ಕ್ಯಾಮರಾಗೆ ಅಡ್ಡ ಬಂದಿದ್ದೇ ತಪ್ಪಾಯ್ತು; ವ್ಯಕ್ತಿಗೆ ಹೊಡೆದಿದ್ದಲ್ಲದೆ ಅವಾಚ್ಯ ಶಬ್ಧ ಬಳಸಿದ ಮಂಚು ಲಕ್ಷ್ಮಿ
ತೆಲುಗು ವಾಹಿನಿಯೊಂದಕ್ಕೆ ಮಾತನಾಡಲು ಸಿದ್ದವಾಗುವಾಗ ಕ್ಯಾಮರಾ ಮುಂದೆ ವ್ಯಕ್ತಿಯೊಬ್ಬರು ಹಾದು ಹೋಗಿದ್ದಾರೆ. ಇದಕ್ಕೆ ಕೋಪಗೊಂಡ ಮಂಚು ಲಕ್ಷ್ಮಿ ನಿನ್ನ.... ಎಂದು ಬೈಯ್ಯುತ್ತಾ ಆತನ ಭುಜದ ಮೇಲೆ ಹೊಡೆದಿದ್ದಾರೆ. ಇದಾದ ನಂತರ ಮತ್ತೊಬ್ಬರು ಕ್ಯಾಮರಾ ಮುಂದೆ ಬಂದಿದ್ದಾರೆ. ಆಗ ಮತ್ತೆ ಲಕ್ಷ್ಮಿ ಕ್ಯಾಮರಾ ಹಿಂದೆ ಹೋಗು ಡ್ಯೂಡ್ ಎಂದು ಗದರಿಸಿದ್ದಾರೆ.
ಮೋಹನ್ ಬಾಬು ಒಂದು ಕಾಲದಲ್ಲಿ ಟಾಲಿವುಡ್ನಲ್ಲಿ ಕಲೆಕ್ಷನ್ ಕಿಂಗ್ ಎನಿಸಿಕೊಂಡ ನಟ. ಕೆಲವೊಮ್ಮೆ ಮೋಹನ್ ಬಾಬು ತಮ್ಮ ವರ್ತನೆಯಿಂದಲೇ ಸುದ್ದಿಯಾಗುತ್ತಾರೆ. ಅವರ ಪುತ್ರಿ ಮಂಚು ಲಕ್ಷ್ಮಿ ಕೂಡಾ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಮತ್ತೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಮಂಚು ಲಕ್ಷ್ಮಿ ವ್ಯಕ್ತಿಯೊಬ್ಬರನ್ನು ಬೈದು ಸುದ್ದಿಯಾಗಿದ್ದಾರೆ.
ದುಬೈನಲ್ಲಿ ಜರುಗಿದ್ದ ಸೈಮಾ ಪ್ರಶಸ್ತಿ ಕಾರ್ಯಕ್ರಮ
ಕೆಲವು ದಿನಗಳ ಹಿಂದಷ್ಟೇ ದುಬೈನಲ್ಲಿ ಸೈಮಾ ಪ್ರಶಸ್ತಿ ಕಾರ್ಯಕ್ರಮ ನೆರವೇರಿತ್ತು. ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಮಂಚು ಲಕ್ಷ್ಮಿ ಕೂಡಾ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ವೇಳೆ ಆಕೆ ತೆಲುಗು ವಾಹಿನಿಯೊಂದಕ್ಕೆ ಮಾತನಾಡಲು ಸಿದ್ದವಾಗುವಾಗ ಕ್ಯಾಮರಾ ಮುಂದೆ ವ್ಯಕ್ತಿಯೊಬ್ಬರು ಹಾದು ಹೋಗಿದ್ದಾರೆ. ಇದಕ್ಕೆ ಕೋಪಗೊಂಡ ಮಂಚು ಲಕ್ಷ್ಮಿ ನಿನ್ನ.... ಎಂದು ಬೈಯ್ಯುತ್ತಾ ಆತನ ಭುಜದ ಮೇಲೆ ಹೊಡೆದಿದ್ದಾರೆ. ಇದಾದ ನಂತರ ಮತ್ತೊಬ್ಬರು ಕ್ಯಾಮರಾ ಮುಂದೆ ಬಂದಿದ್ದಾರೆ. ಆಗ ಮತ್ತೆ ಲಕ್ಷ್ಮಿ ಕ್ಯಾಮರಾ ಹಿಂದೆ ಹೋಗು ಡ್ಯೂಡ್ ಎಂದು ಗದರಿಸಿದ್ದಾರೆ. ಈ ವೇಳೆ ನಿರೂಪಕಿ, ಕ್ಯಾಮರಾ ಮ್ಯಾನ್ಗೆ ಕಟ್ ಹೇಳುತ್ತಿದ್ದರೆ, ಲಕ್ಷ್ಮಿ ಮಂಚು ಇರಲಿ ಇರಲಿ ಎಂದಿದ್ದಾರೆ.
