ಉಪೇಂದ್ರ ಯುಐ ಸಿನಿಮಾ ಎರಡು ರೀತಿಯ ಅಂತ್ಯ ಹೊಂದಿರುತ್ತಾ? ಆ ಥಿಯೇಟರ್‌ನಲ್ಲಿರುವ ಕ್ಲೈಮ್ಯಾಕ್ಸ್ ಈ ಚಿತ್ರಮಂದಿರದಲ್ಲಿ ಇರೋದಿಲ್ವಂತೆ
Alternate endings movie: ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾ ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವು ಆಲ್ಟರ್‌ನೆಟ್ ಕಟ್/ ಡಬಲ್ ಎಂಡಿಂಗ್ (alternate endings) ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ಸೂಚನೆಯಿದೆ. ಏನಿದು ಡಬಲ್ ಕಟ್ಟಿಂಗ್? ಇಲ್ಲಿದೆ ವಿವರ.
ಉಪೇಂದ್ರ ಯುಐ ಸಿನಿಮಾ ಗಾಸಿಪ್: ಉಪೇಂದ್ರ ಅಂದರೆ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳಿಗೆ ಹೆಸರುವಾಸಿ. ಪ್ರೇಕ್ಷಕರ ತಲೆಗೆ ಹುಳ ಬಿಡೋದ್ರಲ್ಲಿ ಉಪ್ಪಿ ಮೀರಿಸುವವರು ಇಲ್ಲ. ಇದೇ ಸಮಯದಲ್ಲಿ ಎಲ್ಲರಿಗಿಂತ ಭಿನ್ನವಾಗಿ ಚಿತ್ರ ನಿರ್ಮಿಸುತ್ತಾರೆ. ಈ ಬಾರಿ ಉಪೇಂದ್ರ ನಿರ್ದೇಶನ ಮತ್ತು ನಟನೆಯ ಯುಐ ಸಿನಿಮಾದಲ್ಲಿಯೂ ಪ್ರೇಕ್ಷಕರಿಗೆ ಅಚ್ಚರಿ ಕಾದಿದೆ ಎಂಬ ಮಾತು ಕೇಳಿಬರುತ್ತಿದೆ. ಯುಐ ಸಿನಿಮಾ ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2040ರಲ್ಲಿ ಈ ಜಗತ್ತಿನ ಸ್ಥಿತಿ ಹೇಗಿರಲಿದೆ? ಎಂಬ ಝಲಕ್ ಈಗಾಗಲೇ ಯುಐ ವಾರ್ನರ್‌ನಲ್ಲಿ ಉಪ್ಪಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಒಂದಿಷ್ಟು ಸರ್‌ಪ್ರೈಸ್ ಕಾದಿದೆ ಎನ್ನಲಾಗುತ್ತಿದೆ.
ಕನ್ನಡ ಚಲನಚಿತ್ರ ನಿರ್ಮಾಪಕ-ನಟ ಉಪೇಂದ್ರ ಅವರು ಸಿನಿಮಾ ರಚನೆಯಲ್ಲಿ ತನ್ನದೇ ಆದ ಟ್ರೇಡ್‌ಮಾರ್ಕ್ ಹೊಂದಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿನ ಡೈಲಾಗ್‌ಗಳು ಕೇಳಲು ಅಸಹನೀಯವಾಗಿದ್ದರೂ ಚಿಂತನೆಗೆ ಪ್ರಚೋದಿಸಿದ್ದು ಸುಳ್ಳಲ್ಲ.
ಸಾಕಷ್ಟು ವರ್ಷಗಳ ಬಳಿಕ ಉಪೇಂದ್ರ ಯುಐ ಸಿನಿಮಾದ ಮೂಲಕ ಆಗಮಿಸುತ್ತಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಏನಿರಲಿದೆ ಎಂಬ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಹಣದುಬ್ಬರ, ಯುದ್ಧ, ಜಾಗತಿಕ ತಾಪಮಾನ, ಧಾರ್ಮಿಕ ವಿಭಜನೆ ಇತ್ಯಾದಿಗಳ ಪ್ರಭಾವದಿಂದ ತತ್ತರಿಸಿರುವ ಭವಿಷ್ಯತ್‌ಕಾಲದ ಜನರ (2040) ಕಥೆ ಇದರಲ್ಲಿ ಇರಲಿದೆ. ಉಪೇಂದ್ರ ಅವರು ಈಗಾಗಲೇ ನೀಡಿರುವ ಮಾಹಿತಿಗಳು ಅತ್ಯಲ್ಪ ಎನ್ನಲಾಗುತ್ತಿದೆ. ಟೀಸರ್, ವಾರ್ನರ್ ಇತ್ಯಾದಿಗಳ ಮೂಲಕ ಒಂದಿಷ್ಟು ವಿವರ ನೀಡಲಾಗಿದೆ. ಈ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಉಪೇಂದ್ರ ಕಾಣಿಸಿಕೊಳ್ಳುವ ಸೂಚನೆ ಇದೆ. ಒಂದು ಕಲ್ಕಿ ಅವತಾರ ತರಹದ ಸಂರಕ್ಷಕ. ಇನ್ನೊಂದು ಎಐ ಚಾಲಿತ ಸರ್ವಾಧಿಕಾರಿ.
