ಕನ್ನಡ ಸುದ್ದಿ  /  ಮನರಂಜನೆ  /  ಕಲ್ಕಿ 2898 ಎಡಿ ಸಿನಿಮಾದಲ್ಲಿ ನನಗೆ ಇಷ್ಟವಾದ 10 ಅಂಶಗಳು, ಶಾಂಬಾಲದಲ್ಲಿ ಸುರಿದ ಮಳೆಯಿಂದ ಕಾಂಪ್ಲೆಕ್ಸ್‌ನೊಳಗಿನ ಸಮುದ್ರದವರೆಗೆ

ಕಲ್ಕಿ 2898 ಎಡಿ ಸಿನಿಮಾದಲ್ಲಿ ನನಗೆ ಇಷ್ಟವಾದ 10 ಅಂಶಗಳು, ಶಾಂಬಾಲದಲ್ಲಿ ಸುರಿದ ಮಳೆಯಿಂದ ಕಾಂಪ್ಲೆಕ್ಸ್‌ನೊಳಗಿನ ಸಮುದ್ರದವರೆಗೆ

Kalki 2898 ad Movie: ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ ಸಿನಿಮಾ ಕೆಲವೊಂದು ಕೊರತೆಗಳ ನಡುವೆಯೂ ಇಷ್ಟವಾಗುತ್ತದೆ. ಶಾಂಬಾಲವೆಂಬ ಊರಲ್ಲಿ ಸಡನ್‌ ಸುರಿಯುವ ಮಳೆಯಿಂದ ಕಾಂಪ್ಲೆಕ್ಸ್‌ ಎಂಬ ಯಾಂತ್ರಿಕ ಜಗತ್ತಿನ ಪೃಕೃತಿ, ಸಮುದ್ರದವರೆಗೆ ಹಲವು ಅಂಶಗಳು ಇಷ್ಟವಾಗುತ್ತವೆ.

ಕಲ್ಕಿ 2898 ಎಡಿ ಸಿನಿಮಾದಲ್ಲಿ ನನಗೆ ಇಷ್ಟವಾದ 10 ವಿಷಯಗಳು
ಕಲ್ಕಿ 2898 ಎಡಿ ಸಿನಿಮಾದಲ್ಲಿ ನನಗೆ ಇಷ್ಟವಾದ 10 ವಿಷಯಗಳು

ಪ್ರಭಾಸ್‌-ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಕೆಲವೊಂದು ಕೊರತೆಗಳ ನಡುವೆಯೂ ಈ ಸಿನಿಮಾದಲ್ಲಿ ಗಮನ ಸೆಳೆಯುವ ಅನೇಕ ಸಂಗತಿಗಳಿವೆ. ಹಾಲಿವುಡ್‌ನ ಹಲವು ಸೂಪರ್‌ ಹೀರೋ ಮೂವಿಗಳನ್ನು ನೋಡುತ್ತ ಇದ್ದವರಿಗೆ ಭಾರತದ ಪುರಾಣ ಕಥೆಯೊಂದಿಗೆ ನಂಟು ಹೊಂದಿರುವಂತಹ ಭಾರತೀಯ ಸಿನಿಮಾವೊಂದನ್ನು ನೋಡುವ ಅವಕಾಶ ದೊರಕಿದೆ. ಈ ಸಿನಿಮಾದಲ್ಲಿ ಹಲವು ಅಂಶಗಳನ್ನು ನೀವು ಇಷ್ಟಪಡದೆ ಇರಲಾರಿರಿ.

