ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದಕ್ಕೆ ನಟ ರಾಮಸ್ವಾಮಿಗೆ ಕಪಾಳಮೋಕ್ಷ!; ಎಳೆದಾಡಿ ನಟನ ಕೆನ್ನೆಗೆ ಬಾರಿಸಿದ ಮಹಿಳೆ VIDEO
NT Ramaswamy: ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಎನ್. ಟಿ ರಾಮಸ್ವಾಮಿ ಅವರಿಗೆ ಮಹಿಳೆಯಿಂದ ಕಪಾಳಪೋಕ್ಷವಾಗಿದೆ. ಸಿನಿಮಾದಲ್ಲಿ ಖಳನ ಪಾತ್ರ ಮಾಡಿದ್ದಕ್ಕೆ ಮಹಿಳೆ ಕೊಂಚ ಗರಂ ಆಗಿಯೇ ವರ್ತಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ.

Tollywood news: ಸ್ಯಾಂಡಲ್‌ವುಡ್‌ನಲ್ಲಿ ಮತ್ತು ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿದ್ದಾರೆ ಪೋಷಕ ನಟ ಎನ್.ಟಿ. ರಾಮಸ್ವಾಮಿ. ಈಗ ಇದೇ ನಟ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಇದೇ ರಾಮಸ್ವಾಮಿ ಪೋಷಕ ಪಾತ್ರದಲ್ಲಿ ನಟಿಸಿದ ಲವ್ ರೆಡ್ಡಿ ಚಿತ್ರ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಖಳನಟನಾಗಿ ರಾಮಸ್ವಾಮಿ ನಟಿಸಿದ್ದರು. ಈಗ ಈ ವಿಲನ್ ಪಾತ್ರವೇ ಅವರಿಗೆ ಇಮೇಜ್‌ಗೆ ಡ್ಯಾಮೇಜ್ ಮಾಡಿದೆ. ಹಾಗಾದರೆ ಅಷ್ಟಕ್ಕೂ ಏನಾಗಿತ್ತು? ಇಲ್ಲಿದೆ ಮಾಹಿತಿ.
ಲವ್ ರೆಡ್ಡಿ ಸಿನಿಮಾದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ ಎನ್.ಟಿ ರಾಮಸ್ವಾಮಿ. ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಖಳನಾಗಿ ನಟಿಸಿದ್ದೇ ತಡ, ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮಹಿಳೆಯೊಬ್ಬರು, ಸಿನಿಮಾ ಮುಗಿಯುತ್ತಿದ್ದಂತೆ, ನೇರವಾಗಿ ಸಿನಿಮಾ ತಂಡದ ಬಳಿ ಬಂದು, ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದವರು ಒಂದು ಕ್ಷಣ ಏನಾಗ್ತಿದೆ ಎಂದೂ ನಿಬ್ಬೆರಗಾಗಿದ್ದಾರೆ. ಕೊನೆಗೆ ಮಹಿಳೆ ಹಲ್ಲೆ ಮಾಡುತ್ತಿದ್ದಂತೆ, ಆಕೆಯನ್ನು ಅಲ್ಲಿದ್ದವರು ಬಿಡಿಸಿದ್ದಾರೆ.
ಸಿನಿಮಾ ಪ್ರಚಾರದ ವೇಳೆ ನಡೆದ ಘಟನೆ
ಹೌದು ಸಿನಿಮಾ ಪ್ರಚಾರ ನಿಮಿತ್ತ ಇತ್ತೀಚೆಗಷ್ಟೇ ಇಡೀ ಸಿನಿಮಾತಂಡ ಚಿತ್ರಮಂದಿರಕ್ಕೆ ಭೇಟಿ ನೀಡಿದೆ. ಸಿನಿಮಾಕ್ಕೆ ಸಿಗುತ್ತಿರುವ ಒಳ್ಳೆಯ ರೆಸ್ಪಾನ್ಸ್ ನೋಡಿ, ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಲುವಾಗಿ ಚಿತ್ರದ ಶೋ ಮುಗಿದ ಬಳಿಕ ಎಲ್ಲರೂ ಸ್ಕ್ರೀನ್ ಮುಂದೆ ಬಂದಿದ್ದಾರೆ. ಇದೇ ವೇಳೆ ಓಡಿ ಬಂದ ಮಹಿಳೆ ರಾಮಸ್ವಾಮಿ ಅವರ ಅಂಗಿ ಹಿಡಿದು ಎಳೆದಾಡಿದ್ದಾರೆ. ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.
ಗಿಮಿಕ್ ಇರಬಹುದಾ?
ಇತ್ತೀಚಿನ ದಿನಗಳಲ್ಲಿ ಸಿನಿಮಾ ಪ್ರಚಾರದ ರೀತಿ ರಿವಾಜುಗಳು ಬದಲಾಗುತ್ತಿವೆ. ಜನರನ್ನು ಸೆಳೆಯಬೇಕು ಎಂಬ ಒಂದೇ ಕಾರಣಕ್ಕೆ, ಸಿಕ್ಕ ಸಿಕ್ಕ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಅಸಹ್ಯ ಎನಿಸುವ, ಮುಜುಗರಕ್ಕೀಡು ಮಾಡುವ ಪ್ರಯತ್ನಗಳು ನಡೆದ ಉದಾಹರಣೆಗಳಿವೆ. ಇದೀಗ ಲವ್ ರೆಡ್ಡಿ ಸಿನಿಮಾ ತಂಡದ ಜತೆಗೆ ಮಹಿಳೆಯ ಈ ಅನುಚಿತ ವರ್ತನೆಯೂ ಗಿಮಿಕ್ ಇರಬಹುದಾ? ಹೀಗೊಂದು ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ವೈರಲ್ ವಿಡಿಯೋಕ್ಕೆ ಇಂಥದ್ದೇ ಕಾಮೆಂಟ್‌ಗಳು ಹರಿದು ಬರುತ್ತಿವೆ. ಸಮ್ರಾನ್ ರೆಡ್ಡಿ ನಿರ್ದೇಶನದಲ್ಲಿ ಲವ್ ರೆಡ್ಡಿ ಸಿನಿಮಾ ಮೂಡಿಬಂದಿದೆ.