ಪಾಸೋ, ಫೇಲೋ; ಅನುಷ್ಕಾ, ನವೀನ್ ಜೋಡಿಯ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾಕ್ಕೆ ಪ್ರೇಕ್ಷಕರು ನೀಡಿದ ಮಾರ್ಕ್ಸ್ ಎಷ್ಟು?
ಅನುಷ್ಕಾ ಶೆಟ್ಟಿ, ನವೀನ್ ಪೊಲಿಶೆಟ್ಟಿ ನಟನೆಯ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಈ ಇಬ್ಬರ ಕಾಂಬಿನೇಷನ್‌ಗೆ ಪ್ರೇಕ್ಷಕರು ಸೈ ಎನ್ನುತ್ತಿದ್ದಾರೆ. ಈ ಚಿತ್ರವು ಐದು ವರ್ಷಗಳ ನಂತರ ಅನುಷ್ಕಾ ಶೆಟ್ಟಿ ಅವರನ್ನು ದೊಡ್ಡ ಪರದೆಯಲ್ಲಿ ಕಾಣುವಂತೆ ಮಾಡಿದೆ.
ಬಾಹುಬಲಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ 5 ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ನಾಯಕಿಯಾಗಿ ನಟಿಸಿರುವ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾ ಇದು ತೆರೆ ಕಂಡಿದೆ. ರೊಮ್ಯಾಂಟಿಕ್, ಕಾಮಿಡಿ ಕಥಾಹಂದರದ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆ ನವೀನ್ ಪೊಲಿಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ.
ಇಂದು ನಾಲ್ಕು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಈ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತ ಮಾತ್ರವಲ್ಲದೇ, ಅಮೆರಿಕಾದಲ್ಲಿನ ತೆಲುಗು ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿನಿಮಾ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂದು ಶಾರುಕ್ ಖಾನ್ ನಟನೆಯ ಜವಾನ್ ಸಿನಿಮಾ ಕೂಡ ಬಿಡುಗಡೆಯಾಗಿದೆ. ಈ ಸಿನಿಮಾವು ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾಕ್ಕೆ ಪೈಪೋಟಿ ನೀಡಲಿದೆ ಎಂದು ಗ್ರಹಿಸಲಾಗಿತ್ತು. ಆದರೆ ಇಂದು ಆರಂಭದಿಂದಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಈ ಚಿತ್ರವು ಗಲ್ಲಾಪೆಟ್ಟಿಗೆ ತುಂಬಿಸಲು ಸಹಾಯ ಮಾಡಿದೆ.
ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾ ಒಂದು ಶುದ್ಧ ಹಾಸ್ಯಮಯ ರೊಮ್ಯಾಂಟಿಕ್ ಸಿನಿಮಾ. ಈ ಸಿನಿಮಾದ ಮೂಲಕ ಮೊದಲ ಬಾರಿ ಅನುಷ್ಕಾ ಹಾಗೂ ನವೀನ್ ಪೊಲಿಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಕಾಮಿಡಿ ಜಾನರ್ ಸಿನಿಮಾಗಳಿಂದ ಖ್ಯಾತಿ ಪಡೆದ ನವೀನ್ ಜಾತಿರತ್ನಾಲು ಸಿನಿಮಾದ ಮೂಲಕ ಭರವಸೆ ಹುಟ್ಟಿಸಿದ್ದರು. ಅನ್ವಿತಾ ರಾವಲಿ ಶೆಟ್ಟಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಜೀವ ತುಂಬಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಒಟ್ಟಾರೆ ಕಾಮಿಡಿ, ಪಂಚಿಂಗ್ ಡೈಲಾಗ್, ಕುತೂಹಲಕಾರಿ ಕಥಾಹಂದರ, ಸ್ಕ್ರೀನ್ ಪ್ಲೇ ಮೂಲಕ ನಿರ್ದೇಶಕ ಮಹೇಶ್ ಬಾಬು ಪಿ ಗೆದ್ದಿದ್ದಾರೆ ಎನ್ನಬಹುದು.
ಹಾಸ್ಯ, ರೊಮ್ಯಾನ್ಸ್‌ನೊಂದಿಗೆ ಫೆಮಿನಿಸಂ, ಸಿಂಗಲ್ ಪೇರೆಂಟ್, ಬಾಡಿಗೆ ತಾಯಿ ಈ ವಿಷಯಗಳ ಮೇಲೂ ಗಮನ ಹರಿಸಿದೆ. ಸಿನಿಮಾ ನೋಡಿದ ಹಲವು ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿ ಎಂದು ಮನವಿ ಮಾಡಿದ್ದಾರೆ. 5 ವರ್ಷಗಳ ಬಳಿಕ ದೊಡ್ಡ ಪರದೆಯ ಮೇಲೆ ಕಾಣಿಸಿದ ಅನುಷ್ಕಾ ತಮ್ಮ ಅಮೋಘ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದಿದ್ದಾರೆ.
ಮಿಸ್ ಶೆಟ್ಟಿ ಮಿಸೆಸ್ ಪೊಲಿಶೆಟ್ಟಿ ಕಥೆ
ಈ ಸಿನಿಮಾದಲ್ಲಿ ಅನ್ವಿತಾ ರಾವಲಿ ಶೆಟ್ಟಿ ಲಂಡನ್‌ನಲ್ಲಿ ಶೆಫ್ ಆಗಿರುತ್ತಾಳೆ. ಆಕೆ ಅನಿವಾರ್ಯ ಕಾರಣಗಳಿಂದ ತಾಯಿಯೊಂದಿಗೆ ಭಾರತಕ್ಕೆ ಬಂದು ನೆಲೆಸುತ್ತಾಳೆ. ಚಿತ್ರದಲ್ಲಿ ಅನ್ವಿತಾ (ಅನುಷ್ಕಾ) ಕಟ್ಟಾ ಸ್ತ್ರೀವಾದಿಯಾಗಿದ್ದು, ಆಕೆ ಮದುವೆಯನ್ನು ದ್ವೇಷಿಸುತ್ತಿರುತ್ತಾಳೆ. ಆದರೆ ಆಕೆಗೆ ಸ್ವಂತ ಮಗುವನ್ನು ಹೊಂದುವ ಆಸೆ ಇರುತ್ತದೆ. ಅವಳು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಸಿದ್ದು ಪೊಲಿಶೆಟ್ಟಿ (ನವೀನ್ ಪೊಲಿಶೆಟ್ಟಿ) ಯನ್ನು ಭೇಟಿಯಾಗುತ್ತಾಳೆ. ಅಲ್ಲಿಂದ ಕಥೆಯ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ.
ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೊಲಿಶೆಟ್ಟಿ ಜೊತೆಗೆ ಹಿರಿಯ ನಟರಾದ ಜಯಸುಧಾ, ಮುರುಳಿ ಶರ್ಮಾ ಹಾಗೂ ಇತರರು ನಟಿಸಿದ್ದಾರೆ. ಈ ಚಿತ್ರಕ್ಕೆ ರಾಧನ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ಬಾಬು ಪಿ ನಿರ್ದೇಶನ ಚಿತ್ರಕ್ಕಿದೆ.