆಡ್ ಸಿನಿಮಾ ರೀತಿ ಇತ್ತು ಎಂಬುದು ಈ ಚಿತ್ರ ನೋಡಿದವರ ಅಭಿಪ್ರಾಯ. ಗುಣಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು.

ಏಜೆಂಟ್

ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್ ಸಿನಿಮಾ ಕೂಡ ಈ ವರ್ಷ ಅಟ್ಟರ್ ಫ್ಲಾಪ್ ಆದ ಸಿನಿಮಾಗಳಲ್ಲಿ ಒಂದು. ಥಿಯೇಟರ್‌ಗೆ ಎಷ್ಟು ಬೇಗ ಬಂದಿತೋ ಅಷ್ಟೇ ಬೇಗ ಹೊರಟು ಹೋಯಿತು. ಅಖಿಲ್ ಅಕ್ಕಿನೇನಿ ಅವರ ತಂದೆ ಅಕ್ಕಿನೇನಿ ನಾಗಾರ್ಜುನ. ಅಖಿಲ್ ಅವರ ಸಹೋದರ ನಾಗ ಚೈತನ್ಯ. ತೆಲುಗಿನ ಖ್ಯಾತ ಸಿನಿ ಕುಟುಂಬದದಿಂದ ಬಂದಿದ್ದರೂ ಇವರ ಏಜೆಂಟ್ ಸಿನಿಮಾ ಪ್ರೇಕ್ಷನ ಮನ ಸೆಳೆಯುವಲ್ಲಿ ವಿಫಲವಾಯಿತು. ಏಜೆಂಟ್ ಬಿಡುಗಡೆಗೂ ಮುನ್ನ ಭಾರಿ ಪ್ರಚಾರವನ್ನು ನೀಡಲಾಗಿತ್ತು. ಆದರೆ ಪ್ರಚಾರಕ್ಕೆ ತಕ್ಕಂತೆ ಸಿನಿಮಾ ಹಿಟ್ ಆಗಲಿಲ್ಲ.

ಭೋಲಾ ಶಂಕರ್

ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾಗಳೆಂದರೆ ತೆಲುಗು ರಾಜ್ಯಗಳು, ಕರ್ನಾಟಕ, ತಮಿಳುನಾಡಿನಲ್ಲೂ ಸಾಕಷ್ಟು ಕ್ರೇಜ್ ಇರುತ್ತದೆ. ಆದರೆ ಚಿರಂಜೀವಿ, ಕೀರ್ತಿ ಸುರೇಶ್ ಹಾಗೂ ತಮನ್ನಾ ಭಾಟಿಯಾ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದ ಭೋಲಾ ಶಂಕರ್ ಹೇಳಿಕೊಳ್ಳುವಂತ ಯಶಸ್ಸು ಕಾಣಲಿಲ್ಲ. ಇದು ಸಿನಿಮಾ 2015ರಲ್ಲಿ ತೆರೆ ಕಂಡಿದ್ದ ತಮಿಳಿನ ಅಜಿತ್ ಕುಮಾರ್ ಅವರ ವೇದಾಲಂ ಚಿತ್ರದ ರಿಮೇಕ್ ಆಗಿದೆ. ಮೆಹರ್ ರಮೇಶ್ ಈ ಚಿತ್ರವನ್ನ ನಿರ್ದೇಶಿಸಿದ್ದರು.

ಕಸ್ಟಡಿ

ಕಸ್ಟಡಿ ಸಿನಿಮಾದಲ್ಲಿ ಆಕ್ಷನ್ ಕಂ ಎಂಟರ್‌ಟೈನರ್‌ ಆಗಿ ಕಾಣಿಸಿಕೊಂಡಿದ್ದ ನಾಗ ಚೈತನ್ಯ ಅವರ ಮೊದಲ ಪ್ರಯತ್ನ ಫಲ ನೀಡಿಲ್ಲ. ಈ ಸಿನಿಮಾದಲ್ಲಿ ಕಾನ್‌ಸ್ಟೇಬಲ್ ಜೀವನದಲ್ಲಿ 48 ಗಂಟೆಗಳ ಸಂಚಿಕೆಯ ಕಥೆಯನ್ನು ವಿವರಿಸುತ್ತದೆ. ಸಿನಿಮಾ ಸೋಲಿಗೆ ಮತ್ತೊಂದು ಕಾರಣವೆಂದರೆ ಹಲವಾರರು ಪಾತ್ರಗಳು ಹಾಗೂ ಉಪಕಥಾವಸ್ತುಗಳು ಮಧ್ಯದಲ್ಲಿ ಸೇರಿಕೊಂಡಿರುವುದು. ಕೃತಿ ಶೆಟ್ಟಿ ಮತ್ತು ಅರವಿಂದ್ ಸ್ವಾಮಿ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಅನ್ನಿ ಮಂಚಿ ಶಕುನಮಲೇ

