ಪವನ್ ಕಲ್ಯಾಣ್ 3ನೇ ಮದುವೆಯಾದ್ರೂ ತಾನು ಮರುಮದುವೆ ಬಗ್ಗೆ ಯೋಚಿಸದಿರಲು ಕಾರಣ ತಿಳಿಸಿದ ಮಾಜಿ ಪತ್ನಿ ರೇಣು ದೇಸಾಯಿ
Renu Desai About Second Marriage: ಟಾಲಿವುಡ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ತಾವು ಮರುಮದುವೆ ಬಗ್ಗೆ ಯಾವ ಕಾರಣಕ್ಕೆ ಯೋಚಿಸಿಲ್ಲ ಎಂಬ ವಿಚಾರವನ್ನು ಇತ್ತೀಚಿಗೆ ಬಹಿರಂಗ ಪಡಿಸಿದ್ದಾರೆ. ಜೊತೆಗೆ 2018ರಲ್ಲಿ ತಮ್ಮ ನಿಶ್ಚಿತಾರ್ಥ ರದ್ದುಗೊಳಿಸಲು ಕಾರಣವನ್ನೂ ತಿಳಿಸಿದ್ದಾರೆ.

ನಟ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಮದುವೆ ಮತ್ತು ವಿಚ್ಛೇದನದ ಸುದ್ದಿ ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ರೇಣು ದೇಸಾಯಿಯಿಂದ ದೂರವಾದ ಬಳಿಕ ಪವನ್ ವಿದೇಶಿ ಮೂಲದ ಮಹಿಳೆಯನ್ನು 3ನೇ ಮದುವೆ ಆಗುತ್ತಾರೆ. ಆದರೆ ರೇಣು ದೇಸಾಯಿ ಮಾತ್ರ ಒಂಟಿಯಾಗಿ ಉಳಿದು ಬಿಡುತ್ತಾರೆ. ಆದರೆ ಆಕೆ ಒಬ್ಬರೇ ಇರಲು ನಿರ್ಧಾರ ಮಾಡಿದ್ದು ಯಾಕೆ ಎಂಬುದು ಮಾತ್ರ ಇಲ್ಲಿವರೆಗೂ ಬಹಿರಂಗವಾಗಿರಲಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ ರೇಣು ತಾವು ಮರುಮದುವೆ ಬಗ್ಗೆ ಯೋಚನೆ ಮಾಡದೇ ಇರಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ತನ್ನ ಮಗಳ ಹಿತದೃಷ್ಟಿಯಿಂದ ತಾನು ಮರುಮದುವೆಯಾಗಿಲ್ಲ ಎಂದು ರೇಣು ಹೇಳಿಕೊಂಡಿದ್ದಾರೆ.
ಎರಡನೇ ಮದುವೆ ಬಗ್ಗೆ ರೇಣು ದೇಸಾಯಿ
ರೇಣು ದೇಸಾಯಿ ಇತ್ತೀಚೆಗೆ ನಿಖಿಲ್ ವಿಜಯೇಂದ್ರ ಸಿಂಹ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ, ತಾನು ಒಂಟಿಯಾಗಿ ಉಳಿಯಲು ನಿರ್ಧಾರ ಮಾಡಿರುವ ಹಿಂದಿನ ಕಾರಣ ಮತ್ತು 2018ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ. ಪವನ್ ಜೊತೆಗಿನ ಸಂಬಂಧ ಮುರಿದ ನಂತರ ಮತ್ತೆ ಸಂಗಾತಿ ಬೇಕು ಎಂದು ನಿಮಗೆ ಅನ್ನಿಸಿಲ್ಲವೇ ಎನ್ನುವ ಪ್ರಶ್ನೆಗೆ ರೇಣು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ನಿಜ, ಆಗ ನನಗೂ ಒಬ್ಬ ಸಂಗಾತಿ ಬೇಕು ಅಂತ ಅನ್ನಿಸಿತ್ತು. ಆದರೆ ನನ್ನ ಮಗಳ ಮೇಲಿನ ನನ್ನ ಜವಾಬ್ದಾರಿ ಆ ದಿಕ್ಕಿನಲ್ಲಿ ಯೋಚಿಸದಂತೆ ತಡೆಯಿತು. ವೈಯಕ್ತಿಕವಾಗಿ, ನನಗೂ ಒಬ್ಬ ಗೆಳೆಯ ಇರಬೇಕಿತ್ತು. ನಾನು ಮದುವೆಯಾಗಬೇಕಿತ್ತು. ನನಗೂ ಒಂದು ಜೀವನ ಇರಬೇಕು. ಆದರೆ ಮಕ್ಕಳ ದೃಷ್ಟಿಕೋನದಿಂದ ಯೋಚಿಸಿದರೆ, ಅದು ಸರಿಯಲ್ಲ‘ ಎಂದು ರೇಣು ಹೇಳಿದ್ದಾರೆ.
