UI World Television Premiere: ಒಟಿಟಿಗೂ ಮುನ್ನವೇ ಟಿವಿಯಲ್ಲಿ ಬರ್ತಿದೆ ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ
UI World Television Premiere: ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಸೈನ್ಸ್ ಫಿಕ್ಷನ್ ಆಕ್ಷನ್ ಚಿತ್ರ ಯುಐ ಒಟಿಟಿಗಿಂತ ಮುಂಚಿತವಾಗಿ ಟಿವಿಯಲ್ಲಿ ಬಿಡುಗಡೆಯಾಗಲಿದೆ. ಇನ್ನೇನು ಶೀಘ್ರದಲ್ಲಿ ಬುದ್ಧಿವಂತನ ಸಿನಿಮಾವನ್ನು ಕಿರುತೆರೆಯಲ್ಲಿ ವೀಕ್ಷಿಸಿ ಎಂಬ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

UI World Television Premier: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಕರಾಗಿಯೂ ಕಂಬ್ಯಾಕ್ ಮಾಡಿದ ಸಿನಿಮಾ ಯುಐ. ಡಿಸೆಂಬರ್ 20ರಂದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದ ಈ ಚಿತ್ರ, ವಿಮರ್ಶೆ ದೃಷ್ಟಿಯಿಂದ ಪ್ರೇಕ್ಷಕರ ತೆಲೆಗೆ ಹುಳ ಬಿಟ್ಟಿತ್ತು. ಆದರೆ, ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ತಿಂಗಳ ಮೇಲಾದರೂ, ಇನ್ನೂ ಒಟಿಟಿಯ ಸುದ್ದಿಯಿಲ್ಲ. ಈ ನಡುವೆ ಒಟಿಟಿಗೂ ಮುನ್ನವೇ ಕಿರುತೆರೆಗೆ ಆಗಮಿಸಲು ಸಜ್ಜಾಗಿದೆ ಈ ಸಿನಿಮಾ.
ಡಿಸೆಂಬರ್ 20ರಂದು ಬಿಡುಗಡೆ ಆಗಿದ್ದ ಯುಐ ಸಿನಿಮಾ, ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಮಾಡಿದೆ. ಅಂದಾಜು 35ರಿಂದ 40 ಪ್ಲಸ್ ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಮಾತ್ರ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದೇ ಸಿನಿಮಾ ವಿತರಕರ ವಲಯದ ಅಂದಾಜಿನ ಪ್ರಕಾರ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ, ಸಿನಿಮಾದ ನಿರ್ಮಾಪಕರು ಲಾಭದಲ್ಲಿದ್ದಾರೆ. ಹೀಗಿರುವಾಗಲೇ ಇದೇ ಸಿನಿಮಾ ಒಟಿಟಿಗೆ ಯಾವಾಗ ಎಂದು ಕಾದಿದ್ದೇ ಬಂತು. ಆದರೆ, ಒಟಿಟಿ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಅದರ ಬದಲು ಕಿರುತೆರೆಯಲ್ಲಿ ಪ್ರಸಾರ ಆರಂಭಿಸಲಿದೆ.
ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಯಾವಾಗ?
ಯುಐ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರಲಿದ್ಯಾ? ಹೀಗೊಂದು ಚರ್ಚೆ ಇದೀಗ ಶುರುವಾಗಿದೆ. ಅದಕ್ಕೆ ಕಾರಣ; ಜೀ ಕನ್ನಡ! ಹೌದು, ಯುಐ ಸಿನಿಮಾದ ಕಿರು ಝಲಕ್‌ನ ಪ್ರೋಮೋವನ್ನು ಬಿಡುಗಡೆ ಮಾಡಿರುವ ವಾಹಿನಿ, ಇನ್ನೇನು ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಯುಐ ಸಿನಿಮಾ ಎಂದು ಸುಳಿವು ನೀಡಿದೆ. ಆದರೆ, ಅದ್ಯಾವಾಗ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ ಎಂಬ ಮಾಹಿತಿ ಇಲ್ಲ. ಹಾಗಾದರೆ ಜೀ5 ಒಟಿಟಿಯಲ್ಲಿ ಇದೇ ಸಿನಿಮಾ ವೀಕ್ಷಣೆಗೆ ಸಿಗಬಹುದೇ? ಸದ್ಯದ ಮಾಹಿತಿ ಪ್ರಕಾರ ಯುಐ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ. ಡಿಜಿಟಲ್ ಹಕ್ಕುಗಳದ್ದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಹಾಗಾದರೆ ಯಾವ ಒಟಿಟಿಯಲ್ಲಿ ಯುಐ?
ಸದ್ಯಕ್ಕೆ ಯುಐ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ. ಆದರೆ, ಈ ವರೆಗೂ ಇದೇ ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮೊದಲು ಸನ್ ನೆಕ್ಸ್ಟ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ ಎನ್ನಲಾಗಿತ್ತು. ಈಗ ಅಮೆಜಾನ್ ಪ್ರೈಮ್ ಹೆಸರು ಕೇಳಿಬರುತ್ತಿದೆಯಾದರೂ, ಇನ್ನಷ್ಟೇ ಘೋಷಣೆ ಆಗಬೇಕಿದೆ.
UI ಸಿನಿಮಾವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದರೆ, ಸಾಧುಕೋಕಿಲ, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್, ನಿಧಿ ಸುಬ್ಬಯ್ಯ, ಓಂ ಸಾಯಿ ಪ್ರಕಾಶ್, ಗುರುಪ್ರಸಾದ್, ರವಿ ಶಂಕರ್ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ವಿಭಾಗ