ನಭಾ ನಟೇಶ್‌ ಕನಸಿಗೆ ಕೊಳ್ಳಿ ಇಟ್ಟ 3 ವರ್ಷದ ಹಿಂದಿನ ಆ ಆಕ್ಸಿಡೆಂಟ್‌; ಫೀನಿಕ್ಸ್‌ ಹಕ್ಕಿಯಂತೆ ಎದ್ದ ವಜ್ರಕಾಯ ನಟಿಯ ಡಾರ್ಲಿಂಗ್‌ ನಾಳೆ ರಿಲೀಸ್
ಕನ್ನಡ ಸುದ್ದಿ  /  ಮನರಂಜನೆ  /  ನಭಾ ನಟೇಶ್‌ ಕನಸಿಗೆ ಕೊಳ್ಳಿ ಇಟ್ಟ 3 ವರ್ಷದ ಹಿಂದಿನ ಆ ಆಕ್ಸಿಡೆಂಟ್‌; ಫೀನಿಕ್ಸ್‌ ಹಕ್ಕಿಯಂತೆ ಎದ್ದ ವಜ್ರಕಾಯ ನಟಿಯ ಡಾರ್ಲಿಂಗ್‌ ನಾಳೆ ರಿಲೀಸ್

ನಭಾ ನಟೇಶ್‌ ಕನಸಿಗೆ ಕೊಳ್ಳಿ ಇಟ್ಟ 3 ವರ್ಷದ ಹಿಂದಿನ ಆ ಆಕ್ಸಿಡೆಂಟ್‌; ಫೀನಿಕ್ಸ್‌ ಹಕ್ಕಿಯಂತೆ ಎದ್ದ ವಜ್ರಕಾಯ ನಟಿಯ ಡಾರ್ಲಿಂಗ್‌ ನಾಳೆ ರಿಲೀಸ್

Nabha Natesh Darling Movie: ಕನ್ನಡದಲ್ಲಿ ವಜ್ರಕಾಯ, ಲೀ, ಸಾಹೇಬ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್‌ ಪ್ರವೇಶಿಸಿದ್ದ ಪ್ರತಿಭಾನ್ವಿತ ನಟಿ ನಭಾ ನಟೇಶ್‌ಗೆ ಇದು ಪರೀಕ್ಷೆಯ ಕಾಲ. ಸುಮಾರು ಎರಡೂವರೆ ವರ್ಷಗಳ ಗ್ಯಾಪ್‌ ಬಳಿಕ ಡಾರ್ಲಿಂಗ್‌ ಸಿನಿಮಾ ರಿಲೀಸ್‌ ಆಗುತ್ತಿದೆ. ಡಾರ್ಲಿಂಗ್‌ ಸಿನಿಮಾ ನಾಳೆ ಅಂದರೆ ಜುಲೈ 19ರಂದು ರಿಲೀಸ್‌ ಆಗುತ್ತಿದೆ.

