Aashi Roy: ನಾನಿನ್ನು ಚಿಕ್ಕವಳು, ರಕ್ಷಣೆ ಮಾಡಿ; ಬೆಂಗಳೂರು ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್ ಅಳಲು
Bengaluru rave party: ಬೆಂಗಳೂರು ರೇವ್ ಪಾರ್ಟಿಯಲ್ಲಿ ಭಾಗವಹಿಸಿರುವುದನ್ನು ಟಾಲಿವುಡ್ ನಟಿ ಆಶಿ ರಾಯ್ ಒಪ್ಪಿಕೊಂಡಿದ್ದಾರೆ. ಇದು ಹುಟ್ಟುಹಬ್ಬದ ಪಾರ್ಟಿ, ನನಗಿದು ರೇವ್ ಪಾರ್ಟಿ ಎಂದು ತಿಳಿದಿರಲಿಲ್ಲ. ಸಿನಿಮಾ ಕ್ಷೇತ್ರದಲಿ ನಾನಿನ್ನೂ ಚಿಕ್ಕವಳು, ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ರೇವ್ ಪಾರ್ಟಿಯಲ್ಲಿ ಅನೇಕ ತೆಲುಗು ನಟಿಯರು, ನಟರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಪಾರ್ಟಿಯಲ್ಲಿ ಭಾಗವಹಿಸಿರುವುದನ್ನು ತೆಲುಗು ನಟಿ ಆಶಿ ರಾಯ್ ಒಪ್ಪಿಕೊಂಡಿದ್ದಾರೆ. ಆದರೆ, ಇದು ರೇವ್ ಪಾರ್ಟಿ ಎಂದು ನನಗೆ ತಿಳಿದಿರಲಿಲ್ಲ. ಇದು ಬರ್ತ್‌ಡೇ ಪಾರ್ಟಿ ಎಂದು ಭಾಗವಹಿಸಿದ್ದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಆಶಿ ರಾಯ್ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಇದಾದ ಬಳಿಕ ಯೂಟ್ಯೂಬ್ ವಿಡಿಯೋಗಳಲ್ಲಿ ಆಶಿ ರಾಯ್ ತಮ್ಮ ಅಳಲು ತೋಡಿಕೊಂಡಿದ್ದು, "ನನಗಿದು ರೇವ್ ಪಾರ್ಟಿ ಎಂದು ತಿಳಿದಿರಲಿಲ್ಲʼ ಎಂದಿದ್ದಾರೆ.
"ನಾನು ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಆದರೆ, ಒಳಗೆ ಹೋಗಿರಲಿಲ್ಲ" ಎಂದು ಆಶಿ ರಾಯ್ ಹೇಳಿದ್ದಾರೆ. "ಇದು ಹುಟ್ಟುಹಬ್ಬದ ಪಾರ್ಟಿ. ನನಗೆ ಬೇರೇನೂ ಗೊತ್ತಿಲ್ಲ. ನನಗೆ ನೀವು ಬೆಂಬಲ ನೀಡಬೇಕು" ಎಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ. "ನನಗೆ ಏನೂ ಗೊತ್ತಿರಲಿಲ್ಲ. ಹುಟ್ಟುಹಬ್ಬದ ಪಾರ್ಟಿಯೆಂದು ಭಾಗವಹಿಸಿದ್ದೆ. ನಾನು ಚಿಕ್ಕವಳು, ಸಹಾಯ ಮಾಡಿ" ಎಂದು ಕೇಳಿಕೊಂಡಿದ್ದಾರೆ.
