ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ
Rashmika Mandanna: ಮೂರು ವರ್ಷಗಳ ಹಿಂದೆ ಒಂದು ಚಿತ್ರಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಾಯಕಿ, ಈಗ ತಮ್ಮ ಸಂಭಾವನೆಯನ್ನು ಐದು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಇವರೇ ‘ಪುಷ್ಪ 2: ದಿ ರೂಲ್’ ಚಿತ್ರನಟಿ ರಶ್ಮಿಕಾ ಮಂದಣ್ಣ.
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇದೀಗ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ರಶ್ಮಿಕಾ ಮಂದಣ್ಣ, ಸದ್ಯ ಅಲ್ಲು ಅರ್ಜುನ್ ಅವರೊಂದಿಗೆ ಪುಷ್ಪ 2: ದಿ ರೂಲ್ ಚಿತ್ರದಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿನ ನಟನೆಗಾಗಿ ರಶ್ಮಿಕಾ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) 2024ರ ಸಮಾರೋಪ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಪುಷ್ಪಾ 2 ಚಿತ್ರದಲ್ಲಿ ನಟನೆಯೊಂದಿಗೆ, ನೀವು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೇ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ನ್ಯಾಷನಲ್ ಕ್ರಷ್ ರಶ್ಮಿಕಾ, “ನಾನು ಅದನ್ನು ಒಪ್ಪುವುದಿಲ್ಲ. ಏಕೆಂದರೆ ಇದು ನಿಜವಲ್ಲ” ಎಂದು ಅವರು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರದ ನಟನೆಗಾಗಿ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬುದು ಚಿತ್ರರಂಗದಿಂದ ಕೇಳಿಬರುತ್ತಿರುವ ಮಾತು. 2021ರಲ್ಲಿ ಬಿಡುಗಡೆಯಾದ ಪುಷ್ಪ 1 ಚಿತ್ರದ ಮೂಲಕ ಪ್ಯಾನ್-ಇಂಡಿಯಾ ನಾಯಕಿಯಾದ ರಶ್ಮಿಕಾ ಮಂದಣ್ಣ, ನಂತರ ಎನಿಮಲ್ ಸಿನಿಮಾದೊಂದಿಗೆ ಬಾಲಿವುಡ್‌ನ ಕ್ರೇಜಿ ನಾಯಕಿಯಾದರು.
ಸಂಭಾವನೆ 5 ಪಟ್ಟು ಹೆಚ್ಚಳ
ಪುಷ್ಪ-1 ಚಿತ್ರದ ನಟನೆಗೆ ರಶ್ಮಿಕಾ ಕೇವಲ 2 ಕೋಟಿ ಸಂಭಾವನೆ ಪಡೆದಿದ್ದರು. ಕಳೆದ ಮೂರು ವರ್ಷಗಳಲ್ಲಿ, ಅವರ ಸಂಭಾವನೆ 5 ಪಟ್ಟು ಹೆಚ್ಚಾಗಿದೆ. ಪುಷ್ಪ-2 ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗುವ ನಿರೀಕ್ಷೆ ಇದೆಯೇ ಎಂದು ಕೇಳಿದಾಗ ಮುಗುಳ್ನಕ್ಕ ರಶ್ಮಿಕಾ, “ಬರಬಹುದು ಎಂದು ಆಶಿಸುತ್ತೇನೆ” ಎಂದು ಉತ್ತರಿಸಿದ್ದಾರೆ.
ಪುಷ್ಪಾ ಶೂಟಿಂಗ್ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಸಾಲು ಸಾಲು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಧನುಷ್ ಮತ್ತು ನಾಗಾರ್ಜುನ ಅಕ್ಕಿನೇನಿ ಅವರೊಂದಿಗೆ ಮುಂಬರುವ ಚಿತ್ರ ಕುಬೇರ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದರ ಜೊತೆಜೊತೆಗೆ ವಿಕ್ಕಿ ಕೌಶಲ್ ಅವರೊಂದಿಗೆ ಚಾವಾ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.
ವಿಶ್ವದಾದ್ಯಂತ 12,000 ಚಿತ್ರಮಂದಿರಗಳಲ್ಲಿ ಬಿಡುಗಡೆ
ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ವಿಶ್ವದಾದ್ಯಂತ 12,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೂರು ವರ್ಷಗಳ ನಂತರ ಅಲ್ಲು ಅರ್ಜುನ್ ಅವರ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಸುಮಾರು ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ವಿದೇಶದಲ್ಲೂ ದಾಖಲೆ ಮುರಿಯಲು ಸಜ್ಜಾಗಿದೆ.