ರುದ್ರಾಭಿಷೇಕಂ ಕ್ಲೈಮ್ಯಾಕ್ಸ್: ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ನಟ ವಿಜಯ ರಾಘವೇಂದ್ರ, ಇಲ್ಲಿದೆ ಶೂಟಿಂಗ್‌ ಅಪ್‌ಡೇಟ್‌
ಕನ್ನಡ ಸುದ್ದಿ  /  ಮನರಂಜನೆ  /  ರುದ್ರಾಭಿಷೇಕಂ ಕ್ಲೈಮ್ಯಾಕ್ಸ್: ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ನಟ ವಿಜಯ ರಾಘವೇಂದ್ರ, ಇಲ್ಲಿದೆ ಶೂಟಿಂಗ್‌ ಅಪ್‌ಡೇಟ್‌

ರುದ್ರಾಭಿಷೇಕಂ ಕ್ಲೈಮ್ಯಾಕ್ಸ್: ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ನಟ ವಿಜಯ ರಾಘವೇಂದ್ರ, ಇಲ್ಲಿದೆ ಶೂಟಿಂಗ್‌ ಅಪ್‌ಡೇಟ್‌

Rudrabhishekam movie: ಕನ್ನಡ ನಟ ವಿಜಯ ರಾಘವೇಂದ್ರ ಮುಖ್ಯಪಾತ್ರದಲ್ಲಿ ನಟಿಸಿರುವ ರುದ್ರಾಭಿಷೇಕಂ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ ನಡೆಯುತ್ತಿದೆ. ಈ ಸಿನಿಮಾದಲ್ಲಿ ವೀರಗಾಸೆ ಕಲೆಗೆ ಒತ್ತು ನೀಡಲಾಗಿದೆ. ನಾಯಕ ನಟ ವೀರಗಾಸೆ ಕಲಾವಿದನ ವೇಷದಲ್ಲಿ ಮಿಂಚಿದ್ದಾರೆ.

ರುದ್ರಾಭಿಷೇಕಂ ಕ್ಲೈಮ್ಯಾಕ್ಸ್: ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ನಟ ವಿಜಯ ರಾಘವೇಂದ್ರ
ರುದ್ರಾಭಿಷೇಕಂ ಕ್ಲೈಮ್ಯಾಕ್ಸ್: ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ನಟ ವಿಜಯ ರಾಘವೇಂದ್ರ

ಬೆಂಗಳೂರು: ನಮ್ಮ ನಾಡು ಹಲವಾರು ಜನಪದ ಕಲೆಗಳ ಇತಿಹಾಸ ಹೊಂದಿದೆ. ಇತ್ತೀಚೆಗೆ ಕಾಂತಾರ ಚಿತ್ರದಲ್ಲಿ ಕರಾವಳಿ ಭಾಗದ ದೈವಾರಾಧನೆ, ಆಚರಣೆ ಬಗ್ಗೆ ಹೇಳಲಾಗಿತ್ತು. ಅದೇರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಅದರ ಹೆಸರು ರುದ್ರಾಭಿಷೇಕಂ. ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ನಿರ್ದೇಶಕ ವಸಂತ್ ಕುಮಾರ್ ಅವರು ರುದ್ರಾಭಿಷೇಕಂ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಹಾಗೂ ದೇವನಹಳ್ಳಿಯ ಚಿಕ್ಕತದಮಂಗಲ ಗ್ರಾಮದಲ್ಲಿ ಸೆಟ್ ಹಾಕಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ವೀರಗಾಸೆ ಕಲಾವಿದರನ್ನಿಟ್ಟುಕೊಂಡು ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ.

