Lakshmi Manchu: ದಕ್ಷಿಣದ ಪುರುಷರಿಗೆ ತಮ್ಮ ಸಹೋದರಿಯರು ಅಥವಾ ಮಗಳು ಸಿನಿಮಾದಲ್ಲಿ ನಟಿಸೋದು ಇಷ್ಟನೇ ಇಲ್ಲ, ಹೀಗ್ಯಾಕೆ ಅಂದ್ರು ಲಕ್ಷ್ಮಿ ಮಂಚು
ದಕ್ಷಿಣದ ಪುರುಷರಿಗೆ ತಮ್ಮ ಮಗಳು, ಸಹೋದರಿಯರು ಸಿನಿಮಾ ಕ್ಷೇತ್ರದಲ್ಲಿ ನಟಿಸುವುದು ಚೂರು ಇಷ್ಟವಾಗೋದಿಲ್ಲ ಎಂದು ಜನಪ್ರಿಯ ನಟಿ ಲಕ್ಷ್ಮಿ ಮಂಚು ಹೇಳಿದ್ದಾರೆ. ಮೋಹನ್ ಬಾಬು ಮಗಳಾಗಿದ್ರು ಸಿನಿರಂಗದಲ್ಲಿ ಅಸ್ತಿತ್ವ ಸ್ಥಾಪಿಸಲು ಹೇಗೆ ಕಷ್ಟಪಟ್ಟೆ ಎಂಬ ವಿವರವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಲಕ್ಷ್ಮಿ ಮಂಚು ನೀಡಿದ್ದಾರೆ.

ಬೆಂಗಳೂರು: ಲಕ್ಷ್ಮಿ ಮಂಚು ಭಾರತದ ಜನಪ್ರಿಯ ನಟಿ. ಮೋಹನ್ ಬಾಬು ಮಗಳಾಗಿದ್ದರೂ ಮುಂಬೈಗೆ ತೆರಳಿ ಟಾಲಿವುಡ್‌ನಲ್ಲಿ ಅವಕಾಶ ಪಡೆಯಲು ಹೆಣಗಾಡುತ್ತಿರುವ ಬಗ್ಗೆ ಇತ್ತೀಚೆಗೆ ಲಕ್ಷ್ಮಿ ಮಂಚು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಉತ್ತರ ಭಾರತಕ್ಕೆ ತೆರಳಲು ನನ್ನ ಕುಟುಂಬ ಅಡ್ಡಿ ಮಾಡಿತು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ನನ್ನ ಕುಟುಂಬದ್ದು ಸಂಕೋಚ ಸ್ವಭಾವ
"ನನ್ನನ್ನು ದೀರ್ಘಕಾಲದವರೆಗೆ ಮುಂಬೈಗೆ ಸ್ಥಳಾಂತರಗೊಳ್ಳಲು ಕುಟುಂಬ ಬಿಡಲಿಲ್ಲ. ಅವರು ತಮ್ಮ ಊರಿನೊಂದಿಗೆ ಅಂತಹ ನಂಟು ಹೊಂದಿದ್ದರು. ನನ್ನ ಕುಟುಂಬಕ್ಕೆ ತನ್ನದೇ ಸಂಕೋಚ ಸ್ವಭಾವ ಇತ್ತು. ನಾನು ಮುಂಬೈನಲ್ಲಿ ಬೆಸ್ಟ್ ಫ್ರೆಂಡ್ ರಾಕುಲ್ ಪ್ರೀತ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಮುಂಬೈಗೆ ಶಿಫ್ಟ್ ಆಗು ಎಂದು ಅವರು ಒತ್ತಾಯಿಸುತ್ತಿದ್ದರು. ರಾಣಾ (ದಗ್ಗುಬಾಟಿ) ಜತೆಗೆ ಚಾಟ್ ಮಾಡುತ್ತಿದ್ದೆ. ಹೈದರಾಬಾದ್‌ನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ ಎಂದು ರಾಣಾ ಕೂಡ ಹೇಳುತ್ತಿದ್ದರು. ಆದರೆ, ನನ್ನ ಕುಟುಂಬಕ್ಕೆ ನಾನು ಮುಂಬೈಗೆ ಹೋಗುವುದು ಇಷ್ಟವಿರಲಿಲ್ಲ" ಎಂದು ಲಕ್ಷ್ಮಿ ಮಂಚು ಹೇಳಿದ್ದಾರೆ.
ದಕ್ಷಿಣದ ಪುರುಷರ ಸ್ವಭಾವ
"ನನ್ನ ಸಹೋದರರಿಗೆ ಸುಲಭವಾಗಿ ದೊರಕುವ ವಿಷಯಗಳು ನನಗೆ ಕಠಿಣವಾಗಿ ಪರಿಣಮಿಸಿತ್ತು. ನನ್ನ ಸಹೋದರರು (ವಿಷ್ಣು, ಮನೋಜ್) ಸುಲಭವಾಗಿ ಪಡೆಯುವ ವಿಷಯಗಳನ್ನು ಪಡೆಯಲು ನಾನು ದೊಡ್ಡ ಹೋರಾಟವನ್ನೇ ಮಾಡಬೇಕಿತ್ತು" ಎಂದು ಲಕ್ಷ್ಮಿ ಮಂಚು ಹೇಳಿದ್ದಾರೆ. "ದಕ್ಷಿಣದ ಪುರುಷರು ಹೀರೋಗಳ ಸಹೋದರಿಯರು ಅಥವಾ ಹೆಣ್ಣುಮಕ್ಕಳು ನಟನಾ ಕ್ಷೇತ್ರಕ್ಕೆ ಆಗಮಿಸುವುದನ್ನು ಒಪ್ಪುವುದಿಲ್ಲ. ಆದರೆ, ಪ್ರಕಾಶ್ ಕೋವೆಲಮುಡಿ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅನಗನಗ ಓ ಧೀರುಡು ಸಿನಿಮಾದ ಮೂಲಕ ಸಿನಿಕ್ಷೇತ್ರ ಪ್ರವೇಶಿಸಿದೆ. ನನ್ನ ತಂದೆ ಮತ್ತು ಪ್ರಕಾಶ್ ತಂದೆ (ರಾಘವೇಂದ್ರ ರಾವ್) ಸಿನಿಮಾದಲ್ಲಿ ನಟಿಸುವಂತಹ ಆಲೋಚನೆಯನ್ನು ನನ್ನ ತಲೆಯಿಂದ ತೆಗೆದುಹಾಕಲು ಸಾಕಷ್ಟು ಪ್ರಯತ್ನಿಸಿದರು" ಎಂದು ಅವರು ಹೇಳಿದ್ದಾರೆ.
ಲಕ್ಷ್ಮಿ ಮಂಚು ಅವರ ವೃತ್ತಿಜೀವನ
ಲಕ್ಷ್ಮಿ ಮಂಚು ಕೆಲವು ಕಾಲ ಅಮೆರಿಕದಲ್ಲಿ ಉದ್ಯೋಗ ಮಾಡಿದರು. ದಿ ಓಡ್ ಮತ್ತು ಡೆಡ್ ಏರ್‌ನಂತಹ ಸಿನಿಮಾಗಳು ಮಾತ್ರವಲ್ಲದೆ ಲಾಸ್ ವೇಗಾಸ್, ಬೋಸ್ಟನ್‌ನಲ್ಲಿ ಹಲವು ಟಿವಿ ಶೋಗಳಲ್ಲಿ ಭಾಗವಹಿಸಿದರು. 2021ರಲ್ಲಿ ಇವರು ಟಾಲಿವುಡ್‌ಗೆ ಹಿಂತುರುಗಿದರು. ಗುಡೆನೊ ಗೋದಾರಿ, ಡಬ್ಲ್ಯು/ಒ ರಾಮ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಲಯಾಳಂ ಸಿನಿಮಾಕ್ಕೆ ಎಂಟ್ರಿ ನೀಡಿದರು. 2022ರಲ್ಲಿ ಮೋಹನ್‌ಲಾಲ್ ನಟನೆಯ ಮಾನ್‌ಸ್ಟಾರ್ ಸಿನಿಮಾದಲ್ಲಿ ಅವಕಾಶ ಪಡೆದರು. ಈ ವರ್ಷ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ವೆಬ್ ಸರಣಿ ಯಕ್ಷಿಣಿಯಲ್ಲಿ ನಟಿಸಿದ್ದಾರೆ.
ಮಂಚು ಲಕ್ಷ್ಮಿ ಪ್ರಸನ್ನ ಅವರು ನಟಿಯಾಗಿ, ಪ್ರೊಡ್ಯುಸರ್ ಮತ್ತು ಟೆವಿ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ತೆಲುಗು ಸಿನಿಮಾ ಮತ್ತು ಅಮೆರಿಕ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಹಿರಿಯ ನಟ ಮೋಹನ್ ಬಾಬು ಮಗಳಾದ ಇವರು ಒಕ್ಲಾಹೊಮಾ ಸಿಟಿ ಯೂನಿವರ್ಸಿಟಿಯಲ್ಲಿ ಥಿಯೇಟರ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಎರಡು ಫಿಲ್ಮ್‌ಫೇರ್ ಸೌತ್ ಮತ್ತು ಎರಡು ನಂದಿ ಅವಾರ್ಡ್ ಪಡೆದಿದ್ದಾರೆ.
