Pushpa 2: 5 ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಪುಷ್ಪ 2 ಗಳಿಸಿದ್ದೆಷ್ಟು? ಅಲ್ಲು ಅರ್ಜುನ್ ನಟನೆಯ ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್
Pushpa 2 box office collection day 5: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟನೆಗೂ ಶ್ಲಾಘನೆ ವ್ಯಕ್ತವಾಗಿದೆ.
ಪುಷ್ಪ 2 ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ವರದಿ: ಪುಷ್ಪ 2 ಸಿನಿಮಾದ ಕುರಿತು ಸಿನಿಮಾ ಪ್ರೇಮಿಗಳ ಆಸಕ್ತಿ ಕಡಿಮೆಯಾದಂತೆ ಇಲ್ಲ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಉತ್ತಮ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾದ ವಾರದಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಆದರೆ, ಸಿನಿಮಾಕ್ಕೆ ಮೊದಲ ಸೋಮವಾರ ತುಸು ಆತಂಕವಿತ್ತು. ಪುಷ್ಪ 2 ಬಿಡುಗಡೆಯಾದ ಐದನೇ ದಿನ ಅಂದರೆ ಸೋಮವಾರ ಈ ಚಿತ್ರದ ಕಲೆಕ್ಷನ್ ಎಷ್ಟಿದೆ ಎಂದು ನೋಡೋಣ.
600 ಕೋಟಿ ರೂ ಸನಿಹ ತಲುಪಿದ ಪುಷ್ಪ 2
sacnilk ವೆಬ್ ತಾಣದ ಪ್ರಕಾರ ಕಳೆದ ಐದು ದಿನಗಳಲ್ಲಿ ಪುಷ್ಪ 2 ಸಿನಿಮಾದ ಗಳಿಕೆ 590 ಕೋಟಿ ರೂಪಾಯಿ ದಾಟಿದೆ. ಮಂಗಳವಾರ ಈ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ 600 ಕೋಟಿ ರೂಪಾಯಿ ದಾಟುವುದು ನಿಚ್ಚಳವಾಗಿದೆ. ಪುಷ್ಪ 2 ಸಿನಿಮಾವು ಸೋಮವಾರ ಅಂದರೆ ನಿನ್ನೆ 64.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊನ್ನೆ ಶುಕ್ರವಾರ ಈ ಸಿನಿಮಾ 93.8 ಕೋಟಿ ರೂಪಾಯಿ, ಶನಿವರ 119.25 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಸಿನಿಮಾದ ಗಳಿಕೆ 141.05 ಕೋಟಿ ರೂಪಾಯಿಗೆ ತಲುಪಿತ್ತು. ಒಟ್ಟಾರೆ ಕಳೆದ ಐದು ದಿನಗಳಲ್ಲ ಈ ಸಿನಿಮಾದ ಬಾಕ್ಸ್‌ಆಫೀಸ್ ಗಳಿಕೆ 593.1 ಕೋಟಿ ರೂಗೆ ತಲುಪಿದೆ.
ಪುಷ್ಪ 2: ದಿ ರೂಲ್ ಸಿನಿಮಾದ ತೆಲುಗು ಆಕ್ಯುಪೆನ್ಸಿ ಶೇಕಡ38.33 ಇತ್ತು. ಹಿಂದಿ ಆಕ್ಯುಪೆನ್ಸಿ ಶೇಕಡ 40.11 ಇತ್ತು. ಅಂದರೆ, ನಿನ್ನೆ ಈ ಸಿನಿಮಾ ನೋಡಲು ಚಿತ್ರಮಂದಿರಗಳಲ್ಲಿ ಸರಾಸರಿ ಇಷ್ಟು ಶೇಕಡ ಸೀಟುಗಳು ಭರ್ತಿಯಾಗಿದ್ದವು. ಕಳೆದ ವಾರ ವಾರಾಂತ್ಯದ ಹಿನ್ನೆಲೆಯಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ದೊಡ್ಡ ಚಿತ್ರಗಳಿಲ್ಲದ ಕಾರಣ ಪುಷ್ಪ 2 ಚಿತ್ರಕ್ಕೆ ದೊಡ್ಡ ಲಾಭವೇ ಆಗಿದೆ. ಆದರೆ, ಈ ಸೋಮವಾರದಿಂದ ಶುಕ್ರವಾರದ ತನಕ ವಾರದ ನಡುವಿನ ದಿನಗಳಲ್ಲಿ ಗಳಿಕೆ ತುಸು ಕಡಿಮೆ ಇರುವ ಸೂಚನೆ ಇದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಪುಷ್ಪ ಹೆಸರಿನಲ್ಲಿದೆ. ಅದೇ ರೀತಿ 500 ಕೋಟಿ ರೂ.ಗಳ ಗಡಿಯನ್ನು ದಾಟಿದ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಸಿನಿಮಾದ ಪಾಲಾಗಿದೆ. ಈ ಸಿನಿಮಾ ತೆಲುಗಿಗಿಂತ ಹಿಂದಿಯಲ್ಲಿ ಹೆಚ್ಚು ಗಳಿಕೆ ಮಾಡಿದೆ.
2021ರಲ್ಲಿ ಪುಷ್ಪ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿತ್ತು. ಆ ಸಿನಿಮಾ ಸಾರ್ವಕಾಲಿಕ 350 ಕೋಟಿ ಗಳಿಸುವ ಮೂಲಕ ಕಲೆಕ್ಷನ್ ಕೊನೆಗೊಳಿಸಿತ್ತು. ಆದರೆ, ಈ ಬಾರಿ ಪುಷ್ಪ 2 ಸಿನಿಮಾವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ದಾಖಲೆಯನ್ನು ಮುರಿದು ಮುನ್ನುಗ್ಗಿದೆ.
ಸುಕುಮಾರ್ ನಿರ್ದೇಶನದ ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀಲೀಲಾ ಐಟಂ ಸಾಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಫಹಾದ್ ಫಾಸಿಲ್, ರಾವ್ ರಮೇಶ್, ಜಗಪತಿ ಬಾಬು, ಸುನಿಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದಿನ ಆರು ವರ್ಷಗಳ ಬಳಿಕವಷ್ಟೇ ಪುಷ್ಪ 3 ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.