ಈ ವರ್ಷ ತೆಲುಗಿನಲ್ಲಿ ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಅನ್ನಿ ಮಂಚಿ ಶಕುನಮಲೇ ಕೂಡ ಒಂದು. ಬಿವಿ ನಂದಿನಿ ರೆಡ್ಡಿ ನಿರ್ದೇಶನದ ಈ ಸಿನಿಮಾ ಗಲ್ಲಾಪಟ್ಟಿಯಲ್ಲಿ ಸೌಂಡ್ ಮಾಡಲೇ ಇಲ್ಲ. ಇದು ಕೂಡ ಬಂದಷ್ಟೇ ವೇಗವಾಗಿ ಥಿಯೇಟರ್‌ಗಳನ್ನು ತೊರೆಯಿತು. ನಾಯಕನಾಗಿ ಸಂತೋಷ್ ಶೋಬಾನ್, ನಾಯಕಿಯಾಗಿ ಮಾಳವಿಕಾ ನಾಯರ್ ನಟಿಸಿದ್ದರು. ನಾಯರ್ ಅವರ ತಂದೆಯ ಪಾತ್ರದಲ್ಲಿ ರಾಜೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದರು.

ಬ್ರೋ

ಸಾಯಿ ಧರಂ ತೇಜ್ ಅಭಿನಯ ಹಾಗೂ ಪವನ್ ಕಲ್ಯಾಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬ್ರೋ ಕೂಡ ಈ ವರ್ಷ ಸೋಲು ಕಂಡಿರುವ ಸಿನಿಮಾಗಳ ಪಟ್ಟಿಯಲ್ಲಿದೆ. ಈ ಸಿನಿಮಾಗೆ ತಮನ್ ಎಸ್ ಅವರ ಸಂಗೀತವನ್ನು ನೀಡಿದ್ದರು. ಆದರೆ ಬಾಕ್ಸ್‌ಆಫೀಕ್ಸ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿದೆ.

ಉಸ್ತಾದ್

ನಾಯಕನಾಗಿ ಶ್ರೀಸಿಂಹ ಕೊಡೂರಿ ಹಾಗೂ ಕಾವ್ಯ ಕಲ್ಯಾಣ್‌ರಾಮ್ ಅಭಿನಯದ ಉಸ್ತಾದ್ 2023ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಪಾಣಿದೀಪ್ ನಿರ್ದೇಶನದ ಈ ಮೂವಿ ಕೂಡ ಹೇಳಿಕೊಳ್ಳುವಂತ ಹಿಟ್ ಆಗಲೇ ಇಲ್ಲ.

ಗಾಂಡೀವಧಾರಿ ಅರ್ಜುನ

40 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಗಾಡೀವಧಾರಿ ಅರ್ಜುನ ಸಿನಿಮಾ ಗಲ್ಲಾಪಟ್ಟಿಯಲ್ಲಿ ಗಳಿಸಿದ್ದು ಕೇವಲ 1.6 ಕೋಟಿ ರೂಪಾಯಿ. ತೆಲುಗಿನ ಅಟ್ಟರ್ ಫ್ಲಾಪ್ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ವರುಣ್ ತೇಜ್, ಸಾಕ್ಷಿ ವೈದ್ಯ, ವಿಮಲಾ ರಾಮನ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರೂಲ್ಸ್ ರಂಜನ್

ನೇಹಾ ಶೆಟ್ಟಿ, ಮೆಹರ್ ಚಾಹಲ್, ಕಿರಣ್ ಅಬ್ಬಾವರಂ, ಅಭಿಮನ್ಯು ಸಿಂಗ್, ಮಾರ್ಕಂಡ್ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ರೂಲ್ಸ್ ರಂಜನ್ ಕೂಡ ಈ ವರ್ಷ ಸೋಲು ಕಂಡಿರುವ ಸಿನಿಮಾ. ಇವುಗಳ ಜೊತೆಗೆ ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್ ಸೇರಿದಂತೆ ಹಲವು ಸಿನಿಮಾಗಳು ತೆಲುಗಿನಲ್ಲಿ ಸೋಲು ಕಂಡಿವೆ.

Whats_app_banner