ಸಂಕಷ್ಟದಲ್ಲಿರುವ ಪ್ರಸಾರೋದ್ಯಮಕ್ಕೆ ಮತ್ತೊಂದು ಬರೆ; IN-SPACE ಅನುಮೋದನೆ ಪಡೆಯದ ವಾಹಿನಿಗಳ ಪ್ರಸಾರ ನಿರ್ಬಂಧ
ಏಪ್ರಿಲ್ 1, 2025ರ ನಂತರ IN-SPACEನಿಂದ ಅನುಮತಿ ಪಡೆಯಲು ವಿಫಲವಾದ ಕಂಪನಿಯ ವಾಹಿನಿಗಳು ಪ್ರಸಾರ ನಿಲ್ಲಿಸಬೇಕಾಗುತ್ತದೆ. ಅನುಮತಿ ಪಡೆಯಲು ವಿಫಲವಾದರೆ ವೀಕ್ಷಕರು ಸಾಕಷ್ಟು ಟಿವಿ ಶೋಗಳನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ.

ಒಟಿಟಿ ಆಗಮನದ ನಂತರದಲ್ಲಿ ದೂರದರ್ಶನ ನೋಡುಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮಾರುಕಟ್ಟೆಗೆ ಬಂದ ನಂತರ ಟಿವಿ ಪ್ರಸಾರ ಉದ್ಯಮವು ಸಂಕಷ್ಟದಲ್ಲಿದೆ. ಅದರ ಮೇಲಿನಿಂದ ಇನ್ನೊಂದು ಸಮಸ್ಯೆ ಈಗ ಟಿವಿ ವಾಹಿನಿಗಳಿಗೆ ಎದುರಾಗುತ್ತಿದೆ. ಏಪ್ರಿಲ್ 1, 2025 ರಿಂದ ಸೋನಿ, ಝೀ ಮತ್ತು ಸ್ಟಾರ್‌ನಂತಹ ನೆಟ್‌ವರ್ಕ್ ವಾಹಿನಿಗಳು ಸೇರಿದಂತೆ ನೂರಕ್ಕೂ ಹೆಚ್ಚು ವಾಹಿನಿಗಳು ತಮ್ಮ ಪ್ರಸಾರ ನಿಲ್ಲಿಸಬೇಕಾದ ಪರಿಸ್ಥಿತಿ ಉದ್ಭವಿಸುವಂತೆ ಕಾಣಿಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ. ‘ಎಕನಾಮಿಕ್ ಟೈಮ್ಸ್’ ಸೇರಿದಂತೆ ಹಲವು ಜಾಲತಾಣಗಳಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಉಪಗ್ರಹಗಳು ಬಾಹ್ಯಾಕಾಶ ಆಧಾರಿತ ಸಂವಹನ ಅಥವಾ ಪ್ರಸಾರ ಸೇವೆಗಳನ್ನು ಒದಗಿಸಲು IN-SPACE (Indian National Space Promotion and Authorization Centre, ಭಾರತೀಯ ಬಾಹ್ಯಾಕಾಶ ಪ್ರಚಾರ ಮತ್ತು ಅನುಮೋದನಾ ಕೇಂದ್ರ) ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಈ ಅನುಮೋದನೆ ಪಡೆಯುವ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಾರ ನಿಲ್ಲಿಸಬಹುದಾದ ಸಾಧ್ಯತೆ ಎದುರಾಗಿದೆ.
ಏಪ್ರಿಲ್ 1, 2025 ರ ಒಳಗಡೆ ಅನುಮತಿ ಪಡೆಯಬೇಕು
ಹಲವು ಕಂಪನಿಗಳು IN-SPACE ನಿಂದ ಅನುಮತಿ ಪಡೆದಿವೆ. ಆದರೆ, ಇನ್ನೂ ಕೆಲವು ಕಂಪನಿಗಳು ಅನುಮತಿ ಪಡೆದಿಲ್ಲ. ಏಪ್ರಿಲ್ 1, 2025ರ ಒಳಗಡೆ ಅನುಮತಿ ಪಡೆಯದ ಕಂಪನಿಗಳು ಪ್ರಸಾರ ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅನುಮತಿ ಪಡೆಯಲು ವಿಫಲವಾದರೆ ವೀಕ್ಷಕರು ಸಾಕಷ್ಟು ಟಿವಿ ಶೋಗಳನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ.
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ ಅನುಮತಿ ಪಡೆಯದ ವಾಹಿನಿಗಳನ್ನು ಪ್ರಸಾರ ಮಾಡಲು ಅನುಮತಿ ದೊರೆಯುವುದಿಲ್ಲ. ಇದು OTT ವಿಷಯ ಅಥವಾ ವಿತರಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ವರದಿಯ ಪ್ರಕಾರ, ಈ ಉಪಗ್ರಹ ಕಂಪನಿಗಳು ಅನುಮತಿ ಪಡೆಯಲು ಸಾಧ್ಯವಾಗದಿದ್ದರೆ ಪ್ರಸಾರಕರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಸಿಗಬಹುದು ಇನ್ನಷ್ಟು ಕಾಲಾವಕಾಶ
ಈ ತಿಂಗಳ ಅಂತ್ಯದ ವೇಳೆಗೆ ಅನುಮತಿಗಳ ಕುರಿತು ಹೆಚ್ಚಿನ ಸ್ಪಷ್ಟತೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಇದಲ್ಲದೆ, ಸರ್ಕಾರವು ಅನುಮತಿ ಪಡೆಯಲು ಸಮಯವನ್ನು ವಿಸ್ತರಿಸುವ ಅವಕಾಶವನ್ನೂ ನೀಡಬಹುದು. ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್) ಮತ್ತು ಇನ್ನೂ ಹೆಚ್ಚಿನ ಗಮನ ಸೆಳೆಯುವ ಕಾರ್ಯಕ್ರಮಗಳು ಇರುವ ಕಾರಣ ಪ್ರಸಾರಕರಿಗೆ ಇನ್ನಷ್ಟು ಕಾಲಾವಕಾಶ ನೀಡಬಹುದು. ಅನುಮತಿ ಪಡೆಯದ ಹಲವು ಕಂಪನಿಗಳು ಈಗಾಗಲೇ ತಮ್ಮ ವಿನಂತಿಗಳನ್ನು ಸಲ್ಲಿಸಿವೆ. ಆದರೆ, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಈಗಾಗಲೇ ಸಂಕಷ್ಟದಲ್ಲಿರುವ ಡಿಟಿಎಚ್ ಉದ್ಯಮದ ಹಿತದೃಷ್ಟಿಯಿಂದ ಈ ವಿಷಯದಲ್ಲಿ ಸರ್ಕಾರದ ನಿರ್ಧಾರವು ನಿರ್ಣಾಯಕವಾಗಿರುತ್ತದೆ.

ವಿಭಾಗ