ನಾನು ಸಹೋದರ ಎಂದು ಪರಿಗಣಿಸುತ್ತಿದ್ದ ವ್ಯಕ್ತಿಯು ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಪಾರ್ಟಿಯ ಒಳಗೆ ಏನು ನಡೆದಿದೆ ಎಂದು ನನಗೆ ತಿಳಿದಿಲ್ಲ. ಪೊಲೀಸರು ನಮ್ಮನ್ನು ಕೂಡಿಹಾಕಿ ರಕ್ತದ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇದರಿಂದ ಭಯವಾಗಿದೆ. ಸಿನಿಮಾ ಕ್ಷೇತ್ರಕ್ಕೆ ನಾನು ಈಗಷ್ಟೇ ಕಾಲಿಟ್ಟಿದ್ದೇನೆ. ಈ ಕ್ಷೇತ್ರದಲ್ಲಿ ನಾನಿನ್ನೂ ಚಿಕ್ಕ ಹುಡುಗಿ. ನನಗೆ ಈ ಪ್ರಕರಣದಿಂದ ಪಾರಾಗಲು ನೀವೆಲ್ಲರೂ ಸಹಾಯ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಶಿ ರಾಯ್ ಮನವಿ ಮಾಡಿದ್ದಾರೆ.̈
ಕರ್ಮ ರಿಟರ್ನ್ಸ್ ಎಂದ ಕರಾಟೆ ಕಲ್ಯಾಣಿ
ಈ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ತಾನು ಭಾಗಿಯಾಗಿಲ್ಲ ಎಂದು ವಿಡಿಯೋ ರಿಲೀಸ್ ಹೇಮಾ ವಿಡಿಯೋ ರಿಲೀಸ್ ಮಾಡಿದ್ದರು.ಆದರೆ, ಹೇಮಾ ಭಾಗವಹಿಸಿದ್ದು ಹೌದು ಎಂದು ಬಳಿಕ ಹಲವು ವರದಿಗಳು, ಪೊಲೀಸ್ ಮೂಲಗಳು ಖಚಿತಪಡಿಸಿದ್ದವು. ಇದೀಗ ಹೇಮಾ ವಿರುದ್ಧ ನಟಿ ಕಲ್ಯಾಣಿ ವಿಡಿಯೋ ಮಾಡಿದ್ದಾರೆ. "ಇಡೀ ಉದ್ಯಮವನ್ನು ನೀವು ಉಳಿಸುವ ಮಹಾನ್ ಮಹಿಳೆ ಎನ್ನುತ್ತಿದ್ದೀರಿ. ಈಗ ಏನಾಯಿತು. ಯಾರಿಗಾದರೂ ತೊಂದರೆ ನೀಡಿದರೆ ಪ್ರತಿಫಲ ದೊರಕುತ್ತದೆ. ನೀವು ನನಗೆ ತೊಂದರೆ ನೀಡಿದ್ದೀರಿ. ನೀವಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ದೊರಕಿದೆ. ಮಾದರಿ ದೊರಕಿದ ಬಳಿಕ ನಿಮಗೆ ಪೊಲೀಸರು ಶಿಕ್ಷೆ ನೀಡಿಯೇ ನೀಡುತ್ತಾರೆ. ನಾವು ಮಾಡಿದ್ದು ನಮಗೆ ವಾಪಸ್ ಬರುತ್ತದೆ, ಇದನ್ನು ಕರ್ಮ ಎನ್ನುತ್ತಾರೆ" ಎಂದು ಕಲ್ಯಾಣಿ ಹೇಳಿದ್ದಾರೆ. ಕಲ್ಯಾಣಿ ಮತ್ತು ನರೇಶ್ ಮಾನಹಾನಿಕರವಾಗಿ ಮಾತನಾಡಿದ್ದಾರೆ ಎಂದು ಕರಾಟೆ ಕಲ್ಯಾಣಿ ವಿರುದ್ಧ ಹೇಮಾ ದೂರು ನೀಡಿದ್ದರು.
ಈ ರೇವ್ ಪಾರ್ಟಿ ನಡೆಯುತ್ತಿದ್ದಾಗ ಮುಂಜಾನೆ 3 ಗಂಟೆಯ ವೇಳೆಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ರೇವ್ ಪಾಟ್ರಿ ಮೇಲೆ ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶದ ಖ್ಯಾತ ಉದ್ಯಮಿ ವಾಸು ಅವರ ಹುಟ್ಟು ಹಬ್ಬದ ಅಂಗವಾಗಿ ಈ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ದಾಳಿ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ಆರೋಪಿಗಳಿಂದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೋನ್, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್ ಮತ್ತು 2 ವಾಹನಗಳನ್ನು ಜಪ್ತಿ ಮಾಡಲಾಗಿದೆ