Chetan Ahimsa: ಹಿಂದುತ್ವದ ಬಗ್ಗೆ ಟ್ವೀಟ್; ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್..
ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ ಎಂದು ಚೇತನ್ ಅಹಿಂಸಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ನಟ ಚೇತನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Chetan ahimsa 14 days judicial custody: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಕಾರಣ ನಟ ಚೇತನ ಅಹಿಂಸಾ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. ಇದೀಗ ಚೇತನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ತೀರ್ಪಿನ ಹಿನ್ನೆಲೆಯಲ್ಲಿ ನಟ ಚೇತನ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ ಎಂದು ಚೇತನ್ ಅಹಿಂಸಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಜೊತೆಗೆ ಬಾಬರಿ ಮಸೀದಿ, ರಾಮ ಜನ್ಮಭೂಮಿ, ಇತ್ತೀಚೆಗೆ ಸುದ್ದಿಯಲ್ಲಿರುವ ಉರಿಗೌಡ ಹಾಗೂ ನಂಜೇಗೌಡ ಬಗ್ಗೆ ಬರೆದುಕೊಂಡಿದ್ದರು.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಶಿವಕುಮಾರ್ ಎಂಬುವವರು ಚೇತನ್ ಅಹಿಂಸಾ ವಿರುದ್ಧ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ನಟ ಚೇತನ್ ಅವರನ್ನು ಅರೆಸ್ಟ್ ಮಾಡಿ ಐಪಿಸಿ ಸೆಕ್ಷನ್ 295 ಎ ಹಾಗೂ 505 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಚೇತನ್ ಟ್ವೀಟ್ ಏನಾಗಿತ್ತು?
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ.
ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು. ಇದು ಒಂದು ಸುಳ್ಳು.
1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’. ಇದು ಒಂದು ಸುಳ್ಳು.
ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು.
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು ಸತ್ಯವೇ ಸಮಾನತೆ’ ಎಂದು ಚೇತನ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಕಳೆದ ವರ್ಷವೂ ಅರೆಸ್ಟ್ ಆಗಿದ್ದ ನಟ
ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಹಾಗೂ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ವಿರುದ್ಧ ಚೇತನ್ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ನ್ಯಾಯಾಂಗ ನಿಂದನೆ ಮಾಡುವ ಮೂಲಕ ಚೇತನ್ ಆಗ ಅರೆಸ್ಟ್ ಆಗಿದ್ದರು. ಐಪಿಸಿ ಸೆಕ್ಷನ್ 505 (2), 504 ಅಡಿ ಚೇತನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ನ್ಯಾಯಾಂಗ ಬಂಧನದ ನಂತರ ಚೇತನ್‌ಗೆ ಜಾಮೀನು ದೊರೆತು ಬಿಡುಗಡೆ ಆಗಿದ್ದರು. ಇದೀಗ ಮತ್ತೆ ಚೇತನ್ ಹಿಂದೂ ಧರ್ಮದ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಂಚಿಕೊಂಡು ಮತ್ತೆ ಬಂಧನವಾಗಿದ್ದಾರೆ.