‘ಆಕೆ ಹಸಿದಾಗ ಅವಳ ಬಾಯಿಗೆ ಅನ್ನ ಹಾಕಿ, ಅದನ್ನಲ್ಲ!’ ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ನಟಿಯ ಶಾಕಿಂಗ್ ಪೋಸ್ಟ್
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ನ ಬೆನ್ನಲ್ಲೇ ಸಿನಿಮಾ ಮಂದಿಯಿಂದಲೂ ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿಡಿ ಕಾರುತ್ತಿದ್ದಾರೆ. ಅದೇ ರೀತಿ ನಟಿ ರಶ್ಮಿ ಗೌತಮ್ ಸಹ ಕಟುವಾಗಿಯೇ ಮೌನ ಮುರಿದಿದ್ದಾರೆ.

Rashmi Gautam: ಸೋಷಿಯಲ್ ಮೀಡಿಯಾದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಕುರಿತ ಚರ್ಚೆಗಳೇ ಹೆಚ್ಚಾಗಿವೆ. ಆಡಳಿತಾರೂಢ ಕಾಂಗ್ರೆಸ್ ಪಾರ್ಟಿ, ಪ್ರಕರಣವನ್ನು ಎಸ್‌ಐಟಿಗೆ ನೀಡಿ, ಅವರ ತೀರ್ಮಾನವೇ ಅಂತಿಮ ಎಂದು ಹೇಳಿ ಕೈ ತೊಳೆದುಕೊಂಡಿದೆ. ಈ ನಡುವೆ, ಈ ಕೇಸ್‌ನಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ಕುಮಾರಸ್ವಾಮಿ ಖಡಕ್ಕಾಗಿಯೇ ಹೇಳಿದ್ದಾರೆ. ಇದೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನುವ ಹಲವು ಅಶ್ಲೀಲ ವಿಡಿಯೋಗಳು ವಾಟ್ಸಾಪ್‌ನಲ್ಲೂ ಹರಿದಾಡುತ್ತಿವೆ. ಹೀಗೆ ಈ ಪ್ರಕರಣ ಬಿಸಿ ಬಿಸಿ ಚರ್ಚೆಯಲ್ಲಿರುವಾಗಲೇ ಟಾಲಿವುಡ್ ನಟಿಯೊಬ್ಬರು ಶಾಕಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಹೆಚ್ಚಿದ ಒತ್ತಾಯ
ಸಾವಿರಾರು ಮಹಿಳೆಯರ ಮೇಲಿನ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಕೇಸ್ ಬರೀ ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಸುದ್ದಿಯಾಗಿದೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಪ್ರಜ್ವಲ್‌ಗೆ ಮರಣ ದಂಡನೆಯೇ ಸೂಕ್ತ ಎಂದು ಎಷ್ಟೋ ಮಂದಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತ ಈ ಕೂಡಲೇ ಕಣ್ಮರೆಯಾಗಿರುವ ಪ್ರಜ್ವಲ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ಪ್ರಕರಣ ರಾಜಕೀಯದ್ದಾದರೂ, ಸಿನಿಮಾ ಮಂದಿಯಿಂದಲೂ ಖಂಡನೆ ವ್ಯಕ್ತವಾಗಿದೆ.
ಕಿರುತೆರೆ ನಟಿಯ ಶಾಕಿಂಗ್ ಪೋಸ್ಟ್
ಈ ಎಲ್ಲ ಬೆಳವಣಿಗೆ ಮತ್ತು ಕಾವಿನ ನಡುವೆಯೇ ತೆಲುಗು ಕಿರುತೆರೆ ಮತ್ತು ನಿರೂಪಣೆಯಲ್ಲಿ ಗುರುತಿಸಿಕೊಂಡಿರುವ ನಟಿ ರಶ್ಮಿ ಗೌತಮ್, ಇದೀಗ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಗಮನಿಸಿಯೇ ಹಂಚಿಕೊಂಡಿದ್ದಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಅವರ ನೇರ ನುಡಿಯ ಪೋಸ್ಟ್ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡಿದೆ. ನಟಿ ರಶ್ಮಿ, ಸೋಷಿಯಲ್ ಮೀಡಿಯಾದಲ್ಲಿ ತುಂಬ ಸಕ್ರಿಯರು. ಅನಿಸಿದ್ದನ್ನು ನೇರವಾಗಿಯೇ ಹೇಳುವವರು. ಇದೀಗ ಲೇಖಕಿ ರಚೆಲ್ ಮೋರಾನ್ ಅವರ ಬರಹವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ ಮಹಿಳೆಯರ ಪರ ಮತ್ತೆ ನಿಂತಿದ್ದಾರೆ.
ಅಷ್ಟಕ್ಕೂ ರಶ್ಮಿ ಗೌತಮ್ ಪೋಸ್ಟ್‌ನಲ್ಲೇನಿದೆ?
"ಪುರುಷರು ಒಳ್ಳೆಯವರಾಗಿದ್ದರೆ ವ್ಯಭಿಚಾರ ಎಂಬುದೇ ಇರುತ್ತಿರಲಿಲ್ಲ ಎಂಬ ಪ್ರಶ್ನೆಗೆ, ಮಹಿಳೆ ಬಡತನದಲ್ಲಿ ಹಸಿದಾಗ ಆಕೆಯ ಬಾಯಿಗೆ ಅನ್ನ ಹಾಕುವುದು ಮನುಷ್ಯತ್ವ. ಅದನ್ನು ಬಿಟ್ಟು ಡಿಕ್ (ಖಾಸಗಿ ಅಂಗ) ಅಲ್ಲ" ಎಂಬ ಬರಹವಿರುವ ಪೋಸ್ಟ್‌ಅನ್ನು ರಶ್ಮಿ ಗೌತಮ್ ಹಂಚಿಕೊಂಡಿದ್ದಾರೆ. ಈ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಕೆಲವು ಸಿನಿಮಾ ಮಂದಿಯೂ ನಟಿಯ ಪೋಸ್ಟ್‌ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆ ಪರ ಧ್ವನಿ ಎತ್ತುವ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ್ ಸಹ ಇದೇ ಪೋಸ್ಟ್ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಟ್ರಾಂಗ್
ಇನ್ನು ಸೋಷಿಯಲ್ ಮೀಡಿಯಾದಲ್ಲೂ ನಟಿ ರಶ್ಮಿ ಗೌತಮ್ ತುಂಬ ಸ್ಟ್ರಾಂಗ್. ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 40 ಲಕ್ಷ ಫಾಲೋವರ್ಸ್ ಹೊಂದಿರುವ ರಶ್ಮಿ, ಬೋಲ್ಡ್ ಫೋಟೋ, ವಿಡಿಯೋ ಮೂಲಕ ಆಗಾಗ ಹಲ್‌ಚಲ್ ಸೃಷ್ಟಿಸುತ್ತಿರುತ್ತಾರೆ. ಗ್ಲಾಮರಸ್ ಫೋಟೋಗಳಿಂದಲೂ ಸುದ್ದಿಯ ಮುನ್ನಲೆಯಲ್ಲಿರುತ್ತಾರೆ. ಇದೀಗ ಮಹಿಳೆ ಮತ್ತು ವ್ಯಭಿಚಾರದ ಬಗ್ಗೆ ತಮ್ಮ ನಿಲುವು ಮತ್ತು ಮನದೊಳಗಿನ ಆಕ್ರೋಶವನ್ನು ಹೊರಹಾಕಿದ್ದಾರೆ.