ನಭಾ ನಟೇಶ್‌ ನಟನೆಯ ಡಾರ್ಲಿಂಗ್‌ ಸಿನಿಮಾ
ನಭಾ ನಟೇಶ್‌ ನಟನೆಯ ಡಾರ್ಲಿಂಗ್‌ ಸಿನಿಮಾ

ಬೆಂಗಳೂರು: ಪ್ರಿಯಾದರ್ಶಿ ನಾಯಕ ನಟನಾಗಿ ನಟಿಸಿರುವ ಡಾರ್ಲಿಂಗ್‌ ಸಿನಿಮಾದಲ್ಲಿ ನಭಾ ನಟೇಶ್‌ ವೈವಿಧ್ಯಮಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಬಾರಿ ಲವರ್‌ ಗರ್ಲ್‌ ರೀತಿ ಕಾಣಿಸಿಕೊಂಡರೆ, ಇನ್ನೊಂದು ಬಾರಿ ಲೇಡಿ ರಾಂಬೋ ರೀತಿ ಫೈಟಿಂಗ್‌ ಮಾಡ್ತಾರೆ. ನಾಳೆ (ಜುಲೈ 19) ಬಿಡುಗಡೆಯಾಗುವ ಡಾರ್ಲಿಂಗ್‌ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ನಭಾ ನಟೇಶ್‌ ಸಿನಿಮಾ ರಿಲೀಸ್‌ ಆಗದೆ ಕೆಲವು ವರ್ಷಗಳೇ ಆಗಿವೆ. 2021ರಲ್ಲಿ ಮ್ಯಾಸ್ಟ್ರೋ ಎಂಬ ಒಟಿಟಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಮೂರು ಸಿನಿಮಾದಲ್ಲಿ ನಟಿಸಿದ್ದರೂ (ಒಂದರಲ್ಲಿ ಅತಿಥಿ ಪಾತ್ರ) ಈಗಲೂ ಕನ್ನಡದ ನಟಿಯೇ ಎಂದೆನಿಸುವಂತೆ ನಭಾ ನಟೇಶ್‌ ಪ್ರೇಕ್ಷಕರಿಗೆ ಆಪ್ತರು. ಕರ್ನಾಟಕದ ಶೃಂಗೇರಿ ಮೂಲದ ಈ ಸುಂದರಿ ಕಳೆದ ಮೂರು ವರ್ಷಗಳಿಂದ ಚಿತ್ರನಟನೆಯಿಂದ ದೂರ ಉಳಿಯಲು ಕಾರಣವಿದೆ.

ಕನಸಿಗೆ ಕೊಳ್ಳಿಯಿಟ್ಟ ಆ ಅಪಘಾತ

ಕನ್ನಡದಲ್ಲಿ ವಜ್ರಕಾಯ, ಲೀ ಸಿನಿಮಾದಲ್ಲಿ ನಟಿಸಿದ ಬಳಿಕ ಸಾಹೇಬ ಚಿತ್ರದಲ್ಲಿ ಯಾರೇ ನೀನು ರೋಜಾ ಹೂವೇ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ನಭಾ ನಟೇಶ್‌. ಇದಾದ ಬಳಿಕ ಟಾಲಿವುಡ್‌ಗೆ ನೆಗೆದ ಈ ಚೆಲುವೆಗೆ ಸಾಲು ಸಾಲು ಅವಕಾಶಗಳು ದೊರಕಿದವು. ನನ್ನನ್ನು ದೋಚುಕುಂದುವಟೆ, ಅದುಗೋ, ಇಸ್ಮಾರ್ಟ್‌ ಶಂಕರ್‌, ಡಿಸ್ಕೊ ರಾಜಾ, ಸೋಲೋ ಬ್ರತುಕೇ ಸೋ ಬೆಟರ್‌, ಅಲ್ಲುಡು ಅದರ್ಸ್‌, ಮೇಸ್ಟ್ರು ಹೀಗೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸಿದರು.

 

ಒಂದರ ಮೇಲೆ ಒಂದರಂತೆ ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದ, ಉತ್ತುಂಗ ಸ್ಥಿತಿಯಲ್ಲಿದ್ದ ನಭಾ ನಟೇಶ್‌ಗೆ ಒಂದು ಬ್ರೇಕ್‌ ಅಥವಾ ಹಿನ್ನೆಡೆ ನೀಡಿದ್ದು ಒಂದು ಅಪಘಾತ. 2021ರ ಸೆಪ್ಟೆಂಬರ್‌ ತಿಂಗಳಲ್ಲಿ ರೆಸ್ಟ್‌ ರೂಂನಲ್ಲಿ ಬಿದ್ದು ಎಡ ತೋಳಿಗೆ ತೀವ್ರ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ಹೋದಾಗ ಈಕೆಯ ತೋಳಲ್ಲಿ ಹಲವು ಸಣ್ಣ ಸಣ್ಣ ಮುರಿತಗಳು ಇರುವುದು ಪತ್ತೆಯಾಗಿತ್ತು. ಡಾಕ್ಟರ್‌ ಸಲಹೆ ಮೇರೆಗೆ ಸರ್ಜರಿ ಮಾಡಿಕೊಂಡಿದ್ದರು. ಡಾಕ್ಟರ್‌ ಸಲಹೆ ಮೇರೆಗೆ ಇನ್ನೂ ಎಂದಿನಂತೆ ಸಿನಿಮಾ ಬದುಕಿಗೆ ಮರಳಬಹುದು ಅಂದುಕೊಂಡರು. ವ್ಯಾಯಾಮ ಆರಂಭಿಸಿದರು. ಪ್ರತಿದಿನದ ದಿನಚರಿಯಂತೆ ತೂಕ ಎತ್ತಲು ಹೋದಾಗ ಮತ್ತೆ ನೋವು ಕಾಣಿಸಿಕೊಂಡಿತ್ತು. ಡಾಕ್ಟರ್‌ಗೆ ತೋರಿಸಿದಾಗ ಮತ್ತೆ ಸರ್ಜರಿ ಮಾಡಬೇಕಂದ್ರು.

