Salaar OTT Release: ಸಲಾರ್ ಸರ್‌ಪ್ರೈಸ್, ಒಟಿಟಿಯಲ್ಲಿ ಇಂದು ಪ್ರಭಾಸ್ ಸಿನಿಮಾ ಬಿಡುಗಡೆ
Salaar: Part 1 – Ceasefire OTT: ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ಸಲಾರ್: ಪಾರ್ಟ್ ಒನ್ ಸೀಸ್ ಫೈರ್ ಜನವರಿ 20ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಸಲಾರ್ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಎಂಬ ನಿರೀಕ್ಷೆಯಲ್ಲಿದ್ದವರಿಗೆ ಜ 20 ಬಿಡುಗಡೆ ಎಂಬ ಉತ್ತರ ಕೇಳಿ ಅಚ್ಚರಿಯಾಗಿದೆ.
ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಜನವರಿ 20ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವಾಗಲೇ ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಗಣರಾಜ್ಯೋತ್ಸವದ ದಿನದಂದು ಸಲಾರ್ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ, ಅದಕ್ಕೂ ಮೊದಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಹೀಗಾಗಿ, ಥಿಯೇಟರ್‌ಗಳಲ್ಲಿ ಸಲಾರ್ ನೋಡದೆ ಇರುವವರು ಮನೆಯಲ್ಲಿಯೇ ಕುಳಿತು ಸಲಾರ್ ಸಿನಿಮಾ ನೋಡಬಹುದು.
ಈಗಾಗಲೇ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯಷ್ಟು ಹಣ ಸಂಗ್ರಹಿಸಿದೆ. ಈ ಸಿನಿಮಾದ ಕಥೆ ಮತ್ತು ಸಾಹಸವು ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದೆ. ಇದೀಗ ಒಟಿಟಿಯಲ್ಲೂ ಬಿಡುಗಡೆಯಾಗುತ್ತಿರುವುದರಿಂದ ಸಾಕಷ್ಟು ಪ್ರೇಕ್ಷಕರಿಗೆ ಈ ಸಿನಿಮಾ ತಲುಪಲಿದೆ.
ಜನವರಿ 20ರಂದು ಒಟಿಟಿಯಲ್ಲಿ ಸಲಾರ್ ಬಿಡುಗಡೆ
ಸಲಾರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 20ರಂದು ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆ ಇಲ್ಲದವರಿಗೆ ಈ ಸಿನಿಮಾ ನೋಡುವ ಭಾಗ್ಯವಿಲ್ಲ. ಅಮೆಜಾನ್ ಪ್ರೈಮ್ ಅಥವಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿಲ್ಲ. ನೆಟ್‌ಫ್ಲಿಕ್ಸ್ ಇರುವವರು ಜ 20 ರಿಂದ ಸಲಾರ್ ಸಿನಿಮಾ ನೋಡಬಹುದು.
ಸಲಾರ್ ಎನ್ನುವುದು ಖಾನ್ಸರ್ ಎಂಬ ಕಾಲ್ಪನಿಕ ಭೂಮಿಯಲ್ಲಿ ಕ್ರೌರ್ಯ ನಡೆಯುವ ಕಥಾನಕ. ಆದರೆ, ಕ್ರೂರತನವನ್ನು ತೋರಿಸುವ ಉದ್ದೇಶ ಸಿನಿಮಾದಲ್ಲಿ ಇರಲಿಲ್ಲ. ಎರಡು ಬಾಲ್ಯ ಸ್ನೇಹಿತರ ಕಥೆಯನ್ನು ಹೇಳಲಾಗಿದೆ. "ಇದು ದೇವ ಮತ್ತು ವರದಾ ಎಂಬ ಇಬ್ಬರು ಸ್ನೇಹಿತರ ಕಥೆ. ಇದು ಈ ಸಿನಿಮಾದ ತಿರುಳಾಗಿದೆ" ಎಂದು ಪ್ರಶಾಂತ್ ನೀಲ್ ಇತ್ತೀಚೆಗೆ ಹೇಳಿದ್ದರು. ಇದೀಗ ಈ ಕಥೆಯನ್ನು ಒಟಿಟಿಯಲ್ಲಿ ನೋಡಬಹುದಾಗಿದೆ.
ಬಹುನಿರೀಕ್ಷಿತ ಸಲಾರ್ ಸಿನಿಮಾವು ಡಿಸೆಂಬರ್ 22ರಂದು ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸುಮಾರು ಒಂದು ತಿಂಗಳೊಳಗೆ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ತೆಲುಗು ಮೂಲದ ಮಲಯಾಳಂ ನಟ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ನಟ ಯಶ್ ನಟಿಸಿದ್ದ ಕೆಜಿಎಫ್ ಅನ್ನು ಇದೇ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಸಲಾರ್ ಸಿನಿಮಾವೂ ಪೂರ್ಣ ಪ್ರಮಾಣದ ಗ್ಯಾಂಗ್‌ಸ್ಟಾರ್ ಸಿನಿಮಾ.
ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಲಾರ್ ಭಾಗ 1ರ ಶೂಟಿಂಗ್‌ಗೆ ಸುಮಾರು 114 ದಿನ ಬೇಕಾಯಿತು ಎಂದು ಹೇಳಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಲಾರ್ ಒಟಿಟಿಯಲ್ಲಿ ಜನವರಿ 20ರಂದು ಬಿಡುಗಡೆಯಾಗಲಿದೆ. ದೊಡ್ಡ ಮೊತ್ತಕ್ಕೆ ಸಲಾರ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in