ವಿಕ್ಟರಿ ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಒಟಿಟಿ ಬಿಡುಗಡೆ ಇನ್ನಷ್ಟು ತಡ
ಕನ್ನಡ ಸುದ್ದಿ  /  ಮನರಂಜನೆ  /  ವಿಕ್ಟರಿ ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಒಟಿಟಿ ಬಿಡುಗಡೆ ಇನ್ನಷ್ಟು ತಡ

ವಿಕ್ಟರಿ ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಒಟಿಟಿ ಬಿಡುಗಡೆ ಇನ್ನಷ್ಟು ತಡ

ವಿಕ್ಟರಿ ವೆಂಕಟೇಶ್ ಅಭಿನಯದ 'ಸಂಕ್ರಾತಿಕಿ ವಸ್ತುನ್ನಾಂ' ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಿದೆ. ಥಿಯೇಟರ್‍‌ಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾದ ಒಟಿಟಿ ಬಿಡುಗಡೆ ತಡವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ಮತ್ತು ವಿಕ್ಟರಿ ವೆಂಕಟೇಶ್.
'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ಮತ್ತು ವಿಕ್ಟರಿ ವೆಂಕಟೇಶ್.

ತೆಲುಗು ಭಾಷೆಯ ಜನಪ್ರಿಯ ನಟ, ಕುಟುಂಬ ಸಮೇತ ನೋಡಬಹುದಾದ ಹಲವು ಚಿತ್ರಗಳನ್ನು ಕೊಟ್ಟಿರುವ ‘ವಿಕ್ಟರಿ’ ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ತೆಲುಗು ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಶೀಘ್ರದಲ್ಲಿಯೇ ಒಟಿಟಿಗೆ ಬರಲಿದೆ. 2025ರ ಜನವರಿಯಲ್ಲಿ ಸಂಕ್ರಾಂತಿಯ ಸಂದರ್ಭದಲ್ಲೇ ಸಿನಿಮಾ ಬಿಡುಗಡೆಯಾಗಿದೆ. ಜನವರಿ 14, 2025 ರಂದು ಬಿಡುಗಡೆಯಾದಾಗಿನಿಂದ ಸಾಕಷ್ಟು ಜನ ಈ ಸಿನಿಮಾ ವೀಕ್ಷಿಸಿದ್ದಾರೆ. ಈಗ, ಚಿತ್ರವು OTTಯಲ್ಲಿ ಪ್ರಸಾರವಾಗಲು ತಯಾರಾಗಿದೆ. ನೀವು ಈ ಸಿನಿಮಾವನ್ನು ಥಿಯೇಟರ್‍‌ಗಳಲ್ಲಿ ನೋಡಿಲ್ಲ ಎಂದಾದರೆ ಒಟಿಟಿಯಲ್ಲಿ ವೀಕ್ಷಿಸಬಹುದು. ಹಾಸ್ಯದೊಂದಿಗೆ ರೋಮಾಂಚಕಾರಿ ಸಾಹಸ ಸನ್ನಿವೇಶಗಳನ್ನು ಹೊಂದಿರುವ ಚಿತ್ರ ಎಲ್ಲರಿಗೂ ಇಷ್ಟವಾಗುವಂತಿದೆ. ಭಾರತ ಮತ್ತು ಅದರಾಚೆಗಿನ ವೀಕ್ಷಕರನ್ನೂ ಈ ಸಿನಿಮಾ ಆಕರ್ಷಿಸಿದೆ.

ಜನರಿಂದ ಮೆಚ್ಚುಗೆ ಪಡೆದ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ'