ಭವಿಷ್ಯದ ದರ್ಶನ

ಹಾಲಿವುಡ್‌ ಸಿನಿಮಾಗಳಲ್ಲಿ ಜಗತ್ತು ಮುಂದೆ ಏನಾಗಲಿದೆ ಎಂಬ ಕಲ್ಪನೆಗಳು ಹೆಚ್ಚಾಗಿ ಇರುತ್ತವೆ. ಪ್ರಳಯ, ಬೇರೆ ಗ್ರಹದಲ್ಲಿ ವಾಸಿಸುವುದು, ನಗರಗಳು ಸುನಾಮಿಗೆ ಮುಳುಗಿ ಹೋಗುವುದು, ಹೀಗೆ ಹಾಲಿವುಡ್‌ನವರ ಕಲ್ಪನೆ ಭಯಂಕರವಾಗಿರುತ್ತದೆ. ಹಾಲಿವುಡ್‌ ಸಿನಿಮಾಗಳಲ್ಲಿ ವೈರಸ್‌ನಿಂದ ಭೂಮಿಯ ಜನರೆಲ್ಲ ಸಾಯುವ ಕಥೆ ಇರಬಹುದು. ಆ ಸಿನಿಮಾ ಬಿಡುಗಡೆಯಾಗಿ ಎಷ್ಟೋ ವರ್ಷಗಳ ಬಳಿಕ ಅಂತಹದ್ದೇ (ಕೊರೊನಾ) ಘಟನೆ ನಡೆಯಬಹುದು. ಭವಿಷ್ಯದ ನೋಟ ಹೊಂದಿರುವ ಕಾರಣದಿಂದ ಹಾಲಿವುಡ್‌ ಸಿನಿಮಾಗಳು ಹೆಚ್ಚು ಜನಪ್ರಿಯವಾಗಿವೆ. ಇದೇ ರೀತಿ ಕಲ್ಕಿ ಸಿನಿಮಾದಲ್ಲೂ ಭವಿಷ್ಯದ ದರ್ಶನವಿದೆ. ಈ ಭೂಮಿ ಒಂದು ದಿನ ನೀರಿಲ್ಲದೆ, ವಾಸಿಸಲಾಗದ ಸ್ಥಳವಾಗಬಹುದು. ಉಳ್ಳವರು ಕಾಂಪ್ಲೆಕ್ಸ್‌ ಕಟ್ಟಿಕೊಂಡು ವಾಸಿಸಬಹುದು. ಈಗ ಎಲಾನ್‌ ಮಸ್ಕ್‌ನ ಕೆಲವು ಯೋಜನೆಗಳು ಇದೇ ರೀತಿ ಇವೆ. ಈ ರೀತಿ ಭವಿಷ್ಯದ ಕುರಿತು ಒಂದು ಕಾಲ್ಪನಿಕ ದರ್ಶನ ನೀಡಿದ್ದು ನನಗೆ ಇಷ್ಟವಾದ ಮೊದಲ ಅಂಶ. ಈ ಭೂಮಿಯ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕೆಂಬ ಪಾಠವೂ ಇದೆ. ಆದರೆ, ನೀರು ಯಾಕೆ ಖಾಲಿಯಾಯಿತು? ಭೂಮಿಯ ಆ ಪರಿಸ್ಥಿತಿಗೆ ಕಾರಣವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ.

 

ಟ್ರೆಂಡಿಂಗ್​ ಸುದ್ದಿ

ಕಲ್ಕಿ 2898 ಎಡಿ ಸಿನಿಮಾ
ಕಲ್ಕಿ 2898 ಎಡಿ ಸಿನಿಮಾ

ಮಹಾಭಾರತದ ಹಿನ್ನೋಟ

ಕಾಶಿ ಜಗತ್ತಿನ ಮೊದಲ ನಗರ ಮತ್ತು ಕೊನೆಯ ನಗರವೆಂಬ ಕಲ್ಪನೆಯೂ ಇಷ್ಟವಾದ ಅಂಶ. ಮಹಾಭಾರತದ ಕಥೆ, ಕಲ್ಕಿಯ ಅವತಾರಕ್ಕಾಗಿ ಕಾಯುವಂತಹ ಸನ್ನಿವೇಶ ಎಲ್ಲವೂ ಇಷ್ಟವಾಗುವ ಸಂಗತಿಗಳು. ಜತೆಗೆ, ಕುರುಕ್ಷೇತ್ರದ ಯುದ್ಧದ ಕೆಲವು ದೃಶ್ಯಗಳು ಇಷ್ಟವಾಗುತ್ತವೆ. ಮಹಾಭಾರತದ ಪಾತ್ರಗಳನ್ನು ಭವಿಷ್ಯದ ಪಾತ್ರಗಳಿಗೆ ಲಿಂಕ್‌ ಮಾಡಿರುವ ಸಂಗತಿಯಂತೂ ಸೂಪರ್‌ ಎನ್ನಬಹುದು. ಅಶ್ವತ್ಥಾಮ, ಅರ್ಜುನಾ, ಕರ್ಣ, ಉತ್ತರಾ ಹೀಗೆ ಅನೇಕ ಪಾತ್ರಗಳು ನಮ್ಮನ್ನು ಮುದಗೊಳಿಸುತ್ತವೆ.

