2300 ರೂಗೆ Kalki 2898 AD ಸಿನಿಮಾದ ಟಿಕೆಟ್ ಮಾರಾಟ, ಜವಾನ್ ದಾಖಲೆ ಸರಿಗಟ್ಟಲಿಲ್ಲ ಪ್ರಭಾಸ್- ದೀಪಿಕಾ ಪಡುಕೋಣೆ ಚಿತ್ರ
Kalki 2898 AD: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾದ ಪ್ರತಿಟಿಕೆಟ್ ದರ ಮುಂಬೈನಲ್ಲಿ 2300 ರೂ.ವರೆಗೆ ಇದೆ. ಕಲ್ಕಿ ಸಿನಿಮಾದ ಟಿಕೆಟ್ ದರವು ಜವಾನ್ ಸಿನಿಮಾದ ದಾಖಲೆ ಸರಿಗಟ್ಟಿರುವುದೇ? ಇಲ್ಲಿದೆ ಇನ್ನಷ್ಟು ವಿವರ.
ಬೆಂಗಳೂರು: ನಾಗ್ ಅಶ್ವಿನಿ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ನಾಳೆ ಅಂದರೆ ಜೂನ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಪ್ರಮುಖ ನಟರು, ನಟಿಯರು ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮುಂತಾದ ಪ್ರಮುಖ ಕಲಾವಿದರು ನಟಿಸಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸೈನ್ಸ್ ಫಿಕ್ಷನ್ ಸಿನಿಮಾದ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಾಳೆ ಈ ಸಿನಿಮಾದ ಟಿಕೆಟ್ ದರ 600-700 ರೂಪಾಯಿಗೂ ಕೆಲವು ಥಿಯೇಟರ್‌ಗಳಲ್ಲಿ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಕೆಲವು ಕಡೆ ಅತ್ಯಧಿಕ ದರವೆಂದರೆ 2300 ರೂಪಾಯಿಗೆ ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲಾಗಿದೆ.
ಕಲ್ಕಿ 2898 ಎಡಿ ಸಿನಿಮಾದ ಟಿಕೆಟ್ ದರ
ಮಾಯ್ಸನ್ ಐನಾಕ್ಸ್‌ನಲ್ಲಿ ಕಲ್ಕಿ ಟಿಕೆಟ್ ದರ ದುಬಾರಿ ಎನ್ನಬಹುದು. ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಲಕ್ಸ್ ಸುಪೀರಿಯರ್ ಟಿಕೆಟ್‌ಗಳನ್ನು ಜೂನ್ 27ರಂದು 2,300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಿಂದಿ ಭಾಷೆಯ ನೈಟ್ ಶೋಗೆ ಈ ಟಿಕೆಟ್ ದರವಿದೆ. ಇದು ಮೂಲ ತೆಲುಗು ಸಿನಿಮಾವಾಗಿದೆ. ವೀಕಂಡ್‌ನಲ್ಲಿ ಇದೇ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಮಾಯ್ಸನ್ ಐನಾಕ್ಸ್ ಥಿಯೇಟರ್‌ನಲ್ಲಿ ಪ್ರತಿಟಿಕೆಟ್ ದರ 2000 ರೂಪಾಯಿ ಇದೆ.
ಆಸಕ್ತಿದಾಯಕ ಅಂಶವೆಂದರೆ ಸೆಪ್ಟೆಂಬರ್ 2023ರಲ್ಲಿ ಶಾರೂಖ್ ಖಾನ್ ನಟನೆಯ ಜವಾನ್ ಸಿನಿಮಾದ ಟಿಕೆಟ್ ದರ ಇಲ್ಲಿ 2400 ರೂಪಾಯಿ ಇತ್ತು. ಅಟ್ಲಿ ಸಿನಿಮಾದ ಕುರಿತು ಸಖತ್ ಕ್ರೇಜ್ ಇದ್ದ ಕಾರಣ ಅಲ್ಲಿ 2400 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗಿತ್ತು. ಆದರೆ, ಈಗ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ಟಿಕೆಟ್ ದರ ತುಸು ಕಡಿಮೆಯಾಗಿದೆ. ಈ ಜಿಯೋ ಮಾಲ್‌ನಲ್ಲಿ 2300 ರೂಪಾಯಿಗೆ ಟಿಕೆಟ್ ದೊರಕುತ್ತದೆ.
ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಅವಕಾಶ
Kalki 2898 AD ಸಿನಿಮಾದ ಟಿಕೆಟ್ ದರ ಹೆಚ್ಚಿಸಲು ಆಂಧ್ರ ಪ್ರದೇಶ ಸರಕಾರ ಅನುಮತಿ ನೀಡಿದೆ. ಸರಕಾರದ ಆದೇಶದ ಪ್ರಕಾರ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಈ ಸಿನಿಮಾದ ದರವನ್ನು 75 ರೂ.ವರೆಗೆ ಮತ್ತು ಮಲ್ಟಿ ಫ್ಲೆಕ್ಸ್‌ಗಳು 125 ರೂಪಾಯಿವರೆಗೆ ಹೆಚ್ಚಿಸಬಹುದು. ಆಂಧ್ರದಲ್ಲಿ ಈ ಪರಿಸ್ಥಿತಿ ಇದ್ದರೆ ಬೆಂಗಳೂರಿನಲ್ಲಿ ಈಗಾಗಲೇ ಗುರುವಾರದ ಟಿಕೆಟ್ ದರ 600-700 ರೂಪಾಯಿ ಇದೆ.
ಇಷ್ಟು ಮಾತ್ರವಲ್ಲದೆ ಆಂಧ್ರದಲ್ಲಿ ಪ್ರತಿದಿನದ 4 ಶೋಗಳ ಬದಲು ಐದು ಶೋ ನಡೆಸಲು ಥಿಯೇಟರ್‌ಗಳಿಗೆ ಅವಕಾಶ ನೀಡಿದೆ. ಸಿನಿಮಾ ರಿಲೀಸ್ ಆದ ಮೊದಲ 14 ದಿನಗಳ ಕಾಲ ಥಿಯೇಟರ್‌ಗಳು ಹೀಗೆ ಶೋ ಹೆಚ್ಚಿಸಬಹುದು. ಇದರಿಂದ ಬಾಕ್ಸ್ ಆಫೀಸ್ ಆದಾಯ ಹೆಚ್ಚುವ ನಿರೀಕ್ಷೆಯಿದೆ. ತೆಲಂಗಾಣ ಸರಕಾರ ಕೂಡ ಹೆಚ್ಚುವರಿ ಶೋ ಮತ್ತು ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಿದೆ.
ಬೆಂಗಳೂರಲ್ಲಿಯೂ ದುಬಾರಿ
ಉದ್ಯಾನನಗರಿ ಬೆಂಗಳೂರಿನ ಮಲ್ಟಿಫ್ಲೆಕ್ಸ್‌ಗಳಲ್ಲಿ kalki 2898 ad ಸಿನಿಮಾದ ಟಿಕೆಟ್ ದರ ದುಪ್ಪಟ್ಟು ಇದೆ. ಅಂದರೆ, ಗೋಲ್ಡ್ ಕ್ಲಾಸ್‌ಗೆ 400 ರೂಪಾಯಿ, ಇತರೆ ಕ್ಲಾಸ್‌ಗೆ 600 ರೂಪಾಯಿ ಇದೆ. ಕೆಲವೊಂದು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಕಡಿಮೆ ಇದೆ.