"ಫ್ಯಾನ್ ಇಂಡಿಯಾ ಸಂಸ್ಥೆಯ ಮೊದಲ ಚಿತ್ರವಿದು. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಚಿತ್ರವನ್ನು ಕೊಡಬೇಕೆಂದು ನಾನೂ ಸೇರಿದಂತೆ 9 ಜನ‌ ನಿರ್ಮಾಪಕರುಗಳು ಸೇರಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಕಳೆದ 45 ದಿನಗಳಿಂದ ಯಾವುದೇ ತೊಂದರೆ ಇಲ್ಲದ ಹಾಗೆ ನಿರಂತರ ಚಿತ್ರೀಕರಣ ನಡೆದಿದ್ದು, 4 ದಿನಗಳ ಕ್ಲೈಮ್ಯಾಕ್ಸ್ ಸಾಂಗ್ ಮಾತ್ರವೇ ಬಾಕಿಯಿದೆ. ಶೂಟಿಂಗ್ ಜತೆ ಜತೆಗೆ ಎಡಿಟಿಂಗ್ ಕೂಡ ಶೇಕಡ 90 ಮುಗಿದಿದ್ದು, ಡಬ್ಬಿಂಗ್ ವರ್ಷನ್ ಸಿದ್ದವಿದೆ. ನಿರ್ಮಾಪಕರ ಹಾಗೂ ಕಲಾವಿದರೆಲ್ಲರ ಸಹಕಾರದಿಂದ ಯಾವುದೇ ತೊಂದರೆಯಿಲ್ಲದೆ ಚಿತ್ರೀಕರಣ ನಡೆದಿದೆ" ಎಂದು ನಿರ್ದೇಶಕ ವಸಂತಕುಮಾರ್ ಹೇಳಿದ್ದಾರೆ.

ಈಗ ನಡೆಯುತ್ತಿರುವ ಕ್ಲೈಮ್ಯಾಕ್ಸ್ ಹಾಡೇ ಚಿತ್ರದ ಹೈಲೈಟ್. ನೂರಾರು ಜನ ವೀರಗಾಸೆ ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನುಮುಂದೆ ವೀರಗಾಸೆ ಕಲಾವಿದರು ಎಲ್ಲೇ ನೃತ್ಯ ಮಾಡಿರೂ ಈ ಹಾಡನ್ನಿಟ್ಟುಕೊಂಡು ವೀರಗಾಸೆ ಕುಣಿತ ನಡೆಸಬೇಕು, ಹಾಗಿದೆ ಹಾಡು. ದೈವದ ಹಿನ್ನೆಲೆ ಇರುವ ಈ ಜನಪದ ಕಲೆಯನ್ನು ನಾಡಿನ ಮನೆ ಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ. ನಾಯಕ ವಿಜಯ ರಾಘವೇಂದ್ರ ಕೂಡ ನಮಗೆ ತುಂಬಾ ಸಹಕಾರ ಕೊಟ್ಟಿದ್ದಾರೆ. ತಂಡದ ಜತೆ ಸ್ನೇಹಿತನಂತೆ ಬೆರೆತು ಕೈಜೋಡಿಸಿದ್ದಾರೆ. ಚಿತ್ರದಲ್ಲಿ ನಾನೂ ಒಬ್ಬ ತತ್ವಜ್ಞಾನಿಯಾಗಿ ನಟಿಸಿದ್ದೇನೆ. ತಂದೆ, ಮಗ ಎರಡೂ ಪಾತ್ರಗಳ ಜತೆ ಇಡೀ ಚಿತ್ರದಲ್ಲಿ ಬರುವಂಥ ನನ್ನ ಪಾತ್ರಕ್ಕೆ ಎರಡು ಗೆಟಪ್ ಇದೆ. ಜೂನ್ ಅಥವಾ ಜುಲೈ ಚಿತ್ರವನ್ನು ವೇಳೆಗೆ ರಿಲೀಸ್ ಮಾಡುವ ಪ್ಲಾನಿದೆ" ಎಂದು ಅವರು ಹೇಳಿದ್ದಾರೆ.

ತಂದೆ, ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವ ವಿಜಯ ರಾಘವೇಂದ್ರ ಇದೇ ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ 2 ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯ ಮಹತ್ವ, ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರ ಹೇಳುತ್ತದೆ. ಮಂಜುನಾಥ ಕೆ.ಎನ್, ಜಯರಾಮ್ ರೆಡ್ಡಿ, ಕೆ.ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್‌ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರುದ್ರಾಭಿಷೇಕಂ ಚಿತ್ರದಲ್ಲಿ ಬಲ ರಾಜವಾಡಿ ಅವರು ಊರ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner