ತಂದೆ ಮಗನ ನಡುವೆ ಅಂಥದ್ದೇನಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ; ಪೊಲೀಸ್ ದೂರಿನ ಬಗ್ಗೆ ಸ್ಪಷ್ಟನೆ ಕೊಟ್ಟ ಮಂಚು ಕುಟುಂಬ
Manchu Family: ಮಂಚು ಕುಟುಂಬದ ಒಳಜಗಳವೀಗ ಮುನ್ನೆಲೆಗೆ ಬಂದಿದಂತಿದೆ. ಅಪ್ಪ ಮೋಹನ್ ಬಾಬು ಮತ್ತು ಮಗ ಮಂಚು ಮನೋಜ್ ಪರಸ್ಪರರು ಹಲ್ಲೆ ಮಾಡಿಕೊಂಡು, ದೂರು, ಪ್ರತಿ ದೂರು ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈಗ ಈ ಸುದ್ದಿಯ ಬಗ್ಗೆ ಸ್ವತಃ ಮಂಚು ಫ್ಯಾಮಿಲಿ ಸ್ಪಷ್ಟನೆ ನೀಡಿದೆ.
Manchu Manoj Family: ಟಾಲಿವುಡ್‌ನ ಖ್ಯಾತ ನಟ ಮಂಚು ಮೋಹನ್ ಬಾಬು ಅವರ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಟಾಲಿವುಡ್ ವಲಯಗಳಲ್ಲಿ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿವೆ. ಮೋಹನ್ ಬಾಬು ಮತ್ತು ಮಂಚು ಮನೋಜ್ ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ವಿವಾದವಿದೆ ಎಂಬ ವದಂತಿಗಳವು ಹರಿದಾಡುತ್ತಿವೆ. ಈ ಸುದ್ದಿಯ ಬಗ್ಗೆ ಸ್ವತಃ ಮಂಚು ಕುಟುಂಬವೇ ಸ್ಪಷ್ಟನೆ ನೀಡಿದೆ.
ತಂದೆ ಮೋಹನ್ ಬಾಬು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಮಂಚು ಮನೋಜ್ ದೂರು ದಾಖಲಿಸಿದ್ದಾರೆ. ನನ್ನ ಪತ್ನಿ ಮೌನಿಕಾ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಮಂಚು ಮನೋಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿತ್ತು. ಇತ್ತ ಮನೋಜ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮೋಹನ್ ಬಾಬು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ. ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.
ಅಷ್ಟಕ್ಕೂ ಆಗಿದ್ದೇನು?
ಮೋಹನ್ ಬಾಬು ಅವರ ಮಕ್ಕಳಾದ ಮನೋಜ್ ಮತ್ತು ವಿಷ್ಣು ನಡುವೆ ಈ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿವೆ. ಮಂಚು ಮನೋಜ್ ಮದುವೆಯ ಬಳಿಕ ಆ ಭಿನ್ನಾಭಿಪ್ರಾಯಗಳು ಇನ್ನಷ್ಟು ಉತ್ತುಂಗಕ್ಕೇರಿದ್ದವು. ಮನೋಜ್ ಮದುವೆಯಲ್ಲಿ ಸಹೋದರ ವಿಷ್ಣು ಸಹ ಹೆಚ್ಚು ಕಾಣಿಸಿಕೊಂಡಿರಲಿಲ್ಲ.
ವಿಷ್ಣು ಮೇಲೆ ದಾಳಿ...
ಸಂಬಂಧಿಕರ ಮೇಲೆ ವಿಷ್ಣು ಮಂಚು ಹಲ್ಲೆ ನಡೆಸಿದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಸ್ವತಃ ಮನೋಜ್ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ನಂತರ ಡಿಲಿಟ್ ಮಾಡಿದ್ದರು. ಈ ಪಿತೂರಿಯಿಂದಾಗಿ ಮಂಚು ಅವರ ಕುಟುಂಬವು ಎರಡು ಹೋಳಾಗಿತ್ತು. ಇತ್ತ ಅಪ್ಪ ಮೋಹನ್ ಬಾಬು ಮತ್ತು ವಿಷ್ಣು ಒಂದು ಬಣದಂತಿದ್ದರೆ, ಮತ್ತೊಂದೆಡೆ ಮನೋಜ್ ಮತ್ತು ಮಂಚು ಲಕ್ಷ್ಮಿಯದ್ದು ಮತ್ತೊಂದು ಬಣ ಎಂದೇ ಹೇಳಲಾಗುತ್ತದೆ.
ಇದು ಬರೀ ಸುಳ್ಳು
ಮೋಹನ್ ಬಾಬು ಮತ್ತು ಮಂಚು ಮನೋಜ್ ಪರಸ್ಪರ ದೂರು ನೀಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಂಚು ಕುಟುಂಬ ಹೇಳಿಕೊಂಡಿದೆ. ಮಂಚು ಮನೋಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬ ಊಹಾಪೋಹದ ವದಂತಿಗಳು ಹರಿದಾಡುತ್ತಿವೆ ಮತ್ತು ಅವೆಲ್ಲವೂ ಸುಳ್ಳು ಎಂದು ಮಂಚು ಕುಟುಂಬ ಹೇಳಿದೆ. ಪುರಾವೆಗಳಿಲ್ಲದೆ ಸುಳ್ಳು ಪ್ರಚಾರವನ್ನು ಹರಡಬಾರದು ಎಂದಿದೆ.
ಕಣ್ಣಪ್ಪ ಬಿಡುಗಡೆಗೆ ರೆಡಿ
ಮೋಹನ್ ಬಾಬು ಪ್ರಸ್ತುತ 'ಕಣ್ಣಪ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರ ಮಗ ವಿಷ್ಣು ಅವರೇ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಪ್ರಭಾಸ್, ಅಕ್ಷಯ್ ಕುಮಾರ್ ಮತ್ತು ಮೋಹನ್ ಲಾಲ್ 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.