Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಮಾಡಿದ ಆಸಾಮಿ ಕೊನೆಗೂ ಅರೆಸ್ಟ್!
ನವೆಂಬರ್ 6ರಂದು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜಾರಾ ಪಟೇಲ್ ಎಂಬ ಯುವತಿಯ ದೇಹಕ್ಕೆ ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಈಗ ಈ ಕೃತ್ಯದ ಹಿಂದಿರುವ ವ್ಯಕ್ತಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Rashmika Mandanna: ಕಳೆದ ವರ್ಷದ ನವೆಂಬರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರದ್ದೇ ಎಂಬಂಥ ಅಶ್ಲೀಲ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಅದಾದ ಬಳಿಕ ಅದು ಡೀಪ್‌ಫೇಕ್ ವಿಡಿಯೋ ಎಂಬುದು ತಿಳಿದಿತ್ತು. ಇದೀಗ ಆ ಫೇಕ್ ವಿಡಿಯೋ ಹಿಂದಿನ ರುವಾರಿಯನ್ನು ದೆಹಲಿ ಪೊಲೀಸರು ಶನಿವಾರ ಆಂಧ್ರಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.
ನವೆಂಬರ್ 6ರಂದು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜಾರಾ ಪಟೇಲ್ ಎಂಬ ಯುವತಿಯ ದೇಹಕ್ಕೆ ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಹೀಗೆ ಆ ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿನಿಮಾಮಂದಿಯೂ ಕಳವಳ ವ್ಯಕ್ತಪಡಿಸಿತ್ತು. ಈ ಕೃತ್ಯದ ಹಿಂದಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅದರಂತೆ ಡೀಪ್‌ಫೇಕ್ ಸೃಷ್ಟಿಕರ್ತನ ಬಂಧನವಾಗಿದೆ.
ಡೀಪ್‌ಫೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಯಾವುದೇ ಕೇಸ್ ದಾಖಲಾಗಿರಲಿಲ್ಲ. ರಶ್ಮಿಕಾ ಮಂದಣ್ಣ ಅವರದ್ದೇ ಮೊದಲ ಪ್ರಕರಣ ಆಗಿದ್ದರಿಂದ ಪೊಲೀಸರು ಇದನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದರು. ಅದರಂತೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ಸುದೀರ್ಘ ಎರಡೂವರೆ ತಿಂಗಳ ಬಳಿಕ ಆರೋಪಿಯನ್ನು ಆಂಧ್ರ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.
ಬರೀ ರಶ್ಮಿಕಾ ಮಾತ್ರವಲ್ಲ ಬಾಲಿವುಡ್‌ನ ಆಲಿಯಾ ಭಟ್, ಕಾಜೋಲ್, ಸಚಿನ್ ತೆಂಡೂಲ್ಕರ್, ಕತ್ರಿಕಾ ಕೈಫ್ ಸೇರಿ ಸಾಕಷ್ಟು ನಟ, ನಟಿಯರಿಗೂ ಡೀಪ್ ಫೇಕ್ ಕಂಟಕವಾಗಿತ್ತು. ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭ್ಮನ್ ಗಿಲ್ ಅವರ ಜತೆಗಿನ ಫೋಟೋಗಳನ್ನೂ ಹರಿಬಿಡಲಾಗಿತ್ತು. ಇದೀಗ ಇವೆಲ್ಲದರ ಪೈಕಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ ದೆಹಲಿ ಪೊಲೀಸರು.
ವಿಡಿಯೋದಲ್ಲಿ ಏನಿತ್ತು?
ರಶ್ಮಿಕಾ ಮಂದಣ್ಣ ಅವರು ಎಲೆವೆಟರ್ ಪ್ರವೇಶಿಸುವ ವಿಡಿಯೋ ಇದಾಗಿತ್ತು. ಆದರೆ, ಈ ವಿಡಿಯೋ ಒರಿಜಿನಲ್ ಅಲ್ಲ. ಜಾರಾ ಪಟೇಲ್ ಎಂಬ ಬ್ರಿಟಿಷ್ ಭಾರತೀಯ ಮಹಿಳೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಡೀಫ್ ಫೇಕ್ ಆವೃತ್ತಿಯಾಗಿದೆ ಇದಾಗಿತ್ತು. ಜಾರಾ ಪಟೇಲ್ ಅವರ ಮುಖದ ಬದಲು ರಶ್ಮಿಕಾ ಮಂದಣ್ಣ ಮುಖವನ್ನು ಈ ವಿಡಿಯೋದಲ್ಲಿ ಜೋಡಿಸಲಾಗಿತ್ತು.
ವಿಡಿಯೋ ನೋಡಿ ರಶ್ಮಿಕಾ ಹೇಳಿದ್ದೇನು?
"ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತಿದೆ. ಆನ್‌ಲೈನ್‌ನಲ್ಲಿ ಹರಡಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಲೇಬೇಕಾಗಿದೆ. ಈ ರೀತಿಯ ವಿಷಯವು ನನಗೆ ಮಾತ್ರವಲ್ಲ, ಪ್ರಾಮಾಣಿಕವಾಗಿ ಹೇಳುವುದಾದರೆ ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವುದು ನೋಡಿದರೆ ಪ್ರತಿಯೊಬ್ಬರಿಗೂ ಭಯಾನಕ ಎನಿಸುತ್ತದೆ"
"ನನ್ನ ರಕ್ಷಣೆ ಮತ್ತು ಬೆಂಬಲಕ್ಕೆ ನಿಂತ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಇಂದು ಒಬ್ಬ ಮಹಿಳೆಯಾಗಿ ಮತ್ತು ನಟಿನಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಹೀಗಾಗಿದ್ದರೆ ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ನನಗೆ ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಇನ್ನೂ ಹೆಚ್ಚಿನವರು ಇಂತಹ ಐಡೆಂಟಿಟಿ ಥೆಫ್ಟ್ಗೆ ಗುರಿಯಾಗುವ ಮೊದಲು ನಾವು ಇಂದು ಸಮುದಾಯವಾಗಿ ಇದನ್ನ ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ರಶ್ಮಿಕಾ ಮಂದಣ್ಣ ಟ್ವಿಟ್ ಮಾಡಿದ್ದರು.