ಜಯಸುಧಾ ಜೊತೆ ಮೋಹನ್ ಬಾಬು ವರ್ತನೆಗೂ ನೆಟಿಜನ್ಸ್ ವಿರೋಧ
ಇತ್ತೀಚೆಗೆ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಅಕ್ಕಿನೇನಿ ನಾಗೇಶ್ವರ್ ರಾವ್ ವಿಗ್ರಹ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಮೋಹನ್ ಬಾಬು ಸೇರಿದಂತೆ ಅನೇಕ ಟಾಲಿವುಡ್ ಗಣ್ಯರು ಆಗಮಿಸಿದ್ದರು. ವೇದಿಕೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಸಹೋದರಿ ಮಾತನಾಡುವಾಗ ಇತ್ತ ಜಯಸುಧಾ ಮೊಬೈಲ್ ನೋಡುತ್ತಿದ್ದರು. ಪಕ್ಕದಲ್ಲೇ ಕುಳಿತಿದ್ದ ಮೋಹನ್ ಬಾಬು ಆಕೆಯ ಮೊಬೈಲನ್ನು ಕಸಿದುಕೊಂಡು ಅಗೌರವವಾಗಿ ಕೈ ತೋರಿಸಿದ್ದಾರೆ. ಮೋಹನ್ ಬಾಬು ವರ್ತನೆಗೆ ಜಯಸುಧಾ ನಕ್ಕು ಸುಮ್ಮನಾಗಿದ್ದಾರೆ.
ಲಕ್ಷ್ಮಿ ವರ್ತನೆಗೆ ಬೇಸರ
ಮೋಹನ್ ಬಾಬು ಹಾಗೂ ಮಂಚು ಲಕ್ಷ್ಮಿ ಇಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಮ್ಮ ಫ್ಯಾಮಿಲಿಯೆಲ್ಲಾ ಹೀಗೇನಾ? ಸಾಮಾನ್ಯ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ನೀವು ಕಲಿತಿಲ್ವಾ? ಸೈಮಾದಂಥ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಮೋಹನ್ ಬಾಬುಗೆ ಮೂವರು ಮಕ್ಕಳು ಮಂಚು ಲಕ್ಷ್ಮಿ ಹಾಗೂ ಮಂಚು ವಿಷ್ಣು ಮೊದಲ ಪತ್ನಿ ವಿದ್ಯಾ ದೇವಿ ಮಕ್ಕಳು. ಆಕೆ ನಿಧನರಾದ ನಂತರ ಅವರ ಸಹೋದರಿ ನಿರ್ಮಲಾ ದೇವಿಯನ್ನು ಮೋಹನ್ ಬಾಬು ಮದುವೆ ಆದರು. ಈ ದಂಪತಿಗೆ ಜನಿಸಿದ ಮಗನೇ ಮಂಚು ಮನೋಜ್. ಈತ ಇತ್ತೀಚೆಗೆ ಮೌನಿಕಾ ರೆಡ್ಡಿಯನ್ನು ಎರಡನೇ ಮದುವೆ ಆಗಿದ್ದರು.