ಬಾಕ್ಸ್ ಆಫೀಸ್‌ನಲ್ಲಿಯೂ ಈ ಸಿನಿಮಾ ಸದ್ದು ಮಾಡಿದೆ. ಭಾರತದಲ್ಲಿ 176.35 ಕೋಟಿಗೂ ಹೆಚ್ಚು ಗಳಿಸಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 220 ಕೋಟಿಗೂ ಹೆಚ್ಚು ಆದಾಯ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾದ ಒಟಿಟಿ ಹಕ್ಕು ‘Zee5’ ಪಾಲಾಗಿದೆ ಎನ್ನುವ ಮಾತು ಈ ಹಿಂದೆಯೇ ಇತ್ತು, ಆದರೆ ಈಗ ಸ್ಟ್ರೀಮಿಂಗ್ ತಡವಾಗುವ ಸೂಚನೆ ಇದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಮಾಡಿದ ಗಳಿಕೆಯೇ ಒಟಿಟಿ ವಿಳಂಬಕ್ಕೆ ಕಾರಣ ಆಗಿರಬಹುದು ಎನ್ನಲಾಗುತ್ತಿದೆ. ಚಿತ್ರದ ಅಗಾಧ ಯಶಸ್ಸು ಆಧರಿಸಿ ನಂತರ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಚಿತ್ರತಂಡವಾಗಲಿ, ‘Zee5’ ಆಗಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಒಟಿಟಿ ಬಿಡುಗಡೆ ವಿಳಂಬ

‘Zee5’ ಚಿತ್ರದ ಡಿಜಿಟಲ್ ಹಕ್ಕುಗಳನ್ನು 30 ಕೋಟಿಗೆ ಪಡೆದುಕೊಂಡಿತ್ತು, ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಈ ಸಿನಿಮಾ ಥಿಯೇಟರ್‍‌ನಲ್ಲಿ ತುಂಬಾ ಉತ್ತಮ ಪ್ರದರ್ಶನ ನೀಡಿತು. ಈ ಕಾರಣದಿಂದ ಬಾಕ್ಸ್‌ ಆಫೀಸ್‌ನಲ್ಲಿ ಇನ್ನಷ್ಟು ಕಲೆಕ್ಷನ್ ಆಗಬಹುದು ಎಂಬ ಲೆಕ್ಕಾಚಾರದಿಂದ, ಸಿನಿಮಾವನ್ನು ಒಟಿಟಿಯಲ್ಲಿ ಕೊಂಚ ತಡಮಾಡಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಬಿಡುಗಡೆಯನ್ನು ಮುಂದೂಡಲು ನಿರ್ಮಾಪಕ ದಿಲ್ ರಾಜು ಪ್ರಸ್ತುತ Zee5 ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ‘ಮನಿ ಕಂಟ್ರೋಲ್’ ಜಾಲತಾಣವು ವರದಿ ಮಾಡಿದೆ.

‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾದ ಕಥೆ

ಈ ಸಿನಿಮಾದ ನಾಯಕನಾಗಿ ಅಭಿನಯಿಸಿರುವ ವೆಂಕಟೇಶ್ ಅಪಹರಣ ತನಿಖೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿ. ಆದರೆ, ಕೆಲ ಕಾರಣಗಳಿಂದಾಗಿ ಅವರನ್ನು ಅಮಾನತು ಮಾಡಲಾಗುತ್ತದೆ. ಅಮಾನತುಗೊಂಡ ಪೊಲೀಸ್ ಅಧಿಕಾರಿಯ ಮನಮುಟ್ಟುವ ಚಿತ್ರಣವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ಧಾರೆ. ವೆಂಕಟೇಶ್ ಅವರ ಮಾಜಿ ಪ್ರೇಯಸಿಯಾಗಿ ಮೀನಾಕ್ಷಿ ಚೌಧರಿ ಹಾಗೂ ವೆಂಕಟೇಶ್ ಅವರ ಪತ್ನಿಯಾಗಿ ಐಶ್ವರ್ಯಾ ರಾಜೇಶ್ ನಟಿಸಿದ್ದಾರೆ. ಈ ಮೂವರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕೇಂದ್ರ ಬಿಂದುಗಳಾಗಿ ಸಿನಿಮಾದಲ್ಲಿ ಕೆಲಸ ಅಭಿನಯಿಸಿದ್ದಾರೆ.

ಕಡಿಮೆ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಇತ್ತೀಚೆಗೆ ಚಿತ್ರತಂಡವು ಆಯೋಜಿಸಿದ್ದ ಸಕ್ಸಸ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ಮುಂಚೂಣಿ ನಾಯಕನಟ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಸದ್ಯಕ್ಕೆ, ಈ ಚಿತ್ರದ ಡಿಜಿಟಲ್ ಬಿಡುಗಡೆಯ ಕುರಿತು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Whats_app_banner