‘ತಿರುಪತಿ ಲಡ್ಡು ವಿಚಾರದಲ್ಲಿ ಪ್ರಕಾಶ್ ರಾಜ್ ಅವ್ರೇ ನೀವು ನಿಮ್ಮ ಇತಿಮಿತಿಯಲ್ಲಿ ಇದ್ದರೆ ಒಳಿತು’ ಎಂದ ಖ್ಯಾತ ನಟ
ಆಂಧ್ರದ ಈ ಹಿಂದಿನ ವೈ.ಎಸ್. ಜಗನ್ಮೋಹನ್ರೆಡ್ಡಿ ಆಡಳಿತ ಅವಧಿಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆಯ ಜತೆಗೆ ಕೀಳು ಮಟ್ಟದ ತುಪ್ಪವನ್ನು ಬಳಸಲಾಗಿತ್ತು ಎಂಬ ಮಹಾಸತ್ಯವೀಗ ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಅವರ ಮಾತಿಗೆ, ತೆಲುಗು ನಟ ಕೌಂಟರ್ ಕೊಟ್ಟಿದ್ದಾರೆ.

Vishnu Manchu Counters to Prakash Raj: ತಿರುಪತಿ ತಿರುಮಲದ ಲಡ್ಡುವಿನ ಪಾವಿತ್ರ್ಯತೆಯ ಬಗ್ಗೆ ಆಂಧ್ರಪ್ರದೇಶ ಸೇರಿ ಇಡೀ ದೇಶವ್ಯಾಪಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಪವಿತ್ರ ತಿರುಮಲ ಲಡ್ಡು ತಯಾರಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಲಡ್ಡೂ ತಯಾರಿಕೆಯಲ್ಲಿ ಈ ಹಿಂದಿನ ವೈ.ಎಸ್. ಜಗನ್ಮೋಹನ್ರೆಡ್ಡಿ ಆಡಳಿತ ಅವಧಿಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದರು. ಮೀನಿನ ಎಣ್ಣೆಯ ಜತೆಗೆ ಕೀಳು ಮಟ್ಟದ ತುಪ್ಪವನ್ನು ಬಳಸಲಾಗಿತ್ತು ಎಂದೂ ಹೇಳಿದ್ದರು. ಲ್ಯಾಬ್ ಪರೀಕ್ಷೆಯಲ್ಲಿ ಈ ವಿಚಾರ ದೃಢಪಟ್ಟಿದೆ. ಸದ್ಯ ಗಂಭೀರ ಸ್ವರೂಪ ಪಡೆದಿರುವ ಈ ವಿಚಾರದ ಬಗ್ಗೆಯೇ ಪ್ರಕಾಶ್ ರಾಜ್ ಮಾತನಾಡಿದ್ದರು. ಅವರ ಮಾತಿಗೆ ತೆಲುಗು ನಟ ಪ್ರತಿಕ್ರಿಯಿಸಿದ್ದಾರೆ.
ತಿರುಪತಿ ತಿರುಮಲ ಲಡ್ಡು ವಿವಾದ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಆಂಧ್ರ ಪ್ರದೇಶದಲ್ಲಿ ಈ ಹಿಂದಿನ ಜಗನ್ ಸರ್ಕಾರ, ಟಿಟಿಡಿ ಮತ್ತು ತಿರುಮಲದ ಪ್ರತಿಷ್ಠೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಿಎಂ ಚಂದ್ರಬಾಬು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಹ ಕೇಂದ್ರಕ್ಕೆ ಸೂಚಿಸಿದ್ದಾರೆ. ಈ ನಡುವೆ ಇದೇ ಲಡ್ಡು ಬಗ್ಗೆ ನಟ ಪ್ರಕಾಶ್ ರಾಜ್ ಹಂಚಿಕೊಂಡ ಪೋಸ್ಟ್ ಇದೀಗ ಹಲವರ ಕೆಂಗೆಣ್ಣಿಗೆ ಗುರಿಯಾಗುತ್ತಿದೆ. ಆ ಪೋಸ್ಟ್‌ಗೆ ತೆಲುಗು ನಟ ವಿಷ್ಣು ಮಂಚು ಕೌಂಟರ್ ಕೊಟ್ಟಿದ್ದಾರೆ.
ಪವನ್ ಕಲ್ಯಾಣ್‌ಗೆ ಪ್ರಕಾಶ್ ರಾಜ್ ಹೇಳಿದ್ದೇನು?
