ಸೂಪರ್ ಸ್ಟಾರ್ ಮಹೇಶ್ ಬಾಬು ಕುಟುಂಬದಿಂದ ಹೊಸ ಹೀರೋ ತೆಲುಗು ಚಿತ್ರರಂಗಕ್ಕೆ ಎಂಟ್ರಿ; ಯಾರು ಈ ಜಯಕೃಷ್ಣ?
ಪ್ರಿನ್ಸ್ ಮಹೇಶ್ ಬಾಬು ಕುಟುಂಬದಿಂದ ಜಯಕೃಷ್ಣ ಘಟ್ಟಮನೇನಿ ಎಂಬ ಹೊಸ ಹೀರೋ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜಯಕೃಷ್ಣ, ಮಹೇಶ್ ಬಾಬು ಅವರ ಹಿರಿಯ ಸಹೋದರ ರಮೇಶ್ ಬಾಬು ಅವರ ಪುತ್ರ. ಜಯಕೃಷ್ಣ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಚಿತ್ರರಂಗದಲ್ಲಿ ಒಂದು ಕುಟುಂಬದಿಂದ ಬಂದ ಅನೇಕ ನಟರಿದ್ದಾರೆ. ಇದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ನೋಡಬಹುದು. ಇದೀಗ ತೆಲುಗು ಚಿತ್ರರಂಗದ ಸ್ಟಾರ್ ಫ್ಯಾಮಿಲಿಯಿಂದ ಟಾಲಿವುಡ್‌ಗೆ ಹೊಸ ಹೀರೋ ಎಂಟ್ರಿ ಕೊಡುತ್ತಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಕುಟುಂಬದಿಂದ ಹೊಸ ಹೀರೋ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕೃಷ್ಣ, ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡವರು. ಅವರ ಕುಟುಂಬದಲ್ಲಿ ರಮೇಶ್ ಬಾಬು, ಮಹೇಶ್ ಬಾಬು, ಸುಧೀರ್ ಬಾಬು, ವಿಜಯ ನಿರ್ಮಲ ಪುತ್ರ ನರೇಶ್ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಹೇಶ್ ಬಾಬು ಪತ್ನಿ ನಮ್ರತಾ ಒಂದು ಕಾಲದಲ್ಲಿ ಖ್ಯಾತ ನಟಿಯಾಗಿದ್ದವರು. ಪುತ್ರ ಗೌತಮ್ ಚಿತ್ರರಂಗ ಎಂಟ್ರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಪುತ್ರಿ ಸಿತಾರಾ ಈಗಾಗಲೇ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಇವರ ಕುಟುಂಬದಿಂದ ಜಯಕೃಷ್ಣ ಘಟ್ಟಮನೇನಿ ಎಂಬ ಹೀರೋ ಕಮಾಲ್ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.
ಜಯಕೃಷ್ಣ , ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ ರಮೇಶ್ ಬಾಬು ಅವರ ಮಗ. ಮಹೇಶ್ ಬಾಬು ಹಿರಿಯ ಸಹೋದರನ ಪುತ್ರ. ರಮೇಶ್ ಬಾಬು ಬ್ಲಾಕ್ ಟೈಗರ್, ಬಜಾರ್ ರೌಡಿ, ಸಾಮ್ರಾಟ್, ಮುಗ್ಗುರು ಕೊಡುಕುಲು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಚಿತ್ರ ನಿರ್ಮಾಣದಲ್ಲಿ ಕೂಡಾ ಗುರುತಿಸಿಕೊಂಡಿದ್ದರು. ಕಳೆದ 2 ವರ್ಷಗಳ ಹಿಂದೆ ರಮೇಶ್ ಬಾಬು ನಿಧನರಾಗಿದ್ದರು. ಇದೀಗ ಅವರ ಕುಟುಂಬದಿಂದ ಜಯಕೃಷ್ಣ ಹೀರೋ ಆಗುತ್ತಿದ್ದಾರೆ. ಈಗಾಗಲೇ ಜಯಕೃಷ್ಣ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜಯಕೃಷ್ಣ ನೋಡಲು ಥೇಟ್ ತಂದೆ ರಮೇಶ್ ಬಾಬು ಹಾಗೂ ಚಿಕ್ಕಪ್ಪ ಮಹೇಶ್ ಬಾಬು ಹೋಲಿಕೆ ಹೊಂದಿದ್ದಾರೆ.
ಜಯಕೃಷ್ಣಗೆ ಸ್ವತಃ ಚಿಕ್ಕಪ್ಪ ಮಹೇಶ್ ಬಾಬು ಮುಂದೆ ನಿಂತು ಸಿನಿಮಾಗೆ ಸಂಬಂಧಿಸಿದ ಟಿಪ್ಸ್ ಹೇಳಿಕೊಡುತ್ತಿದ್ದಾರಂತೆ. ಅಲ್ಲದೆ ಸಿನಿಮಾಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅವರೇ ಹ್ಯಾಂಡಲ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ಮಹೇಶ್ ಬಾಬು ಕುಟುಂಬದಿಂದ ಹೊಸ ಕುಡಿ ಚಿತ್ರರಂಗಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಆದಷ್ಟು ಬೇಗ ಜಯಕೃಷ್ಣನನ್ನು ಬೆಳ್ಳಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ಜಯಕೃಷ್ಣ ಆಕ್ಟಿಂಗ್ ತರಬೇತಿ ಪಡೆಯುತ್ತಿದ್ದಾರೆ. ಸಿನಿಮಾ ಸ್ಕ್ರಿಪ್ಟ್ ಕೂಡಾ ತಯಾರಾಗುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
ಮಹೇಶ್ ಬಾಬು ಸಿನಿಮಾಗಳ ಬಗ್ಗೆ ಹೇಳುವುದಾದರೆ ಇದೇ ವರ್ಷ ಜನವರಿಯಲ್ಲಿ ಗುಂಟೂರು ಖಾರಂ ರಿಲೀಸ್ ಆಗಿತ್ತು. ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಸದ್ಯಕ್ಕೆ ಪುರಿ ಜಗನ್ನಾಥ್ ನಿರ್ದೇಶನದ ಜನಗಣಮನ ಹಾಗೂ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಇದು ಇವರ 29ನೇ ಸಿನಿಮಾ.