ಜೈಲಿಂದ ಬಂದ ಅಲ್ಲು ಅರ್ಜುನ್‌ ಜತೆ ಉಪೇಂದ್ರ ಮುಖಾಮುಖಿ; ಹೈದರಾಬಾದ್‌ ಮನೆಯಲ್ಲಿ ನಡೀತು UI ಕುರಿತ ಮಹತ್ವದ ಮಾತುಕತೆ
ಕನ್ನಡ ಸುದ್ದಿ  /  ಮನರಂಜನೆ  /  ಜೈಲಿಂದ ಬಂದ ಅಲ್ಲು ಅರ್ಜುನ್‌ ಜತೆ ಉಪೇಂದ್ರ ಮುಖಾಮುಖಿ; ಹೈದರಾಬಾದ್‌ ಮನೆಯಲ್ಲಿ ನಡೀತು Ui ಕುರಿತ ಮಹತ್ವದ ಮಾತುಕತೆ

ಜೈಲಿಂದ ಬಂದ ಅಲ್ಲು ಅರ್ಜುನ್‌ ಜತೆ ಉಪೇಂದ್ರ ಮುಖಾಮುಖಿ; ಹೈದರಾಬಾದ್‌ ಮನೆಯಲ್ಲಿ ನಡೀತು UI ಕುರಿತ ಮಹತ್ವದ ಮಾತುಕತೆ

UI ಸಿನಿಮಾ ಪ್ರಚಾರಾರ್ಥವಾಗಿ ಹೈದರಾಬಾದ್‍ಗೆ ತೆರಳಿರುವ ಉಪೇಂದ್ರ, ಅಲ್ಲು ಅರ್ಜುನ್ ಅವರ ಜೊತೆಗೆ ಕುಶಲೋಪರಿ ನಡೆಸಿದ್ದಾರೆ. ಇಂದು (ಡಿ. 14) ಬೆಳಿಗ್ಗೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಅಲ್ಲು ಅರ್ಜುನ್‍ ಜೊತೆಗೆ ಸಮಯ ಕಳೆದಿದ್ದಾರೆ.

ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್‌ ಜತೆ ಉಪೇಂದ್ರ ಮುಖಾಮುಖಿ
ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್‌ ಜತೆ ಉಪೇಂದ್ರ ಮುಖಾಮುಖಿ

Upendra meets Allu Arjun: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘UI’, ಡಿ. 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ. ಬಿಡುಗಡೆಗೆ ಕೆಲವೇ ದಿನಗಳಿದ್ದರೂ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಿರುವಾಗಲೇ, ‘UI’ ಚಿತ್ರದ ಪ್ರಚಾರ ಶುರುವಾಗಿದೆ.

‘UI’ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಪತ್ರಿಕಾಗೋಷ್ಠಿಗಳು ನಡೆದಿದ್ದು ಬಿಟ್ಟರೆ, ಮಿಕ್ಕಂತೆ ಚಿತ್ರತಂಡದವರು ಚಿತ್ರದ ಬಗ್ಗೆ ಹೆಚ್ಚು ಮಾತನಾಡಿಲ್ಲ ಅಥವಾ ಚಿತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚು ತುಣುಕುಗಳನ್ನು ಬಿಡುಗಡೆ ಮಾಡಿಲ್ಲ. ಕೆಲವು ದಿನಗಳ ಹಿಂದೆ ವಾರ್ನರ್ ಎಂಬ ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿದ್ದು ಬಿಟ್ಟರೆ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ, ಇನ್ನೇನಿದ್ದರೂ ಚಿತ್ರಮಂದಿರಗಳಲ್ಲೇ ನೋಡಿ ಎಂದು ಉಪೇಂದ್ರ ಹೇಳಿದ್ದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ಜೈಪುರಕ್ಕೆ ರಜನಿಕಾಂತ್‍ ಅಭಿನಯದ ‘ಕೂಲಿ’ ಚಿತ್ರದ ಚಿತ್ರೀಕರಣಕ್ಕೆ ಉಪೇಂದ್ರ ಹೋಗಿದ್ದರು. ಆಮೀರ್ ಖಾನ್‍ ಅವರನ್ನು ಉಪೇಂದ್ರ ಭೇಟಿ ಮಾಡಿದ್ದು ಇದೇ ಸಂದರ್ಭದಲ್ಲಿ. ‘ಕೂಲಿ’ ಚಿತ್ರದಲ್ಲಿ ಆಮೀರ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣದ ವೇಳೆ ಉಪೇಂದ್ರ ಮತ್ತು ಆಮೀರ್ ಖಾನ್‍ ಅವರ ಭೇಟಿಯಾಗಿದೆ. ಈ ಸಂದರ್ಭದಲ್ಲಿ ‘UI’ ಚಿತ್ರದ ವಾರ್ನರ್ ನೋಡಿರುವ ಆಮೀರ್, ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ಉಪೇಂದ್ರ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಲ್ಲು ಅರ್ಜುನ್‌ ಜತೆ ಮಾತುಕತೆ