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಪೋಸ್ಟ್ ಹಂಚಿಕೊಳ್ಳುವ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಈ ಲಡ್ಡು ವಿಚಾರವಾಗಿಯೂ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್‌ಗೆ ಕೌಂಟರ್ ಕೊಟ್ಟಿರುವ ಪ್ರಕಾಶ್ ರಾಜ್, ನಿಮ್ಮ ರಾಜ್ಯದಲ್ಲಿ ಲಡ್ಡು ವಿವಾದ ನಡೆದಿದೆ.. ಅಲ್ಲಿ ನೀವೇ ಡೆಪ್ಯೂಟಿ ಸಿಎಂ.. ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ.. ಈ ವಿಚಾರವನ್ನು ರಾಷ್ಟ್ರವ್ಯಾಪಿ ಏಕೆ ಹರಡುತ್ತಿದ್ದೀರಿ? ಅದಕ್ಕೆ ರಾಷ್ಟ್ರ ಮಟ್ಟದ ಸಮಿತಿ ಏಕೆ? ಏಕೆಂದರೆ ಈಗಾಗಲೇ ನಮಗೆ ದೇಶದಲ್ಲಿ ಸಾಕಷ್ಟು ಕೋಮು ಉದ್ವಿಗ್ನತೆಗಳಿವೆ" ಎಂದು ಪ್ರಕಾಶ್ ರಾಜ್, ಪವನ್ ಕಲ್ಯಾಣ್ ಪೋಸ್ಟ್‌ಗೆ ಉತ್ತರಿಸಿದ್ದರು.
ಪ್ರಕಾಶ್ ರಾಜ್ ಟ್ವಿಟ್‌ಗೆ ವಿಷ್ಣು ಮಂಚು ಕೌಂಟರ್
ಇದೀಗ ಇದೇ ವಿಚಾರಕ್ಕೆ, ಪ್ರಕಾಶ್ ರಾಜ್ ಅವರ ಮಾತಿಗೆ ಟಾಲಿವುಡ್ ನಟ ವಿಷ್ಣು ಮಂಚು ತಮ್ಮದೇ ಶೈಲಿಯಲ್ಲಿ ಹೊಸ ಕೌಂಟರ್ ಕೊಟ್ಟಿದ್ದಾರೆ. ಹೀಗಿದೆ. ಶ್ರೀ ಪ್ರಕಾಶ್ ರಾಜ್ ಅವರೇ ದಯವಿಟ್ಟು ಸ್ವಲ್ಪ ತಾಳಿ.. ತಿರುಮಲ ಪ್ರಸಾದ, ಲಡ್ಡು ಎಂದರೆ ಬರೀ ಲಡ್ಡು ಅಲ್ಲ.. ಇದು ನನ್ನಂತಹ ಕೋಟ್ಯಂತರ ಭಕ್ತರ ಮತ್ತು ಹಿಂದೂಗಳ ನಂಬಿಕೆಯ ಪ್ರತೀಕ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ.. ಧರ್ಮ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.. ನಿಮ್ಮ ಇತಿಮಿತಿಯಲ್ಲಿ ಇದ್ದರೆ ಒಳಿತು.. ನಿಮ್ಮಂಥವರು ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸಿದರೆ.. ಆಗ ಧರ್ಮಕ್ಕೆ ಯಾವ ಬಣ್ಣ ಹಚ್ಚುತ್ತಾರೆ ಗೊತ್ತಾ? ಎಂದು ವಿಷ್ಣು ಮಂಚು ಪ್ರತ್ಯುತ್ತರ ನೀಡಿದ್ದಾರೆ.
ಪ್ರಣೀತಾ ಸುಭಾಷ್ ಅಸಮಾಧಾನ
ಇತ್ತ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿದ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ, ನಟಿ ಪ್ರಣೀತಾ ಸುಭಾಷ್ ಪ್ರತಿಕ್ರಿಯಿಸಿದ್ದಾರೆ. "ತಿರುಪತಿಯ ಶ್ರೀವಾರಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದಾರೆ ಎಂಬ ವಿಚಾರ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿದಂತೆ. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಇದು ತಿರುಪತಿ ತಿಮ್ಮಪ್ಪನ ಭಕ್ತರ ಊಹೆಗೂ ನಿಲುಕದ್ದು" ಎಂದು ಟ್ವಿಟ್ ಮಾಡಿದ್ದಾರೆ.