ಹೊಸ ಚಿತ್ರ ಘೋಷಿಸಿದ ರಾಜಮೌಳಿ, ಅನೌನ್ಸ್ಮೆಂಟ್ ಟೀಸರ್ ಕೂಡಾ ರಿಲೀಸ್; ಆದರೆ.....
ಚಿತ್ರವನ್ನು ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ವರುಣ್ ಗುಪ್ತ ಎಂಬುವರ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಿತಿನ್ ಕಕ್ಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಾರತೀಯ ಸಿನಿಮಾ ನಡೆದು ಬಂದ ದಾರಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
'ಆರ್ಆರ್ಆರ್' ಸಿನಿಮಾ ಹಿಟ್ ನಂತರ ರಾಜಮೌಳಿ ಯಾವಾಗ ಹೊಸ ಸಿನಿಮಾ ಘೋಷಿಸಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಹ್ಯಾಟ್ರಿಕ್ ನಿರ್ದೇಶಕ ರಾಜಮೌಳಿ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಚಿತ್ರದ ಅನೌನ್ಸ್ಮೆಂಟ್ ಟೀಸರ್ ಕೂಡಾ ರಿಲೀಸ್ ಆಗಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಇಂಡಿಯನ್ ಸಿನಿಮಾ ಬಯೋಪಿಕ್
ಭಾರತೀಯ ಚಿತ್ರರಂಗ ನಡೆದು ಬಂದ ಹಾದಿಯೇ ರೋಚಕ. 1913ರಲ್ಲಿ ದಾದಾ ಸಾಹೇಬ್ ಫಾಲ್ಕೆ ನಿರ್ಮಿಸಿ, ನಿರ್ದೇಶಿಸಿದ್ದ 'ರಾಜಾ ಹರಿಶ್ಚಂದ್ರ' ಮೊದಲ ಸಿನಿಮಾದಿಂದ ಇಲ್ಲಿವರೆಗೂ ಸಾವಿರಾರು ಸಿನಿಮಾಗಳು ತಯಾರಾಗಿವೆ. ನೈಜ ಘಟನೆ ಆಧರಿಸಿದ, ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆ, ಕಾಲ್ಪನಿಕ ಹೀಗೆ ಅನೇಕ ಸಿನಿಮಾಗಳು ತಯಾರಾಗಿವೆ. ಅನೇಕ ಸಿನಿಮಾಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿವೆ. ಚಿತ್ರರಂಗದಲ್ಲಿ ಅನೇಕರು ಅಚ್ಚಳಿಯದೆ ಹೆಸರು ಮಾಡಿ ಹೋಗಿದ್ಧಾರೆ. ಇದೀಗ ರಾಜಮೌಳಿ ಅನೌನ್ಸ್ ಮಾಡಿರುವ ಸಿನಿಮಾ ಕೂಡಾ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದ್ದಾಗಿದೆ. ಇಂಡಿಯನ್ ಸಿನಿಮಾ ಬಯೋಪಿಕ್ ಇದು. ಆದರೆ ಬೇಸರದ ವಿಚಾರವೆಂದರೆ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸುತ್ತಿಲ್ಲ.
ಅನೌನ್ಸ್ಮೆಂಟ್ ಟೀಸರ್ ರಿಲೀಸ್
ಸಿನಿಮಾ ಅನೌನ್ಸ್ಮೆಂಟ್ ಟೀಸರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಜಮೌಳಿ, ''ಮೊದಲ ಬಾರಿಗೆ ಈ ಚಿತ್ರದ ನಿರೂಪಣೆ ಕೇಳಿದಾಗ ನಾನು ಬಹಳ ಎಮೋಷನ್ ಆದೆ. ಬಯೋಪಿಕ್ ಮಾಡುವುದು ಬಹಳ ಕಠಿಣ ಕೆಲಸ. ಆದರೆ ನಮ್ಮ ಹುಡುಗರು ಸವಾಲಿಗೆ ಸಿದ್ಧರಾಗಿದ್ದಾರೆ. ಹೆಮ್ಮೆಯಿಂದ ಮೇಡ್ ಇನ್ ಇಂಡಿಯಾವನ್ನು ಪ್ರಸ್ತುತಪಡಿಸಲಾಗುತ್ತಿದೆ'' ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ನಿತಿನ್ ಕಕ್ಕರ್ ನಿರ್ದೇಶನದ ಸಿನಿಮಾ
ಚಿತ್ರವನ್ನು ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ವರುಣ ಗುಪ್ತ ಎಂಬುವರ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಿತಿನ್ ಕಕ್ಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಾರತೀಯ ಸಿನಿಮಾ ನಡೆದು ಬಂದ ದಾರಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಚಿತ್ರರಂಗದ ಹಿನ್ನೆಲೆ, ಪ್ರಸ್ತುತವನ್ನು ಒಂದು ಭಾಗದಲ್ಲಿ ಹೇಳಲು ಸಾಧ್ಯವಿಲ್ಲ. ಬಹುಶ: ಈ ಸಿನಿಮಾ 2 ಭಾಗಗಳಲ್ಲಿ ತಯಾರಾಗಹುದು ಎಂದು ಸಿನಿಪ್ರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ತಂಡ ಚಿತ್ರದ ನಟ-ನಟಿಯರು ತಂತ್ರಜ್ಞರ ಬಗ್ಗೆ ಅಪ್ಡೇಟ್ ನೀಡಲಿದೆ.
ರಾಜಮೌಳಿ ಸಿನಿಮಾಗಾಗಿ ಒತ್ತಾಯಿಸುತ್ತಿರುವ ಫ್ಯಾನ್ಸ್
ಹೊಸ ಸಿನಿಮಾ ಅನೌನ್ಸ್ ಮಾಡಿರುವುದು ಸಿನಿಪ್ರಿಯರಿಗೆ ಖುಷಿ ಆದರೂ ಈ ಚಿತ್ರವನ್ನು ರೌಜಮೌಳಿ ನಿರ್ದೇಶಿಸುತ್ತಿಲ್ಲ ಎಂಬ ಬೇಸರ ಕಾಡುತ್ತಿದೆ. ಆದಷ್ಟು ಬೇಗ ನೀವು ನಿರ್ದೇಶನ ಮಾಡುತ್ತಿರುವ ಸಿನಿಮಾವನ್ನು ಅನೌನ್ಸ್ ಮಾಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರಾಜಮೌಳಿ ಮನಸ್ಸು ಮಾಡಬೇಕಷ್ಟೇ.
ಇನ್ನಷ್ಟು ಮನರಂಜನೆ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