ಶುಕ್ರವಾರವಷ್ಟೇ ಬೆಂಗಳೂರಿಗೆ ವಾಪಸ್ಸಾದ ಉಪೇಂದ್ರ, ‘UI’ ಚಿತ್ರದ ಕುರಿತು ಹಲವು ಚಾನಲ್‍ಗಳ ಜೊತೆಗೆ ಮಾತನಾಡಿದ್ದಾರೆ. ಚಿತ್ರದ ಕುರಿತು ಹಲವು ಸಂದರ್ಶನಗಳನ್ನು ನೀಡಿದ್ದಾರೆ. ಇಂದು ಹೈದರಾಬಾದ್‍ಗೆ ಹೋಗಿರುವ ಉಪೇಂದ್ರ, ಅಲ್ಲು ಅರ್ಜುನ್ ಅವರ ಜೊತೆಗೆ ಕುಶಲೋಪರಿ ನಡೆಸಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಅಲ್ಲು ಅರ್ಜುನ್‍ ಜೊತೆಗೆ ಸ್ವಲ್ಪ ಸಮಯ ಕಳೆದಿದ್ದಾರೆ.

ತೆಲುಗು ನಾಡಿನಲ್ಲಿ UI ಚಿತ್ರಕ್ಕೆ ಅಲ್ಲು ಅರವಿಂದ್‌ ಬಲ

ವಿಶೇಷವೆಂದರೆ, ‘UI’ ಚಿತ್ರದ ತೆಲುಗು ಅವತರಣಿಕೆಯನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡುತ್ತಿರುವುದು ಇದೇ ಅಲ್ಲು ಅರ್ಜುನ್‍ ಅವರ ತಂದೆ ಅಲ್ಲು ಅರವಿಂದ್‍. ಇಂದು ಮತ್ತು ನಾಳೆ ಅಲ್ಲಿನ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುವ ಉಪೇಂದ್ರ, ನಾಳೆ ರಾತ್ರಿ ಹೈದರಾಬಾದ್‍ನಲ್ಲಿ ನಡೆಯಲಿರುವ ಪ್ರೀ-ರಿಲೀಸ್‍ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೋಮವಾರ ಪ್ರೀ ರಿಲೀಸ್‌ ಕಾರ್ಯಕ್ರಮ

ಸೋಮವಾರ ಬೆಂಗಳೂರಿನಲ್ಲಿ ಚಿತ್ರದ ಪ್ರೀ-ರಿಲೀಸ್‍ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ಬೆಳಿಗ್ಗೆ ಉಪೇಂದ್ರ, ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಮಂಗಳವಾರ ಚೆನ್ನೈ ಮತ್ತು ಬುಧವಾರ ಮುಂಬೈನಲ್ಲಿ ಚಿತ್ರದ ಪತ್ರಿಕಾಗೋಷ್ಠಿಗಳು ನಡೆಯಲಿವೆ. ಇದಾಗಿ ಶುಕ್ರವಾರ ಚಿತ್ರ ಬಿಡುಗಡೆಯಾಗಲಿದೆ. ‘UI’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್‍ ಎಂಟರ್‍ಟೈನರ್ಸ್‍ ಸಂಸ್ಥೆಗಳಡಿ ಜಿ. ಮನೋಹರನ್‍ ಮತ್ತು ಶ್ರೀಕಾಂತ್‍ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.

ವರದಿ: ಚೇತನ್‌ ನಾಡಿಗೇರ್

Whats_app_banner