ಉಪೇಂದ್ರ ‘UI’ ಸಿನಿಮಾ ಬಿಡುಗಡೆಗೆ ದಿನಗಣನೆ, ಪ್ರಚಾರ ಮಾತ್ರ ಮಂದ; ಯುಐ ನೋಡಿ ಯುಎ ಎಂದ ಸೆನ್ಸಾರ್ ಮಂಡಳಿ
Upendra UI Movie: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘UI’, ಡಿ. 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ. ಆದರೆ, ಚಿತ್ರತಂಡವು ಪ್ರಚಾರದ ವಿಷಯವಾಗಿ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. (ವರದಿ: ಚೇತನ್ ನಾಡಿಗೇರ್)
ಬೆಂಗಳೂರು: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘UI’, ಡಿ. 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ. ಬಿಡುಗಡೆಗೆ ಕೆಲವೇ ದಿನಗಳಿವೆ. ಆದರೆ, ಚಿತ್ರತಂಡವು ಪ್ರಚಾರದ ವಿಷಯವಾಗಿ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಹೌದು, ‘UI’ ಚಿತ್ರದ ಬಿಡಗುಡೆಗೆ ಕೆಲವೇ ದಿನಗಳು ಉಳಿದಿದ್ದರೂ, ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಚಾರಗಳನ್ನು ಪ್ರಾರಂಭಿಸಿಲ್ಲ. ಚಿತ್ರದ ಕುರಿತು ಕೆಲವು ದಿನಗಳ ಹಿಂದೆ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಪತ್ರಿಕಾಗೋಷ್ಠಿಗಳಾಗಿದ್ದು ಬಿಟ್ಟರೆ, ಮಿಕ್ಕಂತೆ ಚಿತ್ರತಂಡದವರು ಚಿತ್ರದ ಬಗ್ಗೆ ಹೆಚ್ಚು ಮಾತನಾಡಿಲ್ಲ ಅಥವಾ ಚಿತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚು ತುಣುಕುಗಳನ್ನು ಬಿಡುಗಡೆ ಮಾಡಿಲ್ಲ. ಕೆಲವು ದಿನಗಳ ಹಿಂದೆ ವಾರ್ನರ್ ಎಂಬ ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿದ್ದು ಬಿಟ್ಟರೆ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ, ಇನ್ನೇನಿದ್ದರೂ ಚಿತ್ರಮಂದಿರಗಳಲ್ಲೇ ನೋಡಿ ಎಂದು ಉಪೇಂದ್ರ ಹೇಳಿದ್ದರು.
ಟ್ರೇಲರ್ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ‘ಟ್ರೇಲರ್, ಟೀಸರ್ ಬೇಡ ಅಂತಲೇ ವಾರ್ನರ್ ಬಿಡುಗಡೆ ಮಾಡಿದ್ದೇವೆ. ಚಿತ್ರ ಬಿಡುಗಡೆಗೂ ಮೊದಲು ಚಿತ್ರದ ಯಾವ ದೃಶ್ಯವನ್ನೂ ತೋರಿಸಬಾರದು ಎಂಬುದು ನನ್ನ ಯೋಚನೆ. ಆದರೆ, ಚಿತ್ರವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟೀಸರ್, ಟ್ರೇಲರ್ ಬಿಡುಗಡೆ ಮಾಡುವುದು ಟ್ರೆಂಡ್ ಆಗಿದೆ. ಆದರೂ ಹಲವು ವಿಷಯಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಕೆಲವು ವಿಷಯಗಳನ್ನು ಮಾತ್ರ ಈ ವಾರ್ನರ್‍ನಲ್ಲಿ ತೋರಿಸಿದ್ದೇವೆ. ಇನ್ನೇನು ತೋರಿಸುವುದಿಲ್ಲ. ಎಲ್ಲವನ್ನೂ ಸಿನಿಮಾದಲ್ಲೇ ನೋಡಿ’ ಎಂದು ಹೇಳಿದ್ದರು. ಹಾಗಾಗಿ, ಚಿತ್ರತಂಡದಿಂದ ಚಿತ್ರದ ಟ್ರೇಲರ್ ಬಿಡುಗಡೆ ಆಗುವುದಿಲ್ಲ.
ಉಪೇಂದ್ರ ನಿರ್ದೇಶನ ಮಾಡುತ್ತಾರೆ ಎಂದರೆ ಸಹಜವಾಗಿಯೇ ಅವರ ಚಿತ್ರಗಳ ಬಗ್ಗೆ ಕುತೂಹಲ ಹೆಚ್ಚಾಗುತ್ತದೆ. ನಿರ್ದೇಶಕರಾಗಿ ಅವರಿಗೆ ಬೇರೆ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ವರ್ಗವಿದೆ. ಹಾಗಾಗಿ, ಬೇರೆ ರಾಜ್ಯಗಳಲ್ಲೂ ಉಪೇಂದ್ರ ಅವರ ಚಿತ್ರಗಳಿಗೆ ಬೇಡಿಕೆ ಇದ್ದೇ ಇದೆ. ಅದಕ್ಕೆ ಸರಿಯಾಗಿ, ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೇ ದೊಡ್ಡ ಮಟ್ಟಕ್ಕೆ ಹೆಸರಿರುವ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ವಿತರಿಸತ್ತಿದೆ. ಕೇರಳದಲ್ಲಿ ಎಪಿ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿದರೆ, ಹೊರದೇಶಗಳಲ್ಲಿ ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ವಿತರಣೆ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದರೂ, ಹೊರರಾಜ್ಯಗಳಲ್ಲಿ ಇನ್ನೂ ಪ್ರಚಾರ ಶುರುವಾಗಿಲ್ಲ. ಡಿಸೆಂಬರ್ 7ರಿಂದ ‘UI’ ಚಿತ್ರದ ಪ್ರಮೋಷನ್ ಹೊರರಾಜ್ಯಗಳಲ್ಲಿ ನಡೆಯಲಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಕೆ.ಪಿ. ಶ್ರೀಕಾಂತ್ ಹೇಳಿಕೊಂಡಿದ್ದರೂ, ಯಾವಾಗಿನಿಂದ ಶುರುವಾಗುತ್ತದೋ ಎಂಬುದು ಸ್ಪಷ್ಟವಾಗಿಲ್ಲ.
ಇನ್ನು, ಬೆಂಗಳೂರು ಅಥವಾ ಚಿತ್ರದುರ್ಗದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗಿತ್ತು. ಆದರೆ, ಯಾವಾಗ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಚಿತ್ರದ ವಿತರಣಾ ಹಕ್ಕುಗಳನ್ನು ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಪಡೆದುಕೊಂಡಿದೆ.
ಈ ಮಧ್ಯೆ, ‘UI’ ಚಿತ್ರವು ಮಂಗಳವಾರ ಸೆನ್ಸಾರ್ ಆಗಿದ್ದು, ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ.
- ವರದಿ: ಚೇತನ್ ನಾಡಿಗೇರ್