Yogesh Mahajan: ಖ್ಯಾತ ಕಿರುತೆರೆ ನಟ ನಿಧನ; ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಯೋಗೇಶ್‌ ಇನ್ನಿಲ್ಲ
ಕನ್ನಡ ಸುದ್ದಿ  /  ಮನರಂಜನೆ  /  Yogesh Mahajan: ಖ್ಯಾತ ಕಿರುತೆರೆ ನಟ ನಿಧನ; ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಯೋಗೇಶ್‌ ಇನ್ನಿಲ್ಲ

Yogesh Mahajan: ಖ್ಯಾತ ಕಿರುತೆರೆ ನಟ ನಿಧನ; ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಯೋಗೇಶ್‌ ಇನ್ನಿಲ್ಲ

ಕಿರುತೆರೆಯ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ಯೋಗೇಶ್‌ ಮಾಹಾಜನ್ ನಿಧನರಾಗಿದ್ದಾರೆ. ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಖ್ಯಾತ ಕಿರುತೆರೆ ನಟ ಯೋಗೇಶ್‌ ಇನ್ನಿಲ್ಲ
ಖ್ಯಾತ ಕಿರುತೆರೆ ನಟ ಯೋಗೇಶ್‌ ಇನ್ನಿಲ್ಲ

ಖ್ಯಾತ ಕಿರುತೆರೆ ನಟ ಯೋಗೇಶ್ ಮಹಾಜನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವ ಶಕ್ತಿ-ತಪ, ‘ತ್ಯಾಗ’, ‘ತಾಂಡವ್’, ‘ಆದಿ ಶಂಕರಾಚಾರ್ಯ’ ಮತ್ತು ಶ್ರೀಮದ್ ರಾಮಾಯಣದಂತಹ ಪೌರಾಣಿಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಜನರ ಮೆಚ್ಚುಗೆ ಪಡೆದಿದ್ದರು. ಗುರು ಶುಕ್ರಾಚಾರ್ಯರ ಪಾತ್ರವನ್ನು ಅವರು ತುಂಬಾ ಉತ್ತಮವಾಗಿ ನಿರ್ವಹಿಸುವ ಮೂಲಕ ಸಾಕಷ್ಟು ಜನರ ಮನೆ ಮಾತಾಗಿದ್ದರು. ಆದರೆ ತಮ್ಮ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಸಾಕಷ್ಟು ಅಭಿಮಾನಿಗಳಿಗೆ ಬೇಸರ ತಂದಿದೆ. ಭಾನುವಾರ, 19 ಜನವರಿ 2025 ರಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಯೋಗೇಶ್‌ ಮಹಾಜನ್ ಇನ್ನಿಲ್ಲ

'ಆಜ್ ತಕ್' ವರದಿ ಪ್ರಕಾರ ನಟ ಯೋಗೀಶ್ ಮಹಾಜನ್ ತಮ್ಮ ಫ್ಲಾಟ್ ನಲ್ಲಿ ಸಾವನ್ನಪ್ಪಿದ್ದಾರೆ. ಅವರ ಅಪಾರ್ಟ್ಮೆಂಟ್ ಶೂಟಿಂಗ್ ಸೆಟ್‌ ಬಳಿಯೇ ಇತ್ತು ಎನ್ನಲಾಗಿದೆ. ಅವರು ಚಿತ್ರೀಕರಣಕ್ಕೆ ಬಂದಿಲ್ಲ ಎಂದು ಅವರನ್ನು ಕರೆಯಲು ಹೋದಾಗ ಅವರು ತಮ್ಮ ಪಾರ್ಟ್ಮೆಂಟ್‌ನಲ್ಲೇ ಶವವಾಗಿದ್ದರು. ಬಹಳ ಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಅನುಮಾನ ಮೂಡಿ ಬಾಗಿಲನ್ನು ಒಡೆದು ಒಳಗಡೆ ಪ್ರವೇಶ ಮಾಡಿದ್ದಾರೆ. ಆಗ ಅವರು ತಮ್ಮ ಉಸಿರಾಟ ನಿಲ್ಲಿಸಿರುವುದು ತಿಳಿದು ಬಂದಿದೆ.

ವೈದ್ಯರು ಕೂಡ ಅವರ ಸಾವನ್ನು ದೃಢಪಡಿಸಿದ್ದು, ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅವರ ಸಹ ನಟರು ಆಘಾತಕ್ಕೊಳಗಾಗಿದ್ದಾರೆ. ಅವರು ಹಾಸ್ಯಮಯ ಸ್ವಭಾವದವರಾಗಿದ್ದು ಅವರಿದ್ದರೆ ಎಲ್ಲರೂ ನಗುತ್ತಿದ್ದರು ಎಂದು ಹೇಳಲಾಗಿದೆ. ಅವರ ಜತೆ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಅವರ ಸಾವನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆಯಂತೆ. ಈ ಕುರಿತು ಅವರ ಸ್ನೇಹಿತರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಯೋಗೇಶ್ ಮಹಾಜನ್ ಅವರು ಪತ್ನಿ ಮತ್ತು ಏಳು ವರ್ಷದ ಮಗನನ್ನು ಅಗಲಿದ್ದಾರೆ. ಜನವರಿ 20 ರಂದು ಬೆಳಿಗ್ಗೆ 11 ಗಂಟೆಗೆ ಗೋರಾರಿ-2 ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. 1976ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಯೋಗೇಶ್ ಯಾವುದೇ ಗಾಡ್ ಫಾದರ್ ಇಲ್ಲದೆ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಅಭಿಮಾನಿಗಳ ಸಂತಾಪ

ಅವರ ಅಕಾಲಿಕ ನಿಧನಕ್ಕೆ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲೂ ಅವರ ಬಗ್ಗೆ ಪೋಸ್ಟ್‌ ಮಾಡುತ್ತಿದ್ದಾರೆ. ಇವರು ಸಿನಿಮಾಗಳಲ್ಲಿಯೂ ಪಾತ್ರ ಮಾಡಿದ್ದರು. ಮರಾಠಿ ಸಿನಿಮಾಗಳಲ್ಲಿ ಇವರು ಮುಖ್ಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು, ತಮ್ಮ ಅಭಿನಯ ಹಾಗೂ ಒಳ್ಳೆಯ ಗುಣಗಳಿಂದ ಸಾಕಷ್ಟು ಜನರಿಗೆ ಇವರು ಪ್ರಿಯರಾಗಿದ್ದರು. ಆದರೆ ಇವರ ಅಕಾಲಿಕ ಮರಣದಿಂದಾಗಿ ಎಲ್ಲರೂ ದುಃಖದಲ್ಲಿದ್ದಾರೆ. ಅವರ ಸಹ ಸಟಿ ಆಕಾಂಕ್ಷಾ ರಾವತ್ ಕೂಡ ತುಂಬಾ ಬೇಸರದಿಂದ ಪೋಸ್ಟ್‌ ಮಾಡಿದ್ದಾರೆ. ಸಾಕಷ್ಟು ಸ್ನೇಹಿತರನ್ನು ಅಗಲಿರುವ ಅವರ ಬಗ್ಗೆ ತುಂಬಾ ಜನ ಮಾತಾಡುತ್ತಿದ್ದಾರೆ. ಅವರ ಸಾವು ನ್ಯಾಯವಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.

Whats_app_banner