ತಾರಕಕ್ಕೇರಿದ ಟಾಲಿವುಡ್ ಮಂಚು ಕುಟುಂಬ ವಿವಾದ; ಮೋಹನ್ ಬಾಬು ಮನೆ ಮುಂದೆ ಮನೋಜ್ ಪ್ರತಿಭಟನೆ, ವಿಷ್ಣು ಮೇಲೆ ಕಾರ್ ಕದ್ದ ಆರೋಪ
Manchu Family controversy: ಟಾಲಿವುಡ್‌ನ ಮಂಚು ಕುಟುಂಬದ ವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ. ಮಂಚು ಮನೋಜ್ ತನ್ನ ಸಹೋದರ ವಿಷ್ಣು ವಿರುದ್ಧ ಕಾರ್ ಕಳ್ಳತನದ ಆರೋಪಿ ಹೊರಿಸಿದ್ದಾರೆ. ಮಂಚು ಮನೋಜ್ ಮೋಹನ್ ಬಾಬು ಮನೆಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

Manchu Family Controversy: ಟಾಲಿವುಡ್‌ನ ಹಿರಿಯ ನಟ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಮಂಚು ಮೋಹನ್ ಬಾಬು ಅವರ ಕುಟುಂಬದಲ್ಲಿ ನಡೆಯುತ್ತಿರುವ ಆಸ್ತಿ ವಿವಾದವು ಬುಧವಾರ (ಏಪ್ರಿಲ್ 9) ಹೊಸ ತಿರುವು ಪಡೆದುಕೊಂಡಿದೆ. ಮಂಚು ಮನೋಜ್ ತಮ್ಮ ಸಹೋದರ ಮಂಚು ವಿಷ್ಣು ಮನೆಗೆ ನುಗ್ಗಿ ಕಾರ್ ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನರಸಿಂಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಂಚು ಮನೋಜ್ ತಮ್ಮ ಕಾರು ಕಾಣೆಯಾಗಿದ್ದು, ಮಂಚು ವಿಷ್ಣು ಮೇಲೆ ಅನುಮಾನವಿದೆ ಎಂದು ಹೇಳಿದ್ದಾರೆ. ‘ನನ್ನ ಮಗಳ ಹುಟ್ಟುಹಬ್ಬವಿದ್ದ ಕಾರಣ ಏಪ್ರಿಲ್ 1ರಂದು ನಾನು ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದೆ. ನಮ್ಮ ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ವಿಷ್ಣು ಮತ್ತು ಅವನ ಸುಮಾರು 150 ಅನುಯಾಯಿಗಳು ನಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಅವರು ನನ್ನ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದಲ್ಲದೆ, ನನ್ನ ಕಾರನ್ನು ಸಹ ಕದ್ದಿದ್ದಾರೆ‘ ಎಂದು ಮಂಚು ಮನೋಜ್ ದೂರಿನಲ್ಲಿ ತಿಳಿಸಿದ್ದಾರೆ.
ದೂರ ದಾಖಲಿಸಿದ ಬಳಿಕ ಮನೋಜ್ ಹೈದರಾಬಾದ್‌ನ ಉಪನಗರ ಪಹಡಿಶಾರಿಯಲ್ಲಿರುವ ಮೋಹನ್ ಬಾಬು ಅವರ ಮನೆಗೆ ನುಗ್ಗಲು ಯತ್ನಿಸಿದರು. ತನ್ನ ಕುಟುಂಬದವರ ಜೊತೆ ಸೇರಿ ತಂದೆ ಮೋಹನ್ ಬಾಬು ಅವರ ಮನೆಗೆಯೊಳಗೆ ಹೋಗಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ತಡೆದು, ಕೇವಲ ಮನೋಜ್ ಅವರನ್ನು ಮಾತ್ರ ಮನೆ ಹತ್ತಿರ ಹೋಗಲು ಅವಕಾಶ ನೀಡಿದ್ದರು.
ಮೋಹನ್ ಬಾಬು ಮನೆ ಮುಂದೆ ಮನೋಜ್ ಪ್ರತಿಭಟನೆ
ಮನೆಯ ಬಳಿಗೆ ಹೋದ ಮಂಚು ಮನೋಜ್ ಅವರನ್ನು ಅಲ್ಲಿದ್ದ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಿರಲಿಲ್ಲ. ಗೇಟ್ ತೆರೆಯಲು ಅವರು ನಿರಾಕರಿಸಿದಾಗ ಗೇಟ್ ಮುಂದೆ ಕುಳಿತ ಮನೋಜ್ ಪ್ರತಿಭಟನೆ ಆರಂಭಿಸಿದರು.
