ಮಾರ್ಕ್ ಶಂಕರ್ ಈಗ ಹೇಗಿದ್ದಾರೆ; ತಮ್ಮನ ಮಗನ ಆರೋಗ್ಯ ಸ್ಥಿತಿ ಬಗ್ಗೆ ಅಪ್‌ಡೇಟ್ ನೀಡಿದ್ರು ನಟ ಚಿರಂಜೀವಿ
Mark Shankar Health Update: ಟಾಲಿವುಡ್ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಗ ಮಾರ್ಕ್ ಶಂಕರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಸಹೋದರ ಚಿರಂಜೀವಿ. ಮಾರ್ಕ್ ಬೇಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.

Mark Shankar Health Update: ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಗಾಯಗೊಂಡಿದ್ದರು. ಪವನ್ ಕಲ್ಯಾಣ ಪುತ್ರ ಬೇಗ ಚೇತರಿಸಿಕೊಳ್ಳಲಿ ಎಂದು ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವರು ಪ್ರಾರ್ಥಿಸಿದ್ದರು, ಅಲ್ಲದೇ ಈ ಸಂಬಂಧ ಟ್ವೀಟ್ ಮಾಡಿದ್ದರು. ಪವನ್ ಕಲ್ಯಾಣ್ ಕೂಡ ತಮ್ಮ ಮಗನ ಆರೋಗ್ಯದ ಬಗ್ಗೆ ಎರಡು ದಿನದ ಹಿಂದೆ ಅಪ್‌ಡೇಟ್ ಹಂಚಿಕೊಂಡಿದ್ದರು.
ಇದೀಗ ನಟ ಹಾಗೂ ಪವನ್ ಕಲ್ಯಾಣ್ ಸಹೋದರ್ ಚಿರಂಜೀವಿ ಎಕ್ಸ್‌ನಲ್ಲಿ ಮಾರ್ಕ್ ಶಂಕರ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ, ಅಲ್ಲದೇ ಅವನು ಬೇಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಮಾರ್ಕ್ ಶಂಕರ್ ಹೆಲ್ತ್ ಅಪ್‌ಡೇಟ್
ತೆಲುಗಿನಲ್ಲಿ ಟ್ವೀಟ್ ಮಾಡಿರುವ ಚಿರಂಜೀವಿ ‘ನಮ್ಮ ಮಗು ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದರೆ ಅವನು ಇನ್ನಷ್ಟು ಚೇತರಿಸಿಕೊಳ್ಳಬೇಕಾಗಿದೆ. ನಮ್ಮ ಕುಲದೇವತೆ ಆಂಜನೇಯ ಸ್ವಾಮಿಯ ಕೃಪೆ ಮತ್ತು ಕರುಣೆಯಿಂದ, ಅವನು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ ಮತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಾನೆ. ಭಗವಂತ ನಮ್ಮ ಜೊತೆ ನಿಂತು ಆ ಪುಟ್ಟ ಮಗುವನ್ನು ದೊಡ್ಡ ದುರಂತದಿಂದ ಪಾರು ಮಾಡಿದ್ದಾನೆ‘ ಎಂದು ಬರೆದುಕೊಂಡಿದ್ದಾರೆ.
ಈ ಘಟನೆಯ ನಂತರ, ವಿವಿಧ ಪ್ರದೇಶಗಳು ಮತ್ತು ಹಳ್ಳಿಗಳ ಜನರು ಮಾರ್ಕ್ ಶಂಕರ್ ಚೇತರಿಕೆಗಾಗಿ ಪ್ರಾರ್ಥನೆ ಮತ್ತು ಆಶೀರ್ವಾದಗಳನ್ನು ನೀಡುವ ಮೂಲಕ ನಮ್ಮ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಂತರು. ನನ್ನ ಸಹೋದರ ಪವನ್ ಕಲ್ಯಾಣ್ ಮತ್ತು ನಮ್ಮ ಇಡೀ ಕುಟುಂಬದ ಪರವಾಗಿ, ಅವರ ಬೆಂಬಲಕ್ಕಾಗಿ ಪ್ರತಿಯೊಬ್ಬರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ‘ ಎಂದು ಅವರು ಬರೆದುಕೊಂಡಿದ್ದಾರೆ.
ಮಾರ್ಕ್ ಶಂಕರ್‌ಗೆ ಏನಾಗಿತ್ತು?
ಏಪ್ರಿಲ್ 8 ರಂದು ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಓದುತ್ತಿದ್ದ ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸುತ್ತದೆ. ಈ ದುರಂತದಲ್ಲಿ ಮಾರ್ಕ್ ಶಂಕರ್ ಕೈ, ಕಾಲುಗಳಿಗೆ ಗಾಯವಾಗುವುದು ಮಾತ್ರವಲ್ಲ ಶ್ವಾಸಕೋಶಕ್ಕೂ ಹೊಗೆ ಪ್ರವೇಶಿಸಿದ್ದರಿಂದ ಉಸಿರಾಟದ ತೊಂದರೆ ಅನುಭವಿಸಿದ್ದರು. ಈ ಘಟನೆಯಲ್ಲಿ ಒಟ್ಟು 14 ಮಕ್ಕಳು ಹಾಗೂ ನಾಲ್ವರು ಶಿಕ್ಷಕರು ಗಾಯಗೊಂಡಿದ್ದರು.
ಮಕ್ಕಳಿಗೆ ಅಡುಗೆ ಪಾಠಗಳನ್ನು ಕಲಿಸುವ ಕೊಠಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಪವನ್ ಕಲ್ಯಾಣ್ ಅವರ ಮಗ ರಿವರ್ ವ್ಯಾಲಿ ಪ್ರದೇಶದ ಟೊಮೆಟೊ ಕಿಚನ್ ಶಾಲೆಯಲ್ಲಿ ನಡೆಯುತ್ತಿರುವ ಈಸ್ಟರ್ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಈ ಶಾಲೆ ಪೂರ್ವ ಸಿಂಗಾಪುರದ ಝೂ ಚಾಟ್ ರಸ್ತೆಯಲ್ಲಿದೆ. ಮಾರ್ಚ್ 3 ರಿಂದ ಮೇ15 ರವರೆಗೆ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಈಸ್ಟರ್ ಅಡುಗೆ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಮಾರ್ಕೊ ಶಂಕರ್ ಸಹ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ.