ಮೂರು ತಿಂಗಳ ಬಳಿಕ ಎರಡನೇ ಸರ್ಜರಿ ಮಾಡಲಾಯಿತು. ಆರು ತಿಂಗಳು ಬೆಡ್‌ರೆಸ್ಟ್‌ನಲ್ಲಿಯೇ ಇರಬೇಕಾಯಿತು. ದೇಹ ದುರ್ಬಲವಾಗಿತ್ತು. ಹೆಚ್ಚು ಹೊತ್ತು ನಿಲ್ಲಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕೊರೊನಾ ಸಮಯವಾದ ಕಾರಣ ಮತ್ತೆ ಒಂದು ವರ್ಷ ಮನೆಯಲ್ಲಿ ರೆಸ್ಟ್‌ ಮಾಡಬೇಕಾಯಿತು. ಬಳಿಕ ಡಾರ್ಲಿಂಗ್‌ ಸಿನಿಮಾದಲ್ಲಿ ನಟಿಸಿದರು. ಹೀಗೆ ಮೂರು ವರ್ಷ ಸ್ಯಾಂಡಲ್‌ವುಡ್‌ ಮೂಲದ ನಟಿ ಕಷ್ಟಪಡಬೇಕಾಯಿತು. ನಾಳೆ ಬಿಡುಗಡೆಯಾಗುವ ಡಾರ್ಲಿಂಗ್‌ ಸಿನಿಮಾದ ಮೂಲಕ ಮತ್ತೆ ಫಿನಿಕ್ಸ್‌ ಹಕ್ಕಿಯಂತೆ ತಮ್ಮ ಕರಿಯರ್‌ ವೈಭವಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಡಾರ್ಲಿಂಗ್‌ ಸಿನಿಮಾದಲ್ಲಿ ಪ್ರಿಯಾದರ್ಶಿ ಪುಳಿಕೊಂಡ, ನಭಾ ನಟೇಶ್‌, ಅನನ್ಯ ನಾಗಲ್ಲ, ಬ್ರಹ್ಮಾನಂದಂ, ಮುರುಳಿಧರ್‌ ಗೌಡ ಮುಂತಾದವರು ನಟಿಸಿದ್ದಾರೆ. ಟೂರಿಸ್ಟ್‌ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಘವ್‌ ಪ್ಯಾರಿಸ್‌ನಲ್ಲಿ ಹನಿಮೂನ್‌ ಮಾಡಬೇಕೆಂದುಕೊಂಡು ಮದುವೆಯಾಗುವ ಮುನ್ನವೇ ಹಣ ಉಳಿತಾಯ ಮಾಡಿರುತ್ತಾನೆ. ಆಕಸ್ಮಿಕವಾಗಿ ಆತನಿಗೆ ಆನಂದಿ ಸಿಗುತ್ತಾಳೆ. ಬಳಿಕ ಏನು ಸವಾಲುಗಳು ಉಂಟಾಗುತ್ತವೆ? ಅದೇ ಈ ಡಾರ್ಲಿಂಗ್‌ ಸಿನಿಮಾದ ಕಥೆ.

ನಭಾ ನಟೇಶ್‌ ಶೃಂಗೇರಿಯಲ್ಲಿ ಜನಿಸಿದರು. ಉಡುಪಿಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾರ್ಗದರ್ಶನದಲ್ಲಿ ಮಾಡೆಲಿಂಗ್‌ ಆರಂಭಿಸಿದರು. ಇವರು ಭರತನಾಟ್ಯ ಕಲಾವಿದೆಯೂ ಹೌದು. ಶಿವರಾಜ್‌ ಕುಮಾರ್‌ ಜತೆ ಇವರು ನಟಿಸಿದ ಸಿನಿಮಾ ಕರ್ನಾಟಕದಲ್ಲಿ ನೂರು ದಿನಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತ್ತು. ಈ ಸಿನಿಮಾದಲ್ಲಿ ನಭಾ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

Whats_app_banner