ಈ ಮಾಹಿತಿ ತಿಳಿದ ಸ್ಥಳೀಯ ಪೊಲೀಸರು ಮೋಹನ್ ಬಾಬು ಅವರ ಮನೆಗೆ ತಲುಪಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆದರು. ಮೋಹನ್ ಬಾಬು ಅವರ ಕೋರಿಕೆಯ ಮೇರೆಗೆ ಮನೆಗೆ ಭದ್ರತೆ ಏರ್ಪಡಿಸಲಾಗಿತ್ತು ಮತ್ತು ಮನೋಜ್ ಅಲ್ಲಿಗೆ ಬಂದಾಗ, ಮೋಹನ್ ಬಾಬು ಮತ್ತು ವಿಷ್ಣು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈಕೋರ್ಟ್ ಅನುಮತಿ ನೀಡಿದೆ; ಮನೋಜ್
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮನೋಜ್ ‘ನನ್ನ ತಂದೆ ಮತ್ತು ಸಹೋದರನೊಂದಿಗೆ ನನಗೆ ಯಾವುದೇ ಆಸ್ತಿ ವಿವಾದಗಳಿಲ್ಲ. ಆದರೆ ಜಲ್‌ಪಲ್ಲಿ ಬಂಗಲೆಯಲ್ಲಿ ವಾಸಿಸುವ ಹಕ್ಕು ನನಗೂ ಇದೆ ಎಂದು ಅವರ ಹೇಳಿದರು. ‘ಡಿಸೆಂಬರ್‌ನಲ್ಲಿ ಹೈಕೋರ್ಟ್ ನನಗೆ ಈ ಮನೆಯಲ್ಲಿ ಉಳಿಯಲು ಅವಕಾಶ ನೀಡಿತು. ಆದರೆ, ತಂದೆ ಹಾಗೂ ಸಹೋದರ ನ್ಯಾಯಾಲಯದ ದಾರಿ ತಪ್ಪಿಸಿ ತಡೆಯಾಜ್ಞೆ ಪಡೆದಿದ್ದಾರೆ‘ ಎಂದು ಮಂಚು ಮನೋಜ್ ದೂರಿದ್ದಾರೆ.
ತಿರುಪತಿಯಲ್ಲಿರುವ ಮೋಹನ್ ಬಾಬು ವಿಶ್ವವಿದ್ಯಾಲಯದಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾತ್ರ ಕುಟುಂಬದೊಂದಿಗೆ ವಿವಾದವಿದೆ ಎಂದು ಮಂಚು ಮನೋಜ್ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ. ‘ನಾನು ಹೋರಾಟ ಮಾಡುತ್ತಿರುವುದು ಕೇವಲ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮಾತ್ರ, ಆಸ್ತಿಗಾಗಿ ಅಲ್ಲ‘ ಎಂದು ಈ ವೇಳೆ ಹೇಳಿದ್ದಾರೆ. ಮೋಹನ್ ಬಾಬು ಕಳೆದ ಡಿಸೆಂಬರ್‌ನಿಂದ ಮನೋಜ್ ಅವರನ್ನು ಜಲ್‌ಪಲ್ಲಿ ಮನೆಗೆ ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ.
ಮನೋಜ್‌ಗೆ ತಾನು ಸಂಪಾದಿಸಿದ ಹಣದಿಂದ ಖರೀದಿಸಿದ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದು ಮೋಹನ್ ಬಾಬು ವಾದಿಸಿದರು. ಅದಾದ ಬಳಿಕ ಮೋಹನ್ ಬಾಬು ಟಿವಿ ವರದಿಗಾರನನ್ನು ಥಳಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಫೆಬ್ರವರಿ 3 ರಂದು, ಮಂಚು ಮೋಹನ್ ಬಾಬು ಮತ್ತು ಮಂಚು ಮನೋಜ್ ಆಸ್ತಿ ವಿವಾದದ ಕುರಿತು ರಂಗಾರೆಡ್ಡಿ ಜಿಲ್ಲಾಧಿಕಾರಿಯವರ ಮುಂದೆ ಹಾಜರಾಗಿದ್ದರು. ಈ ಸಹೋದದರು ಜಿಲ್ಲಾಧಿಕಾರಿ ಮುಂದೆಯೇ ವಾಗ್ವಾದಕ್ಕೆ ಇಳಿದಿದ್ದರು. ಮನೋಜ್ ತಮ್ಮ ಆಸ್ತಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಮೋಹನ್ ಬಾಬು ದೂರು ನೀಡಿದ್ದರು. ಇತ್ತೀಚೆಗೆ, ಮಂಚು ಮನೋಜ್ ಮೋಹನ್ ಬಾಬು ಅವರ ಮನೆ ದ್ವಾರದ ಮುಂದೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೀಗೆ ಒಬ್ಬರ ಮೇಲೆ ಒಬ್ಬರು ದೂರು, ಪ್ರತಿದೂರು ಹೇಳಿಕೊಳ್ಳುತ್ತಾ ಕೌಟುಂಬಿಕ ಕಲಹ ತಾರರಕ್ಕೇರುವಂತೆ ಮಾಡುತ್ತಿದ್ದಾರೆ. ಅವರ ಕುಟುಂಬದ ಜಗಳ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮಾತ್ರವಲ್ಲ ಈ ವಿವಾದ ದಿನೇ ದಿನೇ ಉಲ್ಬಣಗೊಳುತ್ತಿದೆ.
