ಯಬ್ಬಾ Kalki 2898 AD ಸಿನಿಮಾ ಇಷ್ಟೊಂದು ದೊಡ್ಡದ? ಪ್ರಭಾಸ್, ದೀಪಿಕಾ ಪಡುಕೋಣೆ ಸಿನಿಮಾದ ರನ್‌ಟೈಮ್ ವಿಚಾರ ಬಹಿರಂಗ
Kalki 2898 AD Runtime: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇದೇ ಜೂನ್ 27, 2024ರಂದು ಚಿತ್ರಮಂದಿರಗಳಿಗೆ ಆಗಮಿಸಲಿದೆ. ಈ ಸಿನಿಮಾದ ರನ್‌ಟೈಮ್ ಕುರಿತು ಈಗ ಚರ್ಚೆಯಾಗುತ್ತಿದೆ. ಇಷ್ಟು ರನ್ ಟೈಮ್ ಇದ್ದರೆ ಸಿನಿಮಾ ಬೋರ್ ಆಗದೇ? ಈ ರನ್ ಟೈಮ್ ಸಿನಿಮಾಕ್ಕೆ ವಿಲನ್ ಆಗಬಹುದೇ? ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರು: Kalki 2898 AD ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮವು ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದೆ. ಈ ಸಿನಿಮಾವನ್ನು ನೋಡಿರುವ ಸೆನ್ಸಾರ್ ಮಂಡಳಿಯು ಈಗಾಗಲೇ ವಾಹ್ ಎಂದಿದೆ. ಇದರಿಂದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಎಲ್ಲರೂ ಚಿತ್ರವನ್ನು ದೊಡ್ಡಪರದೆಯಲ್ಲಿ ನೋಡಲು ಕಾತರರಾಗಿದ್ದಾರೆ. ಆದರೆ, ಈ ಸಿನಿಮಾದ ರನ್ ಟೈಮ್ ಎಷ್ಟು? ಈ ಸಿನಿಮಾದ ರನ್‌ಟೈಮ್ ಈ ಚಿತ್ರಕ್ಕೆ ವಿಲನ್ ಆಗಬಹುದೇ? ಎಂಬ ಪ್ರಶ್ನೆಗಳೂ ಎದುರಾಗಿವೆ.
ಕಲ್ಕಿ 2898 ಎಡಿ ಸಿನಿಮಾದ ರನ್‌ಟೈಮ್
ಕಲ್ಕಿ 2898 ಎಡಿ ಸಿನಿಮಾದ ರನ್‌ಟೈಮ್ 3 ಗಂಟೆಗಳು ಮತ್ತು 47 ಸೆಕೆಂಡ್‌ಗಳು. ಈಗ ಬಹುತೇಕ ಸಿನಿಮಾಗಳು ಎರಡು ಗಂಟೆ ಆಸುಪಾಸಿನ ರನ್‌ಟೈಮ್ ಹೊಂದಿದ್ದರೆ, ಕಲ್ಕಿ ರನ್‌ಟೈಮ್ ಮಾತ್ರ ಮೂರು ಗಂಟೆಯ ಗಡಿ ದಾಟಿದೆ. ಇಷ್ಟು ದೊಡ್ಡ ಗಾತ್ರದ ಸಿನಿಮಾವು ಈ ಸಿನಿಮಾಕ್ಕೆ ವಿಲನ್ ಆಗಬಹುದೇ? ಅಥವಾ ಪ್ರೇಕ್ಷಕರಿಗೆ ಬೊಂಬಾಟ್ ಭೋಜನವಾಗಲಿದೆಯೇ ಎಂದು ಕಾದು ನೋಡಬೇಕಿದೆ.
ಸದ್ಯ ಒಟಿಟಿ ಪ್ಲೇ ಪ್ರಕಟಿಸಿದ ಮಾಹಿತಿ ಪ್ರಕಾರ ಈ ಸಿನಿಮಾ ಅಂತಿಮವಾಗಿ ರೆಡಿಯಾದಾಗ ನಾಲ್ಕೂವರೆ ಗಂಟೆಯಾಗಿತ್ತಂತೆ. ನಾಗ್ ಅಶ್ವಿನ್ ತಂಡವು ಈ ಸಿನಿಮಾವನ್ನು ಕತ್ತರಿಸಿ ಮೂರು ಗಂಟೆಗೆ ಇಳಿಸಿದೆಯಂತೆ. ಇದರ ಬದಲು ಎರಡು ಭಾಗ ಬಿಡುಗಡೆ ಮಾಡಬಹುದಿತ್ತು. ಈಗ ಸಿನಿಮಾ ಪ್ರೇಕ್ಷಕರು ಹೆಚ್ಚು ಸಮಯ ಚಿತ್ರಮಂದಿರಗಳಲ್ಲಿ ಕಾಲ ಕಳೆಯಲು ಬಯಸುವುದಿಲ್ಲ. ಎಲ್ಲರಿಗೂ ಮನರಂಜನೆ ಬೇಗ ದೊರಕಬೇಕು. ಇದು ಶಾರ್ಟ್ಸ್ ಕಾಲ. ಹೀಗಿದ್ದಾಗ ಈ ಮೂರು ಗಂಟೆಯ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬಹುದೇ? ಸುಸ್ತಾಗಿಸಬಹುದೇ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಅಂತಿಮವಾಗಿ ಚಿತ್ರ ಹೇಗಿದೆ ಎನ್ನುವುದರ ಮೇಲೆ ಈ ರನ್ ಟೈಮ್ ಪರಿಣಾಮ ಇರಲಿದೆ.
ಹೀಗಿದ್ದರೂ, ದೊಡ್ಡ ಸಿನಿಮಾ ಕೆಲವೊಮ್ಮೆ ಸಮಸ್ಯೆಯಾಗದು. ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಸಿನಿಮಾವೂ ಮೂರು ಗಂಟೆಗಿಂತಲೂ ದೀರ್ಘವಾಗಿತ್ತು. ಇದೇ ರೀತಿಯ ಕಾನ್ಫಿಡೆನ್ಸ್ ಅನ್ನು ಕಲ್ಕಿ ತಯಾರಕರೂ ಹೊಂದಿದ್ದಾರೆ. ಈ ಚಿತ್ತದ ನಿರ್ಮಾಪಕರಲ್ಲಿ ಒಬ್ಬರಾದ ಸ್ವಪ್ನ ದತ್ ಪ್ರಕಾರ ಪ್ರೇಕ್ಷಕರಿಗೆ ಕಲ್ಕಿ ಸಿನಿಮಾವು ಹೊಸ ಅನುಭವ ನೀಡಲಿದೆ, ಪ್ರೇಕ್ಷಕರನ್ನು ಹೊಸ ಜಗತ್ತಿಗೆ ಕರೆದೊಯ್ಯಲಿದೆ. ಇದರಿಂದಾಗಿ ಪ್ರೇಕ್ಷಕರು ರನ್ ಟೈಮ್ ಕುರಿತು ಯೋಚನೆ ಮಾಡಲಾರರು ಎಂದು ಅವರು ಹೇಳಿದ್ದಾರೆ.
ಕಲ್ಕಿ ಸಿನಿಮಾದ ಕುರಿತು
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಕಲ್ಕಿ 2898 AD’ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.