ಮುಖ ತೋರಿಸದ ಕೃಷ್ಣ

ನನಗೆ ಸಿನಿಮಾ ನೋಡುವಾಗ ಮೊದಲು ಸಂದೇಹ ಬಂತು. ನಾನು ಹಾಕಿಕೊಂಡಿರುವ 3ಡಿ ಗ್ಲಾಸ್‌ನಲ್ಲಿ ಏನಾದರೂ ಸಮಸ್ಯೆ ಇದೆಯೇ? ಈ ಸಿನಿಮಾದ ದೃಶ್ಯಗಳು ತಾಂತ್ರಿಕವಾಗಿ ಹೆಚ್ಚು ಸ್ಪಷ್ಟವಾಗಿಲ್ಲವೇ? ಯಾಕೆ ಕೃಷ್ಣನ ಮುಖ ಸರಿಯಾಗಿ ಕಾಣುತ್ತಿಲ್ಲ. ಯಾಕೆ ಕೃಷ್ಣನ ತಲೆಕೂದಲು, ಕಿವಿ ಮಾತ್ರ ಕಾಣಿಸುತ್ತದೆ ಎಂಬ ಸಂದೇಹ ಬಂತು. ಉದ್ದೇಶಪೂರ್ವಕಾಗಿಯೇ ಶ್ರೀ ಕೃಷ್ಣ ದೇವರನ್ನು ಈ ರೀತಿ ತೋರಿಸಿದ್ದು ಎಂದು ಅರಿವಾದಗ ನಿರ್ದೇಶಕರ ಕ್ರಿಯೆಟಿವಿಟಿಗೆ ಸೂಪರ್‌ ಹೇಳಬೇಕೆನಿಸಿತ್ತು. ಚಿತ್ರದ ಕೊನೆಗೆ ಕೃಷ್ಣವಾಣಿಯಂತೂ ನಮ್ಮ ನರನಾಡಿಗಳನ್ನು ರೋಮಾಂಚನ ಮಾಡುತ್ತದೆ.

ಭವಿಷ್ಯದ ತಂತ್ರಜ್ಞಾನಗಳು

ಹಾಲಿವುಡ್‌ ಸಿನಿಮಾಗಳಲ್ಲಿ ಈಗಾಗಲೇ ತೋರಿಸಿದಂತಹ ಭವಿಷ್ಯದ ತಂತ್ರಜ್ಞಾನಗಳನ್ನು ತುಸು ಮಾರ್ಪಾಡಿಸಿ ಭಾರತೀಯತೆಯಿಂದ ತೋರಿಸುವ ಪ್ರಯತ್ನ ಮಾಡಲಾಗಿದೆ. ಹಾರುವ ವಾಹನಗಳ ವಿನ್ಯಾಸ, ಗನ್‌ಗಳು, ಸಂವಹನ ಸಾಧನಗಳು, ಕೈಯಲ್ಲಿರುವ ವಾಚ್‌ ಮೂಲಕವೇ ದೂರದಲ್ಲಿರುವ ವ್ಯಕ್ತಿಗಳ ಜತೆ ನೇರವಾಗಿ ಮಾತನಾಡುವುದು... ಭವಿಷ್ಯದ ತಂತ್ರಜ್ಞಾನಗಳ ಕುರಿತ ಕಲ್ಪನೆಯೂ ಇಷ್ಟವಾಗುತ್ತದೆ.

ಕಾಂಪ್ಲೆಕ್ಸ್‌ನೊಳಗೆ ಮತ್ತೊಂದು ಪ್ರಾಕೃತಿಕ ಜಗತ್ತು

ಕಾಂಪ್ಲೆಕ್ಸ್‌ ಎಂದರೆ ಇನ್ನೊಂದು ಯಾಂತ್ರಿಕ ಜಗತ್ತು ಎಂಬ ಕಲ್ಪನೆ ನನ್ನಲ್ಲಿತ್ತು. ಆದರೆ, ಆ ಕಾಂಪ್ಲೆಕ್ಸ್‌ನೊಳಗೆ ಇರುವ ಹಲವು ಮಹಡಿಗಳು, ಒಂದು ಮಹಡಿಯಿಂದ ಹೊರಹೋದರೆ ಭೂಮಿಯಲ್ಲಿ ಈಗ ಇರುವಂತಹ ಸುಂದರ ಜಗತ್ತು ಕಾಣಿಸುತ್ತದೆ. ಅಲ್ಲಿರುವ ಕೃತಕ ಸಮುದ್ರ, ಅಲ್ಲಿನ ಹಣ್ಣುಗಳ ತೋಟ, ಪರಿಸರ ಎಲ್ಲವೂ ನಮಗೆ ಹಿತ ನೀಡುತ್ತವೆ. 2998 ಇಸವಿಯಲ್ಲಿರುವ ನಾವು ಕೂಡ ಭೂಮಿಗೆ ವಾಪಸ್‌ ಬಂದಂತಹ ಹಿತವಾದ ಅನುಭವ ನೀಡುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಇರುವ ಹಾಡು, ಡ್ಯಾನ್ಸ್‌ ಕೂಡ ಖುಷಿ ನೀಡುತ್ತದೆ.