ನಿಶ್ಚಿತಾರ್ಥ ರದ್ದಾಗಿದ್ದು ಈ ಕಾರಣಕ್ಕೆ
ಪವನ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ರೇಣು ದೇಸಾಯಿ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಂತರ ಆ ನಿಶ್ಚಿತಾರ್ಥವು ರದ್ದುಗೊಳ್ಳುತ್ತದೆ. ಇದಕ್ಕೆ ಕಾರಣವನ್ನೂ ಆಕೆ ಬಹಿರಂಗಪಡಿಸಿದ್ದಾರೆ. ‘ನಾನು ಮತ್ತೆ ಪ್ರಯತ್ನಿಸಿದೆ. ನನಗೆ ನಿಶ್ಚಿತಾರ್ಥವಾಯಿತು. ಅದು ಮನೆಯವರು ನಿಶ್ಚಯ ಮಾಡಿದ ಸಂಬಂಧವಾಗಿತ್ತು. ಆದರೆ ನನಗೆ ಆಗ ಅನ್ನಿಸಿತ್ತು ನಾನು ನನ್ನ ಜೀವನದಲ್ಲಿ ಬರುವ ವ್ಯಕ್ತಿ ಅಥವಾ ನನ್ನ ಮಗು ಈ ಇಬ್ಬರಿಗೂ ನ್ಯಾಯ ಕೊಡಲು ನನ್ನಿಂದ ಸಾಧ್ಯವಿಲ್ಲ. ನಾನು ಸಿಂಗಲ್ ಪೇರೆಂಟ್. ಒಬ್ಬರನ್ನು ಮದುವೆಯಾಗಿ, ಅವರಿಂದ ಮಕ್ಕಳು ಪಡೆದು ಅವರ ಜೊತೆ ಬದುಕುವುದು ಬೇರೆ. ಅದೇ ಬೇರೆಯವರ ಮಗುವಿಗೆ ತಾಯಿಯಾಗಿ ಇರುವಾಗ ಬೇರೆಯವರು ನಮ್ಮ ಜೀವನಕ್ಕೆ ಪ್ರವೇಶಿವುದು ಬೇರೆಯದೇ ವಿಚಾರ. ನನ್ನ ಮಗಳು ಆಧ್ಯಾ ದೊಡ್ಡವಳಾಗುವುದನ್ನೇ ನಾನು ಕಾಯುತ್ತಿದ್ದೇನೆ. ಅವಳಿಗೆ ಈಗ 15 ವರ್ಷ‘ ಎಂದು ಹೇಳಿಕೊಂಡಿದ್ದಾರೆ.
ರೇಣು ಮತ್ತು ಪವನ್ ಪ್ರೀತಿ, ಮದುವೆ ಇತ್ಯಾದಿ...
ಬದ್ರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಪವನ್–ರೇಣು ಪ್ರೀತಿಯಲ್ಲಿ ಬೀಳುತ್ತಾರೆ. ನಂತರ ಅವರು ಜೊತೆಯಾಗಿ ವಾಸಿಸಲು ಶುರು ಮಾಡುತ್ತಾರೆ. 2004ರಲ್ಲಿ ಅವರಿಗೆ ಅಕಿರಾ ನಂದನ್ ಎಂಬ ಮಗ ಜನಿಸುತ್ತಾನೆ. ನಂತರ 2009ರಲ್ಲಿ ಇವರು ಮದುವೆಯಾಗುತ್ತದೆ. 2010ರಲ್ಲಿಆಧ್ಯಾ ಜನಿಸುತ್ತಾಳೆ.
ಅವರು 2011ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು 2012ರಲ್ಲಿ ದೂರಾಗುತ್ತಾರೆ. ನಂತರ, 2013ರಲ್ಲಿ, ಪವನ್ ಮೂರನೇ ಮದುವೆಯಾಗುತ್ತದೆ. ಪವನ್ ಕಲ್ಯಾಣ್‌ಗೆ 1997ರಲ್ಲಿ ಮೊದಲ ಮದುವೆಯಾಗಿತ್ತು. ಆದರೆ ಅವರು 1999ರಲ್ಲಿ ವಿಚ್ಛೇದನ ಪಡೆದು ಮೊದಲ ಹೆಂಡತಿಯಿಂದ ದೂರಾಗಿರುತ್ತಾರೆ.