ಯಐ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ಏನಿರಬಹುದು?
ಯುಐ ಸಿನಿಮಾ ನಿಜವಾಗಿಯೂ ಹೇಗಿರಲಿದೆ? ಯುಐ ಸಿನಿಮಾದಲ್ಲಿ ಏನಿರಲಿದೆ? ಎಂಬ ಸತ್ಯ ತಿಳಿಯಬೇಕಾದರೆ ಡಿಸೆಂಬರ್ 20ರವರೆಗೆ ಕಾಯಬೇಕು ಎನ್ನುವುದು ನಿಜ. ಆದರೆ, ಈ ಸಿನಿಮಾ ಡಬಲ್ ಎಂಡಿಂಗ್ ಇರುವ ಕುರಿತು ಗುಸುಗುಸು ಕೇಳಿಬರುತ್ತಿದೆ. ಡಬಲ್ ಎಂಡಿಂಗ್ ಎಂದರೆ ಏನಪ್ಪ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಹತ್ತು ಹಲವು ವರ್ಷಗಳ ಹಿಂದೆ ಮಲಯಾಳಂನಲ್ಲಿ ಇಂತಹ ಪ್ರಯೋಗ ಇತ್ತು. ಕೇರಳದ ಕೆಲವು ಕಡೆಯ ಪ್ರೇಕ್ಷಕರಿಗೆ ಜೂಹ್ಲಿ ಚಾವ್ಲಾ ಮಮ್ಮುಟ್ಟಿಗೆ ಸಿಗುವ ರೀತಿ, ಕೇರಳದ ಇನ್ನು ಕೆಲವು ಪ್ರದೇಶಗಳ ಪ್ರೇಕ್ಷಕರಿಗೆ (ಥಿಯೇಟರ್‌ಗಳಲ್ಲಿ) ಜೂಹ್ಲಿ ಚಾವ್ಲಾ ಮೋಹನ್ ಲಾಲ್‌ಗೆ ಸಿಗುವಂತೆ ಎಂಡಿಂಗ್ ನೀಡಲಾಗಿತ್ತು.
ಇಂಗ್ಲಿಷ್‌ನ ಹಲವು ಸಿನಿಮಾಗಳು ಈಗಾಗಲೇ ಇಂತಹ ಆಲ್ಟರ್‌ನೇಟ್ ಕಟ್ ಅಥವಾ ಡಬಲ್ ಎಂಡಿಂಗ್ ತಂತ್ರವನ್ನು ಬಳಸಿವೆ. 28 ಡೇಸ್ ಲೇಟರ್ ಎಂಬ ಸಿನಿಮಾದ ಅಂತ್ಯವು ಥಿಯೇಟರ್‌ನಲ್ಲಿ ಬಿಡುಗಡೆಯಾದಗ ಒಂದು ರೀತಿ ಇತ್ತು, ಡಿವಿಡಿಯಲ್ಲಿ ಬಿಡುಗಡೆಯಾದಗ ಬೇರೆ ರೀತಿ ಇತ್ತು. ಐ ಆಮ್ ಲೆಜೆಂಡ್ ಸಿನಿಮಾದಲ್ಲಿ ಅಂತ್ಯದಲ್ಲಿ ನಾಯಕನು ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ಸಾಯುತ್ತಾನೆ ಅಥವಾ ಬದುಕುಳಿಯುತ್ತಾನೆ ಎನ್ನುವ ರೀತಿ ಇತ್ತು. ದಿ ಬೌರ್ನಿ ಐಡೆಂಟಿಟಿ ಸಿನಿಮಾ ಕೂಡ ಎರಡು ರೀತಿಯ ಎಂಡಿಂಗ್ ಹೊಂದಿತ್ತು. ಡಿವಿಡಿ ರಿಲೀಸ್‌ನಲ್ಲಿ ಜಾಸೊನ್ ಬಾರ್ನ್ ಅವರನ್ನು ಬಂಧಿಸಲಾಗಿತ್ತು, ಆತ ಮತ್ತೆ ಸಿಐಎಗೆ ಸೇರುವ ದೃಶ್ಯವಿತ್ತು. ಫೈನಲ್ ಡೆಸ್ಟಿನೇಷನ್ 3 ಸಿನಿಮಾ ಎರಡು ಪರ್ಯಾಯ ಅಂತ್ಯಗಳನ್ನು ಹೊಂದಿತ್ತು.