ಹಾಲಿವುಡ್‌ ಸಿನಿಮಾ ನೋಡಿದ ಫೀಲ್‌

ಎಷ್ಟಾದರೂ ನಮ್ಮ ಭಾರತೀಯರು ಮಾಡುವ ಸಿನಿಮಾ ಇಷ್ಟೇ ಇರುತ್ತದೆ ಎಂಬ ಮನಸ್ಥಿತಿ, ಯೋಚನೆ ಜನರಲ್ಲಿ ಇರುವುದು ಸಾಮಾನ್ಯ. ಆದರೆ, ಕಳೆದ ಹಲವು ವರ್ಷಗಳಿಂದ ಭಾರತದ ಸಿನಿಮಾಗಳು ಜಗತ್ತನ್ನು ತಿರುಗಿ ನೋಡುವಂತೆ ಮಾಡಿವೆ. ಇದೀಗ ಕಲ್ಕಿ ಸಿನಿಮಾ ಕೂಡ ಬಾಲಿವುಡ್‌ ಸಿನಿಮಾಗಳ ಲೆವೆಲ್‌ನಲ್ಲಿ ನಿಲ್ಲುವ ಸಾಮರ್ಥ್ಯ ಇರುವಂತಹದ್ದು. ಈ ಸಿನಿಮಾ ನೋಡಿದಾಗ ಹಲವು ಬಾಲಿವುಡ್‌ ಸಿನಿಮಾಗಳು ನೆನಪಿಗೆ ಬರಬಹುದು. ಬಬ್ಲಿಯೊನ್‌ ಎಡಿ, ಜಾರ್ಜ್‌ ಮಿಲ್ಲರ್‌ನ ಮ್ಯಾಡ್‌ ಮ್ಯಾಕ್ಸ್‌ ಸೀರಿಸ್‌, ಸ್ಟಾರ್‌ ವಾರ್ಸ್‌, ನೋ ಮ್ಯಾನ್ಸ್‌ ಸ್ಕೈ, ಗಾರ್ಡಿಯನ್ಸ್‌ ಆಫ್‌ ಗ್ಯಾಲಾಕ್ಸಿ, ಹಾರಿಜನ್ಸ್‌ ಹೀಗೆ ಹಲವು ಹಾಲಿವುಡ್‌ ಸಿನಿಮಾಗಳು, ವೆಬ್‌ ಸರಣಿಗಳು ನೆನಪಿಗೆ ಬರಬಹುದು. ಇಂತಹ ಸಿನಿಮಾಗಳಿಂದ ಸ್ಪೂರ್ತಿ ಪಡೆದ ಸಂಗತಿಗಳೂ ಸಾಕಷ್ಟು ಇವೆ.

ಬುಜ್ಜಿ ಕಾರ್‌

ಕಲ್ಕಿ 2898 ಎಡಿ ಸಿನಿಮಾದಲ್ಲಿ ಬಳಸಿರುವ ಬುಜ್ಜಿ ಕಾರು ಈ ಸಿನಿಮಾದ ಪ್ರಮುಖ ಆಕರ್ಷಣೆ. ಕೀರ್ತಿ ಸುರೇಶ್‌ ಧ್ವನಿ ಜತೆ ಪ್ರಭಾಸ್‌ ಸಂವಹನ ಮುದ ನೀಡುತ್ತದೆ.

 

ಕಾಶಿ ದರ್ಶನ
ಕಾಶಿ ದರ್ಶನ

ಅತಿಥಿ ಪಾತ್ರಗಳು ನೀಡುವ ಅಚ್ಚರಿ

ಈ ಸಿನಿಮಾದಲ್ಲಿ ಅಲ್ಲಲ್ಲಿ ಅತಿಥಿ ಪಾತ್ರಗಳು ಎಂಟ್ರಿ ನೀಡಿ ಅಚ್ಚರಿ ನೀಡುತ್ತವೆ. ಬ್ರಹ್ಮಾನಂದಂ ಅವರ ಮುಖ ನೋಡಿದ ತಕ್ಷಣ ಪ್ರೇಕ್ಷಕರ ಮುಖದಲ್ಲಿ ನಗು ಬರುತ್ತದೆ. ರಾಮ್‌ ಗೋಪಾಲ್‌ ವರ್ಮಾ, ರಾಜಮೌಳಿ ಮುಂತಾದವರನ್ನು ನೋಡಿದಾಗ ಖುಷಿಯಾಗುತ್ತದೆ.

ಶಾಂಬಲಾವೆಂಬ ಲೋಕ

ಈ ಸಿನಿಮಾದಲ್ಲಿ ಕಾಂಪ್ಲೆಕ್ಸ್‌ ವಿರುದ್ಧ ಹೋರಾಡಲು ಶಾಂಬಲಾ ಎಂಬ ಸ್ಥಳವಿದೆ. ಈ ಸ್ಥಲದಲ್ಲಿರುವ ಒಂದು ದೊಡ್ಡ ಮರ, ಅಲ್ಲಿನ ಜನರು, ಸೆಟಪ್‌ ಎಲ್ಲವೂ ಇಷ್ಟವಾಗುತ್ತದೆ. ಭಾರತದ ವಿವಿಧ ಪ್ರದೇಶ, ಸಂಸ್ಕೃತಿಗಳ ಜನರನ್ನು ಅಲ್ಲಿ ನೋಡಬಹುದು. ಗರ್ಭಿಣಿ ಸುಮತಿ ಅಲ್ಲಿಗೆ ತಲುಪಿದಾಗ ಸುರಿಯುವ ಮಳೆ, ಅಲ್ಲಿನ ಜನರ ಹರ್ಷ ಖುಷಿ ನೀಡುತ್ತದೆ.

ಶಾಂಬಲಾದಲ್ಲಿ ಮಳೆ
ಶಾಂಬಲಾದಲ್ಲಿ ಮಳೆ

ಅಮಿತಾಬ್‌ ಬಚ್ಚನ್‌ ಮತ್ತು ಇತರರ ನಟನೆ

ಈ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇಲ್ಲಿ ಇವರ ನಟನೆಯೂ ಆಪ್ತವಾಗುತ್ತದೆ. ಅತಿಥಿ ಪಾತ್ರಗಳೂ ಖುಷಿ ನೀಡುತ್ತವೆ. ಅಮಿತಾಬ್‌ ಬಚ್ಚನ್‌ ಮತ್ತು ಬಾಲಕನ ಪಾತ್ರವು "ಅಜ್ಜ ಮೊಮ್ಮಗನ ಆತ್ಮೀಯತೆ"ಯಿಂದ ಇಷ್ಟವಾಗುತ್ತದೆ. ಕಮಲ್‌ ಹಾಸನ್‌ ಅವರ ಯಾಸ್ಕಿನ್‌ ಪಾತ್ರ ಪ್ರಮುಖ ಆಕರ್ಷಣೆ. ಚಿತ್ರದ ಅಂತ್ಯದಲ್ಲಿ ತನ್ನ ಸುಕ್ಕುಗಟ್ಟಿದ ದೇಹ ಕಳಚಿ ಹೊಸ ಅವತಾರ ತಾಳುವ ದೃಶ್ಯವೂ ಸೂಪರ್‌. ಮುಂದಿನ ಭಾಗದಲ್ಲಿ ಕಮಲ್‌ ಹಾಸನ್‌ ಅವರನ್ನು ನಿಜ ರೂಪದಲ್ಲೇ ನೋಡಬಹುದು. ಕೆಲವೊಂದು ನೆಗೆಟಿವ್‌ ಅಂಶಗಳ ನಡುವೆಯೂ ಇಂತಹ ಹಲವು ಅಂಶಗಳು ನನಗೆ ಇಷ್ಟವಾಗಿವೆ. ಮಹಾಭಾರತದ ಕಥೆಗಳನ್ನು ತಿಳಿದಿರುವ ಭಾರತೀಯರಿಗೆ ಈ ಸಿನಿಮಾ ಇಷ್ಟವಾದಂತೆ ಜಗತ್ತಿನ ವಿವಿಧೆಡೆಯ ಪ್ರೇಕ್ಷಕರ ಹೃದಯವನ್ನು ಈ ಸಿನಿಮಾ ತಟ್ಟಬಹುದೇ ಎಂಬ ಸಂದೇಹವೂ ಇದೆ. 

  • ಪ್ರವೀಣ್‌ ಚಂದ್ರ ಪುತ್ತೂರು