Daaku Maharaaj Trailer: ಡಾಕು ಮಹಾರಾಜ್ ಟ್ರೇಲರ್‌ನಲ್ಲಿ ಸಾಹಸದ ವಿಶ್ವರೂಪ ತೋರಿಸಿದ ನಂದಮೂರಿ ಬಾಲಕೃಷ್ಣ
ಕನ್ನಡ ಸುದ್ದಿ  /  ಮನರಂಜನೆ  /  Daaku Maharaaj Trailer: ಡಾಕು ಮಹಾರಾಜ್ ಟ್ರೇಲರ್‌ನಲ್ಲಿ ಸಾಹಸದ ವಿಶ್ವರೂಪ ತೋರಿಸಿದ ನಂದಮೂರಿ ಬಾಲಕೃಷ್ಣ

Daaku Maharaaj Trailer: ಡಾಕು ಮಹಾರಾಜ್ ಟ್ರೇಲರ್‌ನಲ್ಲಿ ಸಾಹಸದ ವಿಶ್ವರೂಪ ತೋರಿಸಿದ ನಂದಮೂರಿ ಬಾಲಕೃಷ್ಣ

Daaku Maharaaj Trailer: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಇಡೀ ಟ್ರೇಲರ್‌ ಮಾಸ್‌ ಆಕ್ಷನ್‌ನಿಂದಲೇ ಕೂಡಿದ್ದು, 60 ಪ್ಲಸ್‌ ವಯಸ್ಸಿನಲ್ಲೂ ಅಷ್ಟೇ ಖಡಕ್ಕಾಗಿಯೇ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ ಬಾಲಯ್ಯ. ಇದೇ ಜನವರಿ 12ರಂದು ಈ ಸಿನಿಮಾ ತೆರೆಗೆ ಬರಲಿದೆ.

ಡಾಕು ಮಹಾರಾಜ್ ಟ್ರೇಲರ್‌ ಬಿಡುಗಡೆ
ಡಾಕು ಮಹಾರಾಜ್ ಟ್ರೇಲರ್‌ ಬಿಡುಗಡೆ

Daaku Maharaaj Trailer: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಸಿನಿಮಾ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ಬಾಲಯ್ಯ ಅವರ ಲುಕ್‌, ಟೀಸರ್‌ ಮತ್ತು ಹಾಡುಗಳಿಂದಲೇ ಈ ಸಿನಿಮಾ ಸದ್ದು ಮಾಡುತ್ತಿದೆ. ಇನ್ನೇನು ಸಂಕ್ರಾಂತಿ ಹಬ್ಬದ ನಿಮಿತ್ತ ಅಂದರೆ ಜನವರಿ 12ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು (ಜನವರಿ 5) ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಬಾಲಯ್ಯ ಅವರ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದಿದೆ. ಅಬ್ಬರದ ಟ್ರೇಲರ್‌ನಲ್ಲಿ ನಿರ್ದೇಶಕ ಬಾಬಿ ಅವರ ವಿಷನ್, ಬಾಲಯ್ಯ ಅವರ ಆಕ್ಷನ್, ತಮನ್ ಅವರ ಸಂಗೀತ ಡಾಕು ಮಹಾರಾಜ್‌ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಮೇಲಕ್ಕೆತ್ತಿದೆ. ಹಿಂದೆಂದೂ ತೋರಿಸದ ರೀತಿಯಲ್ಲಿ ಬಾಲಕೃಷ್ಣರನ್ನು ತೆರೆಮೇಲೆ ಕರೆತಂದಿದ್ದಾರೆ ನಿರ್ದೇಶಕ ಬಾಬಿ. ಟ್ರೇಲರ್‌ನಲ್ಲಿಯೂ ಅಂಥದ್ದೇ ಗೂಸ್ ಬಂಪ್ಸ್ ಕಂಟೆಂಟ್‌ಗಳನ್ನೇ ಬೆರೆಸಿ ಪ್ರೇಕ್ಷಕನ ಮುಂದಿರಿಸಿದ್ದಾರೆ. ಮೇಲ್ನೋಟಕ್ಕೆ ಇದು ಕಾಡಿನ ಹಿನ್ನೆಲೆಯ ಕಥೆಯಾಗಿದೆ. 

ಚಿತ್ರದಲ್ಲಿ ಮೂವರು ನಟಿಯರು

ಡಾಕು ಮಹಾರಾಜ್ ಚಿತ್ರದ ಟ್ರೇಲರ್ ಗಮನಿಸಿದರೆ, ನಟಿಯರಾದ ಪ್ರಜ್ಞಾ ಜೈಸ್ವಾಲ್ ರೆಗ್ಯುಲರ್ ಗ್ಲಾಮರ್ ಹೀರೋಯಿನ್ ಮಾತ್ರವಲ್ಲದೆ ವಿಶೇಷ ಆಕ್ಷನ್ ಸೀಕ್ವೆನ್ಸ್‌ನಿಂದಲೂ ಇಲ್ಲಿ ಕಂಡಿದ್ದಾರೆ. ಗ್ಲಾಮರ್‌ ಗೊಂಬೆಯಾಗಿ, ಊರ್ವಶಿ ರೌಟೇಲಾ ಇದ್ದರೆ, ಶ್ರದ್ಧಾ ಶ್ರೀನಾಥ್‌ಗೂ ವಿಶೇಷ ಪಾತ್ರವಿದೆ. ಬಾಲಿವುಡ್‌ ನಟ ಬಾಬಿ ಡಿಯೋಲ್ ಕ್ರೂರ ಖಳನಾಯಕನಂತೆ ಎದುರಾಗಿದ್ದಾರೆ. ಕಾಡಿನ ರಾಜ ಎಂಬ ಬಿರುದಾಂಕಿತ ಡಾಕು ಯಾರು, ಮಹಾರಾಜ್‌ ಯಾರು? ಈ ಕೌತುಕ ತಿಳಿಯಲು ಜ 12ರ ವರೆಗೆ ಕಾಯಲೇಬೇಕು.

ಸಾಹಸದ ವಿಶ್ವರೂಪ..

ಮೊದಲೇ ಹೇಳಿದಂತೆ ಡಾಕು ಮಹಾರಾಜ್‌ ಚಿತ್ರದಲ್ಲಿ ಬಾಲಯ್ಯ ಅವರನ್ನು ಹೊಸದಾಗಿ ತೋರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಬಾಬಿ. ಟ್ರೇಲರ್‌ನಲ್ಲಿಯೂ ಆಕ್ಷನ್ ವಿಶ್ವರೂಪ ತೋರಿಸಿದ್ದಾರೆ ಬಾಲಣ್ಣ. ಮೂರು ಗೆಟಪ್ ಗಳಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡುವ ಆಕ್ಷನ್ ದೃಶ್ಯಗಳಿವೆ. ನಿರ್ದೇಶಕರ ಟೇಕಿಂಗ್ ಸಹ ಅಷ್ಟೇ ಅದ್ಭುತವಾಗಿದೆ. ಆಕ್ಷನ್‌ ದೃಶ್ಯಗಳು ಶ್ರೀಮಂತವಾಗಿವೆ.

ವಿಜಯ್ ಕಾರ್ತಿಕ್ ಕಣ್ಣನ್ ಡಾಕು ಮಹಾರಾಜ್ ಚಿತ್ರದ ಛಾಯಾಗ್ರಹಣ ಮಾಡಿದರೆ, ಟ್ರೇಲರ್‌ನಲ್ಲಿ ಅವರ ಕ್ಯಾಮೆರಾ ಕೈ ಚಳಕವೇ ಹೈಲೈಟ್‌. ಟಾಲಿವುಡ್‌ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲಕೃಷ್ಣ ಎದುರು ಪ್ರಜಾ ಜೈಸ್ವಾಲ್ ನಾಯಕಿಯಾಗಿ ನಟಿಸಿದರೆ. ಶ್ರದ್ಧಾ ಶ್ರೀನಾಥ್, ಚಾಂದನಿ ಚೌಧರಿ ಮತ್ತು ಊರ್ವಶಿ ರೌಟೇಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ವಿಚಾರದಲ್ಲಿ ವಿಶೇಷ ದಾಖಲೆ

‘ಡಾಕು ಮಹಾರಾಜ್‍’ ಚಿತ್ರವು ಮೊದಲ ಬಾರಿಗೆ ಭಾನುವಾರ ಬಿಡುಗಡೆ ಆಗುತ್ತಿದೆ. ಅಂದರೆ, ಜನವರಿ 12ರಂದು ಈ ಚಿತ್ರವು ಸಂಕ್ರಾಂತಿ ಸ್ಪೆಷಲ್‍ ಆಗಿ ಭಾನುವಾರ ಬಿಡುಗಡೆಯಾಗುತ್ತಿದೆ. ಜನವರಿ 10ರಂದು ರಾಮ್‍ ಚರಣ್‍ ತೇಜ ಅಭಿನಯದ ‘ಗೇಮ್‍ ಚೇಂಜರ್’ ಚಿತ್ರವು ಬಿಡುಗಡೆಯಾಗುತ್ತಿದ್ದು, ಅದಾಗಿ ಎರಡು ದಿನಗಳಿಗೆ ‘ಡಾಕು ಮಹಾರಾಜ್’ ಚಿತ್ರವು ತೆರೆಗೆ ಬರಲಿದೆ. ಇನ್ನು, ವೆಂಕಟೇಶ್‍ ಅಭಿನಯದ ‘ಸಂಕ್ರಾಂತಿ ವಸ್ತುನ್ನಾಮ್‍’ ಚಿತ್ರವು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14ರಂದು ಮಂಗಳವಾರ ಬಿಡುಗಡೆಯಾಗಲಿದೆ. ಅಲ್ಲಿಗೆ ತೆಲುಗಿನ ಮೂರು ಚಿತ್ರಗಳು ಆರು ದಿನಗಳ ಅಂತರದಲ್ಲಿ ಸಂಕ್ರಾಂತಿ ಸ್ಪೆಷಲ್‍ ಆಗಿ ಬಿಡುಗಡೆಯಾಗುತ್ತಿವೆ.

Whats_app_banner