ಈ ರೀತಿ ಡಬಲ್ ಎಂಡಿಂಗ್ ಅಥವಾ ಆಲ್ಟರ್‌ನೆಟ್ ಕಟ್ ಸಿನಿಮಾಗಳ ಕುರಿತು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಮಾಹಿತಿ ದೊರಕುತ್ತದೆ. ಇದೇ ರೀತಿಯ ತಂತ್ರವನ್ನು ಯುಐ ಸಿನಿಮಾದಲ್ಲೂ ಮಾಡಲಾಗಿದೆ ಎಂಬ ವದಂತಿ ಇದೆ. ಇದು ಎಷ್ಟು ಸತ್ಯವೋ ಸುಳ್ಳೋ ಸಿನಿಮಾ ರಿಲೀಸ್ ಆದ ಬಳಿಕ ತಿಳಿದುಬರಲಿದೆ. ಸದ್ಯ ಇರುವ ವದಂತಿ ಏನೆಂದರೆ ಯುಐ ಸಿನಿಮಾದಲ್ಲಿ ಎರಡು ಭಿನ್ನ ರೀತಿಯ ಎಂಡಿಂಗ್ ಇರಲಿದೆಯಂತೆ. ಕೆಲವು ಥಿಯೇಟರ್‌ಗಳಲ್ಲಿ ಒಂದು ರೀತಿಯ ಎಂಡಿಂಗ್ ಇರುವ ಯುಐ ಸಿನಿಮಾ, ಮತ್ತೊಂದಿಷ್ಟು ಥಿಯೇಟರ್‌ಗಳಲ್ಲಿ ಬೇರೆ ರೀತಿಯ ಎಂಡಿಂಗ್ ಇರುವ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯೂ ಇದೆಯಂತೆ.
ಜನರು ಒಂದು ಥಿಯೇಟರ್‌ನಲ್ಲಿ ಈ ಸಿನಿಮಾ ನೋಡುತ್ತಾರೆ. ಸಿನಿಮಾದ ಇನ್ನೊಂದು ರೀತಿಯ ಎಂಡಿಂಗ್ ಇದೆಯಂತೆ ಎಂಬ ಚರ್ಚೆ ಶುರುವಾಗುತ್ತದೆ. ಈ ಸಿನಿಮಾದ ವಿಷಯದ ಚರ್ಚೆ ಶುರುವಾದ ಬಳಿಕ ಜನರಲ್ಲಿ ಇನ್ನೊಂದು ಎಂಡಿಂಗ್ ಬಗ್ಗೆಯೂ ಕುತೂಹಲ ಮೂಡುವಂತೆ ಆಗಲು ಈ ರೀತಿ ಮಾಡಿರಬಹುದು ಎನ್ನಲಾಗುತ್ತದೆ. ಈ ರೀತಿ ಒಂದೇ ಸಿನಿಮಾವನ್ನು ಎರಡು ಬಾರಿ ನೋಡುವಂತೆಯೂ ಮಾಡಬಹುದು. ಸದ್ಯ ಈ ರೀತಿ ಇದೆಯೋ ಇಲ್ವೋ ಎಂದು ಉಪೇಂದ್ರ ಮತ್ತು ಚಿತ್ರತಂಡದ ಸೀಮಿತ ಜನರಿಗೆ ತಿಳಿದಿದೆ. ಉಪ್ಪಿ ಅಭಿಮಾನಿಗಳು ಈ ರೀತಿಯ ಡಬಲ್ ಎಂಡಿಂಗ್ ಇರುತ್ತದೆಯೋ ಎಂದು ತಿಳಿಯಲು ಡಿಸೆಂಬರ್ 20ರವರೆಗೆ ಕಾಯಬೇಕಿರುವುದು ಅನಿವಾರ್ಯ.